ಮಾರ್ಚ್ 2ರಂದು ಹಾವೇರಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ ಚುನಾವಣೆ

| Published : Feb 28 2025, 12:47 AM IST

ಮಾರ್ಚ್ 2ರಂದು ಹಾವೇರಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ ಚುನಾವಣೆ
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ಹಾಲು ಒಕ್ಕೂಟ ರಚನೆಗೊಂಡು ಮೂರು ವರ್ಷಗಳು ಕಳೆಯುತ್ತಿದ್ದು, ಇದೀಗ ಮೊದಲ ಬಾರಿಗೆ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.

ಹಾವೇರಿ: ಧಾರವಾಡ ಹಾಲು ಒಕ್ಕೂಟದಿಂದ ಪ್ರತ್ಯೇಕಗೊಂಡ ಹಾವೇರಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ (ಹಾವೇಮುಲ್) ಮೊದಲ ಬಾರಿಗೆ ಮಾ. 2ರಂದು ಚುನಾವಣೆ ನಡೆಯಲಿದೆ. 8 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಪಕ್ಷಗಳ ಬೆಂಬಲ ಪಡೆದು ಅರ್ಹ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಭಾರಿ ಕಸರತ್ತು ನಡೆಸುತ್ತಿದ್ದಾರೆ.

ಹಾವೇರಿ ಹಾಲು ಒಕ್ಕೂಟ ರಚನೆಗೊಂಡು ಮೂರು ವರ್ಷಗಳು ಕಳೆಯುತ್ತಿದ್ದು, ಇದೀಗ ಮೊದಲ ಬಾರಿಗೆ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಧಾರವಾಡ ಹಾಲು ಒಕ್ಕೂಟದಿಂದ ಪ್ರತ್ಯೇಕಗೊಂಡು ಜಿಲ್ಲೆಗೆ ಪ್ರತ್ಯೇಕ ಒಕ್ಕೂಟ ರಚನೆಯಾದರೂ ವಿವಿಧ ಕಾರಣಗಳಿಂದ ಚುನಾವಣೆ ವಿಳಂಬವಾಗಿತ್ತು. ಈಗಾಗಲೇ ಚುನಾವಣಾ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಪ್ರತಿ ತಾಲೂಕಿಗೆ ಒಂದರಂತೆ ಒಟ್ಟು 8 ನಿರ್ದೇಶಕ ಸ್ಥಾನಗಳಿಗೆ ಅರ್ಹ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

8 ನಿರ್ದೇಶಕ ಸ್ಥಾನ: ತಾಲೂಕಿಗೆ ಒಬ್ಬರಂತೆ ಜಿಲ್ಲೆಯ ಎಂಟು ತಾಲೂಕಿಗೆ 8 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 381 ಮತದಾರರಿದ್ದಾರೆ. ರಾಣಿಬೆನ್ನೂರು ತಾಲೂಕಿನಲ್ಲಿ ಅತಿಹೆಚ್ಚು 59 ಮತದಾರರಿದ್ದರೆ, ಹಾನಗಲ್ಲ ತಾಲೂಕಿನಲ್ಲಿ 57 ಮತದಾರರಿದ್ದಾರೆ. ಸವಣೂರು 36, ಹಾವೇರಿ 51, ಶಿಗ್ಗಾಂವಿ 38, ರಟ್ಟೀಹಳ್ಳಿ 45, ಹಿರೇಕೆರೂರು 51 ಹಾಗೂ ಬ್ಯಾಡಗಿ ತಾಲೂಕಿನಲ್ಲಿ 38 ಮತದಾರರಿದ್ದಾರೆ. ಪ್ರತಿ ಹಾಲು ಉತ್ಪಾದಕರ ಸಂಘಕ್ಕೆ ಒಂದು ಮತಕ್ಕೆ ಅವಕಾಶವಿದ್ದು, ಈಗಾಗಲೇ ಸ್ಪರ್ಧಿಸಲು ಮತ್ತು ಮತದಾನಕ್ಕೆ ಆಯಾ ಸಂಘಗಳು ಡೆಲಿಗೇಟ್ ಸಲ್ಲಿಸಿವೆ. ಇದರ ಆಧಾರದ ಮೇಲೆ ಈಗಾಗಲೇ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದೆ.

ಮಾ. 2ಕ್ಕೆ ಚುನಾವಣೆ: ಚುನಾವಣೆ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಾ. 2ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಹಾವೇರಿ ಮೈಲಾರ ಮಹದೇವಪ್ಪ ವೃತ್ತದ ಬಳಿಯಿರುವ ನಂ. 2 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆಯಲ್ಲಿ ಮತದಾನ ನಡೆಯಲಿದೆ. ಫೆ. 17ರಿಂದ 22ರ ವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆದಿದ್ದು, ನಾಮಪತ್ರ ಪರಿಶೀಲನೆಯೂ ಮುಗಿದಿದೆ. ಅಭ್ಯರ್ಥಿಗಳಿಗೆ ಚಿಹ್ನೆಯನ್ನು ಹಂಚಿಕೆ ಮಾಡಲಾಗಿದ್ದು, ಮಾ. 2ರಂದು ಮತದಾನ ನಡೆಯಲಿದೆ. ಅದೇ ದಿನ ಮತ ಎಣಿಕೆ ಹಾಗೂ ಫಲಿತಾಂಶ ಘೋಷಣೆಯೂ ಆಗಲಿದೆ.

8 ಸ್ಥಾನಗಳಿಗೆ 20 ಜನರ ಪೈಪೋಟಿ: ಹಾವೇರಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಮತಕ್ಷೇತ್ರದಿಂದ ಬಸವರಾಜ ಅರಬಗೊಂಡ ಮತ್ತು ಬಸವೇಶಗೌಡ ಪಾಟೀಲ ಸ್ಪರ್ಧಿಸಿದ್ದಾರೆ. ಹಿರೇಕೆರೂರು ಕ್ಷೇತ್ರದಿಂದ ಉಜ್ಜನಗೌಡ ಮಾವಿನತೋಪ ಹಾಗೂ ಶಿವಯೋಗೆಪ್ಪ ಕೆರೂಡಿ ಕಣಕ್ಕಿಳಿದಿದ್ದಾರೆ. ರಾಣಿಬೆನ್ನೂರು ಕ್ಷೇತ್ರದಿಂದ ಮಂಜನಗೌಡ ಪಾಟೀಲ ಹಾಗೂ ಸಿದ್ದಲಿಂಗಪ್ಪ ಮರಿನಾಗಮ್ಮನವರ ಸ್ಪರ್ಧಿಸಿದ್ದಾರೆ.

ಬ್ಯಾಡಗಿ ಕ್ಷೇತ್ರದಿಂದ ಕುಮಾರ ವಿರೂಪಾಕ್ಷಪ್ಪ ಚೂರಿ, ಚನ್ನಬಸಪ್ಪ ಬ್ಯಾಡಗಿ ಮತ್ತು ಪ್ರಕಾಶ ಬನ್ನಿಹಟ್ಟಿ ಸ್ಪರ್ಧಿಸಿದ್ದಾರೆ. ರಟ್ಟೀಹಳ್ಳಿ ಕ್ಷೇತ್ರದಿಂದ ಅಶೋಕ ಪಾಟೀಲ, ಮೃತ್ಯುಂಜಯ ಮಾರವಳ್ಳಿ ಮತ್ತು ಹನುಮಂತಗೌಡ ಭರಮಣ್ಣನವರ ಪೈಪೋಟಿ ನಡೆಸಿದ್ದಾರೆ. ಸವಣೂರು ಕ್ಷೇತ್ರದಿಂದ ಬಸವರಡ್ಡಿ ರಡ್ಡೇರ ಹಾಗೂ ಶಶಿಧರ ಯಲಿಗಾರ ಸ್ಪರ್ಧಿಸಿದ್ದಾರೆ. ಶಿಗ್ಗಾಂವಿ ಕ್ಷೇತ್ರಕ್ಕೆ ತಿಪ್ಪಣ್ಣ ಸಾತಣ್ಣನವರ, ದೇವೇಂದ್ರಪ್ಪ ಜಾಧವ, ಪಾಲಾಕ್ಷಪ್ಪ ಹಾವಣಗಿ ಕಣದಲ್ಲಿದ್ದಾರೆ. ಹಾನಗಲ್ಲ ಕ್ಷೇತ್ರದಿಂದ ಚಂದ್ರಪ್ಪ ಜಾಲಗಾರ, ವಡಕಪ್ಪ ದೊಡ್ಡಮನಿ ಹಾಗೂ ಶಿವಲಿಂಗಪ್ಪ ತಲ್ಲೂರ ಸ್ಪರ್ಧಿಸಿದ್ದಾರೆ.

ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವುದರಿಂದ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಪಕ್ಷದ ಬೆಂಬಲ ಪಡೆದು ಹಾವೇಮುಲ್ ಹಿಡಿತ ತೆಗೆದುಕೊಳ್ಳುವ ಪ್ರಯತ್ನ ನಡೆದಿದೆ. ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್‌ ಹಾವೇಮುಲ್‌ ಚುಕ್ಕಾಣಿ ಹಿಡಿಯಲು ತನ್ನ ಬೆಂಬಲಿಗರನ್ನು ಕಣಕ್ಕಿಳಿಸಿದೆ. ಅದೇ ರೀತಿ ಬಿಜೆಪಿ ಮುಖಂಡರು ಕೂಡ ಸಭೆ ನಡೆಸಿ ಸರ್ವಾನುಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 8 ಸ್ಥಾನಗಳಲ್ಲಿ 5 ಸ್ಥಾನ ಗೆದ್ದವರು ಅಧಿಕಾರಕ್ಕೇರಲಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ನಿರ್ದೇಶಕರು ಆಯ್ಕೆ ಮಾಡಲಿದ್ದಾರೆ.

ಧಾರವಾಡ ಒಕ್ಕೂಟದಲ್ಲಿ ಹಾಗೂ ಪ್ರತ್ಯೇಕ ಹಾವೇರಿ ಒಕ್ಕೂಟದಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಬಸವರಾಜ ಅರಬಗೊಂಡ ಅವರು ಮತ್ತೊಮ್ಮೆ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಹಾವೇಮುಲ್‌ ಮುನ್ನಡೆಸಬೇಕು ಎಂಬ ಆಕಾಂಕ್ಷೆಯಲ್ಲಿ ಅವರಿದ್ದಾರೆ. ಆದರೆ, ಈ ಸಲ ಅವರು ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾದರೂ ಅಧ್ಯಕ್ಷ ಗಾದಿಗೇರುವುದು ಸುಲಭವಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಕಾಂಗ್ರೆಸ್‌ ಬೆಂಬಲಿತರು ಹಾವೇಮುಲ್‌ ವಶಪಡಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದ್ದಾರೆ. ಆದ್ದರಿಂದ ಹಾಲು ಒಕ್ಕೂಟದ ಚುನಾವಣಾ ತುರುಸು ದಿನದಿಂದ ದಿನಕ್ಕೆ ಏರುತ್ತಿದ್ದು, ಮತದಾರರ ನಿಲುವು ಏನು ಎಂಬುದು ಕುತೂಹಲ ಕೆರಳಿಸಿದೆ.