ಸಾರಾಂಶ
ಕನ್ನಡಪ್ರಭ ವಾರ್ತೆ ಚವಡಾಪುರ
ಯುವ ಜನಾಂಗ ಆಧುನಿಕತೆಯ ಭರಾಟೆಗೆ ಜೋತು ಬಿದ್ದು ಬದುಕು ಹಾಳು ಮಾಡಿಕೊಳ್ಳುವುದನ್ನು ಬಿಡಬೇಕು. ಮೊಬೈಲ್‌ಗಳಲ್ಲಿ ಆನ್‌ಲೈನ್ ಆಟಗಳನ್ನು ಬಿಟ್ಟು ಕಬ್ಬಡ್ಡಿ, ಖೋಖೋ, ಕುಸ್ತಿಗಳಂತಹ ದೇಶಿ ಕ್ರೀಡೆಗಳತ್ತ ಹೆಚ್ಚು ಒಲವು ತೋರಿಸಿ ಆಸಕ್ತಿ ಬೆಳೆಸಿಕೊಳ್ಳಿ ಎಂದು ಡಾ. ಅಭಿನವ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ಹೇಳಿದರು.ಅಫಜಲ್ಪುರ ತಾಲೂಕಿನ ಸುಕ್ಷೇತ್ರ ಬಡದಾಳದ ಶ್ರೀಗುರು ಚನ್ನಮಲ್ಲೇಶ್ವರರ ಜಾತ್ರೆ ನಿಮಿತ್ತ ನಡೆದ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೆಲವು ವರ್ಷಗಳ ಹಿಂದೆ ಕುಸ್ತಿ ಪಂದ್ಯಾಟಕ್ಕೆ ಭಾರಿ ಬೆಲೆ ಇತ್ತು. ಪ್ರತಿ ಗ್ರಾಮಗಳಲ್ಲಿ ಕುಸ್ತಿ ಪಂದ್ಯಕ್ಕಾಗಿ ಪಟುಗಳನ್ನು ಸಿದ್ಧಪಡಿಸಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಎಲ್ಲೋ ಒಂದು ಕಡೆ ಕುಸ್ತಿ ಪಟುಗಳು ಕುಸ್ತಿ ಕ್ರೀಡೆಗಾಗಿ ತಯಾರಾಗುವಂತಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಕುಸ್ತಿ, ಕಬಡ್ಡಿಗಳು ಇಂದು ಕೇವಲ ದೇಶಿ ಕ್ರೀಡೆಗಳಾಗಿ ಉಳಿದಿಲ್ಲ ಬದಲಾಗಿ ಜಾಗತಿಕ ಕ್ರೀಡೆಗಳಾಗಿ ಬೆಳೆದು ನಿಂತಿವೆ. ಹೀಗಾಗಿ ಯುವ ಸಮೂಹ ಹಣ, ನೆಮ್ಮದಿ ಹಾಳು ಮಾಡುವ ಆನ್‌ಲೈನ್ ಗೆಮಿಂಗ್‌ಗಳಿಂದ ವಿಮುಖರಾಗಿ ದೇಶಿ ಕ್ರೀಡೆಗಳಲ್ಲಿ ತೊಡಗಿಕೊಂಡು ನಾಡಿಗೆ ಕೀರ್ತಿ ತರುವ ಕೆಲಸ ಮಾಡಬೇಕು ಎಂದ ಅವರು ಗ್ರಾಮೀಣ ಭಾಗಗಳಲ್ಲಿ ನಡೆಯುವ ಜಾತ್ರೆ, ಹಬ್ಬ ಹರಿದಿನಗಳಲ್ಲಿ ನಡೆಯುವ ಕುಸ್ತಿ ಪಂದ್ಯಾಟಗಳಲ್ಲಿ ಹೆಚ್ಚಿನವರು ಭಾಗಿಯಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಯಾರೇ ಆಗಲಿ ಸೋಲು-ಗೆಲುವು ಸಮಾನವಾಗಿ ಸ್ವಿಕರಿಸಿ ಗೆದ್ದವರು ಮುಂದಿನ ಹಂತಗಳ ಬಗ್ಗೆ ಯೋಚಿಸಿ, ಸೋತವರು ಇನ್ನೊಮ್ಮೆ ಗೆಲುವಿಗಾಗಿ ಪ್ರಯತ್ನಿಸಿ ಎಂದು ಸಲಹೆ ನೀಡಿದರು.
ಹಿರಿಯ ಕುಸ್ತಿ ಪಟು ಗುಂಡಪ್ಪ ಮಂಗಳೂರ ಮಾತನಾಡಿ, ಇಳಿ ವಯಸ್ಸಿನಲ್ಲೂ ನನಗೆ ಈ ಕ್ರೀಡೆಯ ಮೇಲಿನ ಆಸೆ ಹೋಗಿಲ್ಲ, ಉತ್ಸಾಹ ಕಮ್ಮಿಯಾಗಿಲ್ಲ. ಆದರೆ, ಪ್ರತಿ ವರ್ಷದ ಜಾತ್ರೆಯಲ್ಲಿ ನಡೆಯುವ ಕುಸ್ತಿ ಪಂದ್ಯಾಟದಲ್ಲಿ ನನ್ನ ಜೊತೆಯಾಗಿ ಕುಸ್ತಿ ಆಡುತ್ತಿದ್ದ ಆತ್ಮೀಯ ಗೆಳೆಯ ಗೇಮಸಿಂಗ್ ಬಡದಾಳ ತಾಂಡಾ ಭೀಮಾ ನದಿಯಲ್ಲಿ ಕಾಲು ಜಾರಿ ಬಿದ್ದು ಮೃತ ಪಟ್ಟಿದ್ದಾನೆ. ಜಾತ್ರೆ ಬಂದಾಗಲೊಮ್ಮೆ ಗೆಳೆಯ ನೆನಪಾಗುತ್ತಾನೆ. ಅವನ ನೆನಪಿಗಾಗಿ ಕುಸ್ತಿ ಕಣದಲ್ಲಿ ಬಂದು ಯುವಕರನ್ನು ಹುರಿದುಂಬಿಸುವ ಮತ್ತು ಗೆಳೆಯನನ್ನು ನೆನೆಸಿ ಸ್ವಲ್ಪ ಕಸರತ್ತು ಮಾಡುತ್ತಿದ್ದೇನೆ. ಯುವಕರು ದುಶ್ಚಟಗಳಿಗೆ ದಾಸರಾಗಿ ಬದುಕು ಹಾಳು ಮಾಡಿಕೊಳ್ಳುವ ಬದಲಾಗಿ ಸದ್ಗುಗಳನ್ನು ಕಲಿತು ಇಂತ ಕ್ರೀಡೆಗಳಲ್ಲಿ ತೊಡಗಿಕೊಲ್ಳುವುದರಿಂದ ಬದುಕು ಬಂಗಾರವಾಗಲಿದೆ ಎಂದು ಗೆಳೆಯನ ನೆನೆದು ಕಣ್ಣಿರಾದರು.ಬೆಳಗಾವಿ, ಕೊಲ್ಹಾಪುರ, ಸೊಲ್ಲಾಪುರ ಸೇರಿದಂತೆ ಕಲಬುರಗಿ ಜಿಲ್ಲೆಯ ಬೇರೆ ಭಾಗಗಳಿಂದ ಬಂದ ಕುಸ್ತಿ ಪಟುಗಳು ಕುಸ್ತಿ ಪಂದ್ಯಗಳನ್ನಾಡಿ ಬಹುಮಾನಗಳನ್ನು ಗೆದ್ದರು. ಕೊನೆಯ ಖಡೆ ಕುಸ್ತಿ ಗೆದ್ದವರಿಗೆ ಬೆಳ್ಳಿ ಖಡಗ ತೊಡಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀಕಾಂತ ನಿಂಬಾಳ, ಮಲ್ಲಿನಾಥ ಅತನೂರೆ, ಸುಭಾಷ ಪೊಲೀಸಪಾಟೀಲ್, ಪರಮೇಶ್ವರ ಶಿರೂರ, ರಾಯಪ್ಪ ಮಾತಾರಿ, ಗೋರಖನಾಥ ಮಳಗಿ, ಅರವಿಂದ ಖೈರಾಟ, ಶ್ರೀಶೈಲ್ ಪಾಟೀಲ, ಟಾಕಣ್ಣ ಕಲ್ಲೂರ, ಚಂದ್ರಶೇಖರ ಜಮಾದಾರ, ಅಮೃತ ಮೇತ್ರೆ, ಅಮೋಘಿ ಬಸ್ತಾಳ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿ ಕುಸ್ತಿ ಕ್ರೀಡಾ ಪ್ರೇಮಿಗಳು ಇದ್ದರು. ಅಹಿತಕರ ಘಟನೆಗಳು ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.