ಶಕ್ತಿಯೋಜನೆಯಿಂದ ಸಾರಿಗೆ ಸಂಸ್ಥೆಗಳಿಗೆ ಚೈತನ್ಯ: ಸಂಸದ ಡಿಕೆ ಸುರೇಶ್

| Published : Feb 13 2024, 12:45 AM IST

ಶಕ್ತಿಯೋಜನೆಯಿಂದ ಸಾರಿಗೆ ಸಂಸ್ಥೆಗಳಿಗೆ ಚೈತನ್ಯ: ಸಂಸದ ಡಿಕೆ ಸುರೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಶಕ್ತಿ ಯೋಜನೆ ಜಾರಿಗೆ ಬಂದನಂತರ ಕೆಎಸ್ಆರ್ ಟಿಸಿ ಸಂಸ್ಥೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದಲ್ಲಿಯೇ ಆತಂಕ ಮೂಡಿತ್ತು. ನಮಗೆ ಸಂಬಳ ಕೊಡುತ್ತಾರೆಯೇ ಎನ್ನುವ ಮಾತುಗಳು ಓಡಾಡುತ್ತಿದ್ದವು. ಈ ಮಾತುಗಳನ್ನು ಕಾಂಗ್ರೆಸ್ ಸರ್ಕಾರ ಸುಳ್ಳಾಗಿಸಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ಕಳೆದ 5 ವರ್ಷಗಳಲ್ಲಿ ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ಮುಳುಗಿ ಹೋಗುತ್ತವೆ. ಸಂಬಳ ಕೊಡಲಾಗದ ಸ್ಥಿತಿ ಬರಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆ ಮೂಲಕ ಎರಡೂ ಸಂಸ್ಥೆಗಳಿಗೂ ಚೈತನ್ಯ ತುಂಬಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಹೊಸ ವಿನ್ಯಾಸದ ಕರ್ನಾಟಕ ಸಾರಿಗೆ ಅಶ್ವಮೇಧ ಕ್ಲಾಸಿಕ್ ಬಸ್ಸುಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಶಕ್ತಿ ಯೋಜನೆ ಜಾರಿಗೆ ಬಂದನಂತರ ಕೆಎಸ್ಆರ್ ಟಿಸಿ ಸಂಸ್ಥೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದಲ್ಲಿಯೇ ಆತಂಕ ಮೂಡಿತ್ತು. ನಮಗೆ ಸಂಬಳ ಕೊಡುತ್ತಾರೆಯೇ ಎನ್ನುವ ಮಾತುಗಳು ಓಡಾಡುತ್ತಿದ್ದವು. ಈ ಮಾತುಗಳನ್ನು ಕಾಂಗ್ರೆಸ್ ಸರ್ಕಾರ ಸುಳ್ಳಾಗಿಸಿದೆ ಎಂದರು.

ಸಂಬಳ ಪಾವತಿಸಿ ಎಂದು ಚಾಲಕರು ಮತ್ತು ಸಿಬ್ಬಂದಿ ವರ್ಗ ಧರಣಿ ಕುಳಿತುಕೊಂಡ ದಿನಗಳನ್ನೂ ಈ ಹಿಂದೆ ನೋಡಬೇಕಾಯಿತು. ಆದರೀಗ, ಕೆಎಸ್ಆರ್‌ಟಿಸಿ, ಬಿಎಂಟಿಸಿ ಸಂಸ್ಥೆಗಳನ್ನು ಕಾಂಗ್ರೆಸ್ ಸರ್ಕಾರ ಉಳಿಸುತ್ತಿದೆ. ಮಹಿಳೆಯರಿಗಾಗಿ ʼಶಕ್ತಿ ಯೋಜನೆʼಯನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದೆ.

ಸರ್ಕಾರ 3,250 ಕೋಟಿ ಹಣವನ್ನು ಶಕ್ತಿ ಯೋಜನೆಗೆ ಮೀಸಲಿಟ್ಟಿದೆ. ಯೋಜನೆ ಪ್ರಾರಂಭವಾಗಿ ಸುಮಾರು 9 ತಿಂಗಳಾಗಿದ್ದು ರಾಜ್ಯದ ಮಹಿಳೆಯರು 150 ಕೋಟಿ ಟ್ರಿಪ್ ಪ್ರಯಾಣ ಮಾಡಿದ್ದಾರೆ. ಇಡೀ ದೇಶದಲ್ಲಿಯೇ ಇದೊಂದು ಮಾದರಿ ಯೋಜನೆಯಾಗಿದೆ.

ತಮಿಳುನಾಡಿನಲ್ಲಿ ಕೇವಲ 50 ಕಿಮೀ ನಷ್ಟು ಮಾತ್ರ ಉಚಿತವಾಗಿ ಬಸ್ಸಿನಲ್ಲಿ ಓಡಾಡಲು ಅವಕಾಶ ಮಾಡಿಕೊಟ್ಟರು. ಕಾಂಗ್ರೆಸ್ ಸರ್ಕಾರ ರಾಜ್ಯದ ಪ್ರತಿ ಮೂಲೆಗೂ ಉಚಿತವಾಗಿ ಪ್ರಯಾಣ ಮಾಡುವ ವ್ಯವಸ್ಥೆ ಮಾಡಿಕೊಟ್ಟಿದೆ ಎಂದರು.

ಕುದೂರಿನಲ್ಲಿ ಬಸ್ ಡಿಪೋಗೆ ಮನವಿ

ಬಸ್ ಗಳ ಬೇಡಿಕೆ ಹೆಚ್ಚಾಗುತ್ತಿದ್ದು, ಸುಮಾರು 5,600 ಕ್ಕೂ ಹೆಚ್ಚು ಬಸ್ ಗಳನ್ನು ಖರೀದಿಸುವ ಆಲೋಚನೆ ಮಾಡಲಾಗಿದೆ. ಕೆಎಸ್ಆರ್ ಟಿಸಿಗೆ ಸುಮಾರು 1 ಸಾವಿರ ಬಸ್ ಗಳನ್ನು ಖರೀದಿಸಲಾಗಿದೆ. ಸಚಿವ ರಾಮಲಿಂಗಾರೆಡ್ಡಿಯವರು, ಕೆಎಸ್ಆರ್ ಟಿಸಿ ಅಧ್ಯಕ್ಷ ಶ್ರೀನಿವಾಸ್ ರವರು ಮೊದಲನೇ ಕಂತಿನಲ್ಲಿ 25 ಬಸ್ ಗಳನ್ನು ರಾಮನಗರ ಜಿಲ್ಲೆಗೆ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ರಾಮನಗರ ಗ್ರಾಮಾಂತರ ಭಾಗಕ್ಕೆ ಬೇಕಾದ ಬಸ್ ಗಳನ್ನು ನೀಡಬೇಕಾಗಿ ಮನವಿ ಸಲ್ಲಿಸಿದ್ದೇನೆ. ಕುದೂರು ಭಾಗಕ್ಕೆ ಕೆಎಸ್ಆರ್ ಟಿಸಿ ಡಿಪೋ ನೀಡಬೇಕಾಗಿ ನಾನು ಮತ್ತು ಶಾಸಕ ಬಾಲಕೃಷ್ಣ ಅವರು ಮನವಿ ನೀಡಿದ್ದು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವರಾದ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ರಾಮನಗರವನ್ನು ಮಾದರಿ ಜಿಲ್ಲೆಯನ್ನಾಗಿ ರೂಪಿಸುವ ಸಂಕಲ್ಪವನ್ನು ಜಿಲ್ಲೆಯ ಪಕ್ಷದ ಜನಪ್ರತಿನಿಧಿಗಳು ಮಾಡಿದ್ದೇವೆ ಎಂದು ಸುರೇಶ್ ತಿಳಿಸಿದರು.

ಶಕ್ತಿ ಯೋಜನೆಯಿಂದ 25 ಲಕ್ಷ ಪ್ರಯಾಣಿಕರ ಹೆಚ್ಚಳ: ರೆಡ್ಡಿ

ಶಕ್ತಿ ಯೋಜನೆ ಪ್ರಾರಂಭಿಸಿದ ಬಳಿಕ ನಿತ್ಯ 25 ಲಕ್ಷ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದ್ದು, 151 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಹೆಚ್ಚುವರಿ ಬಸ್ಸುಗಳ ಅಗತ್ಯವಿದ್ದ ಕಾರಣ 1 ಸಾವಿರ ಬಸ್ ಗಳನ್ನು ಖರೀದಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಹೊಸ ವಿನ್ಯಾಸದ ಕರ್ನಾಟಕ ಸಾರಿಗೆ ಅಶ್ವಮೇಧ ಕ್ಲಾಸಿಕ್ ಬಸ್ಸುಗಳ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಾಜಿ ಮುಖ್ಯಮಂತ್ರಿಯೊಬ್ಬರು ಉಚಿತವಾಗಿ ನೀಡಿದರೆ ಸಂಬಳ ನೀಡಲು ಆಗುವುದಿಲ್ಲ ಎಂದು ಗೇಲಿ ಮಾಡಿದ್ದರು. ಸರ್ಕಾರ ಉಚಿತ ಯೋಜನೆ ಕೊಟ್ಟಿರುವುದಕ್ಕೆ ಹೊಟ್ಟೆ ಉರಿ ಪಡುತ್ತಿದ್ದಾರೆ. 20 ಲಕ್ಷ ಕೋಟಿ ದೊಡ್ಡ ಉದ್ಯಮಿಗಳ ಸಾಲವನ್ನು ಮನ್ನಾ ಮಾಡಿದ್ದಾರೆ. ಇದು ಜನರಿಗೆ ಬಿಟ್ಟಿ ಕೊಟ್ಟಿದ್ದಲ್ಲ, ತೆರಿಗೆ ಹಣದಲ್ಲಿ ಹೆಣ್ಣು ಮಕ್ಕಳಿಗೆ ಅನುಕೂಲವಾಗುವ ಕಾರ್ಯಕ್ರಮವಾಗಿದೆ ಎಂದರು.

ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಟ್ಟು ಬಡವರನ್ನು ಮೇಲೆತ್ತಿದ್ದೇವೆ ಎನ್ನುತ್ತಾರೆ. ಗಾಳಿ ಬೆಳಕಿಗೆ ಬಿಟ್ಟು ಜಿಎಸ್‌ಟಿ ಹಾಕಿದ್ದಾರೆ. ಬೆಲೆಗಳು ಗಗನ ಮುಟ್ಟಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಜನ ಅಳೆದು ತೂಗಿ ನೋಡುತ್ತಾರೆ ಎಂದು ಹೇಳಿದರು.

ರಾಮನಗರ ಜಿಲ್ಲೆಗೆ 25 ಬಸ್ ಗಳನ್ನು ನೀಡಲಾಗಿದೆ. ಅವಶ್ಯಕತೆಗೆ ತಕ್ಕಂತೆ ಬಸ್ ನೀಡುತ್ತೇವೆ. ಮಾಗಡಿ ತಾಲೂಕಿನ ಕುದೂರಿನಲ್ಲಿಯೂ ಸಹ ಹೊಸ ಬಸ್ ಡಿಪೋ ಪ್ರಾರಂಭ ಮಾಡಲಾಗುವುದು ಎಂದು ರಾಮಲಿಂಗಾರೆಡ್ಡಿ ಭರವಸೆ ನೀಡಿದರು.