ಹಲಗೂರು:

ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ವಿವಿಧ ಇಲಾಖೆ ಸಚಿವರಾಗಿ ಆಯ್ಕೆಯಾದ ವಿದ್ಯಾರ್ಥಿಗಳು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಸೋಮಣ್ಣ ಕರೆ ನೀಡಿದರು.

ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನಡೆದ ಸಂಸತ್ ಚುನಾವಣೆಯಲ್ಲಿ ಆಯ್ಕೆಯಾದ ಅವರಿಗೆ ಪ್ರಮಾಣ ವಚನ ಬೋಧನೆ ಕಾರ್ಯಕ್ರಮದಲ್ಲಿ ಬಿ.ಸಿ.ಶಿವಲಿಂಗೇಗೌಡ ಮುಖ್ಯಮಂತ್ರಿಯಾಗಿ, ಬಿ.ಜಿ.ವಿನು ಉಪಮುಖ್ಯಮಂತ್ರಿಯಾಗಿ ಹಾಗೂ ಸಚಿವರಾಗಿ ಆಯ್ಕೆಯಾಗಿರುವ ಎಲ್ಲಾ ವಿದ್ಯಾರ್ಥಿಗಳು ತಮ್ಮ ಸ್ಥಾನಗಳು, ಕಾರ್ಯಕಲಾಪಗಳಘನತೆಯನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದರು.

ಪ್ರಾಧ್ಯಾಪಕರು, ಶಿಕ್ಷಕರು, ಪ್ರಾಂಶುಪಾಲರಾಗಲಿ ಸಚಿವರ ಹಕ್ಕುಗಳನ್ನು ಹತ್ತಿಕ್ಕುವುದಾಗಲಿ ಮಾಡಬಾರದು, ಹಾಗೆ ಮಾಡಿದರೆ ಅವರು ನೀಡುವ ಕೊಡುಗೆಗಳನ್ನು ಕರ್ತವ್ಯಗಳನ್ನು ನಿರ್ವಹಿಸುವುದನ್ನು ಬಿಡುತ್ತಾರೆ. ಅವರು ಕಾರ್ಯನಿರ್ವಹಿಸಲು ಉತ್ಸಾಹದಿಂದ ಬಂದಾಗ ಪ್ರೋತ್ಸಾಹಿಸಬೇಕು ಬೆಲೆ ಕೊಡಬೇಕು ಎಂದರು.

ವಿದ್ಯಾರ್ಥಿಗಳು ಗುರುತಿನ ಚೀಟಿಗಳನ್ನು ಹಿಡಿದುಕೊಂಡು ಸರದಿ ಸಾಲಿನಲ್ಲಿ ನಿಂತು ತಮ್ಮ ನೆಚ್ಚಿನ ನಾಯಕರನ್ನು ಆಯ್ಕೆ ಮಾಡಲು ಭಾರಿ ಉತ್ಸಾಹದಿಂದ ಮತ ಚಲಾಯಿಸಿದರು. ಭರತ್ ರಾಜ್ ರಾಜ್ಯಪಾಲರಾಗಿ ಕರ್ತವ್ಯ ನಿರ್ವಹಿಸಿದರು. ಶಿಕ್ಷಕ ಪುಟ್ಟಸ್ವಾಮಿ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು.


ಆಯ್ಕೆಯಾದ ವಿದ್ಯಾರ್ಥಿಗಳು ತಮ್ಮ ತಂದೆ ತಾಯಿ ಹೆಸರಿನಲ್ಲಿ ದೇವರ ಹೆಸರಿನಲ್ಲಿ ಹಾಗೂ ಗುರುಗಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ವೇಳೆ ಉಪ ಪ್ರಾಂಶುಪಾಲೆ ಅನುರಾಧ, ಶಿಕ್ಷಕರಾದ ಎನ್.ಎಂ.ಪುಟ್ಟಸ್ವಾಮಿ, ಬಿ.ಕೆ.ಕರಿಯಪ್ಪ, ಕಿರಣ್ ಕುಮಾರ್, ಬಿ.ಕೆ.ಕೆಂಪು, ಧನರಾಜ, ಶ್ರೀನಿವಾಸ ಸೇರಿದಂತೆ ಇತರರು ಇದ್ದರು.

ಅನಧಿಕೃತ ಶಾಲೆಗಳಿಗೆ ಮಕ್ಕಳನ್ನು ದಾಖಲಿಸದಂತೆ ಬಿಇಒ ಎಚ್ಚರಿಕೆ

ಮದ್ದೂರು: ತಾಲೂಕಿನಲ್ಲಿ ಶಿಕ್ಷಣ ಇಲಾಖೆ ನೀಡಲಾದ ಲಿಖಿತ ಸೂಚನೆ ಧಿಕ್ಕರಿಸಿ ಅನಧಿಕೃತವಾಗಿ ಶಾಲೆಗಳನ್ನು ನಡೆಸುತ್ತಿರುವ ಶಾಲೆಗಳಿಗೆ ಪೋಷಕರು ತಮ್ಮ ಮಕ್ಕಳನ್ನು ದಾಖಲು ಮಾಡದಂತೆ ಬಿಇಒ ಎಸ್.ಬಿ.ಧನಂಜಯ ಎಚ್ಚರಿಕೆ ನೀಡಿದ್ದಾರೆ.ಪಟ್ಟಣದ ಲೀಲಾವತಿ ಬಡಾವಣೆಯ ಬೃಂದಾವನ ಕಿಡ್ಸ್ ವರ್ಡ್, ತಾಲೂಕಿನ ಅರವನಹಳ್ಳಿ ಗೇಟ್ ಜ್ಯೋತಿ ಪಬ್ಲಿಕ್ ಸ್ಕೂಲ್, ಬೆಸಗರಹಳ್ಳಿ ಪುಣ್ಯಕೋಟಿ ಲರ್ನಿಂಗ್ ಸೆಂಟರ್, ಕದಲೂರು ಗ್ರಾಮದ ಮಡಿಲು ಪೂರ್ವ ಪ್ರಾಥಮಿಕ ಶಾಲೆ ಹಾಗೂ ಇಲಾಖೆ ನೋಂದಣಿ ಹಿಂಪಡೆದಿರುವ ತೊರೆಶೆಟ್ಟಿಹಳ್ಳಿಯ ಇಂಡಿಯನ್ ಪಬ್ಲಿಕ್ ಸ್ಕೂಲ್‌ಗಳು ಅನುಮತಿ ರಹಿತ ಅನಧಿಕೃತ ಶಾಲೆಗಳಾಗಿವೆ ಎಂದು ತಿಳಿಸಿದ್ದಾರೆ. ಈ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳ ಶೈಕ್ಷಣಿಕ ದಾಖಲೆಗಳು ಮಾನ್ಯವಾಗುವುದಿಲ್ಲ. ಪೋಷಕರು ಶಾಲೆಗಳ ನೋಂದಣಿ ಆದೇಶವನ್ನು ಪರಿಶೀಲನೆ ಮಾಡಿದ ನಂತರ ತಮ್ಮ ಮಕ್ಕಳನ್ನು ಶಾಲೆಗಳಿಗೆ ದಾಖಲು ಮಾಡುವಂತೆ ಧನಂಜಯ ಮನವಿ ಮಾಡಿದ್ದಾರೆ.