ಮಡಿಕೇರಿ: ದೇಶದ ಆರ್ಥಿಕ ಪ್ರಗತಿಯಲ್ಲಿ ಉತ್ಪಾದನೆ ಮತ್ತು ರಫ್ತು ವಹಿವಾಟು ಪ್ರಮುಖ ಪಾತ್ರ ವಹಿಸುತ್ತವೆ. ಸ್ಥಳೀಯ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹಾಗೂ ಗುಣಮಟ್ಟದೊಂದಿಗೆ ಉತ್ಪಾದಿಸಿ ವಿದೇಶಗಳಿಗೆ ರಫ್ತು ಮಾಡುವ ಮೂಲಕ ದೇಶದ ಜಿಡಿಪಿ ಮತ್ತು ಆರ್ಥಿಕ ಸಂಪತ್ತನ್ನು ಹೆಚ್ಚಿಸಬೇಕಿದೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕರಾದ ಬಿ.ಆರ್. ಯೋಗೀಶ್ ತಿಳಿಸಿದರು.
ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ನಗರದ ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ‘ಚೇತನ ಚಿಲುಮೆ’ ಸಭಾಂಗಣದಲ್ಲಿ ಜವಳಿ ವಲಯದ ರಫ್ತು ಉದ್ಯಮಿಗಳಿಗಾಗಿ ಶುಕ್ರವಾರ ಆಯೋಜಿಸಿದ್ದ ‘ಜಾಗತಿಕ ಮಾರುಕಟ್ಟೆಗೆ ಜವಳಿ’ ವಿಷಯಾಧಾರಿತ ರಫ್ತು ಪ್ರೋತ್ಸಾಹನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಪ್ರಸ್ತುತ ದೇಶದಿಂದ ಸುಮಾರು 37 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಜವಳಿ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದ್ದು, 2030ರ ವೇಳೆಗೆ ಈ ಪ್ರಮಾಣವನ್ನು 100 ಬಿಲಿಯನ್ ಅಮೆರಿಕನ್ ಡಾಲರ್ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಈ ಗುರಿ ಸಾಧನೆಗಾಗಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಅಗತ್ಯ ಮಾಹಿತಿ ಮತ್ತು ಮಾರ್ಗದರ್ಶನ ನೀಡುವುದರೊಂದಿಗೆ ರಫ್ತು ಸಾಮರ್ಥ್ಯ ಹೊಂದಿರುವ ಜಿಲ್ಲೆಗಳನ್ನು ಗುರುತಿಸಿದೆ ಎಂದು ತಿಳಿಸಿದರು.ಖಾದಿ ಮತ್ತು ಗ್ರಾಮೀಣ ಕೈಗಾರಿಕೆ ಇಲಾಖೆಯ ಉಪ ನಿರ್ದೇಶಕ ಸಿ.ಎನ್.ರಘು ಮಾತನಾಡಿ, ಕೊಡಗಿನಿಂದ ಉತ್ತಮ ಗುಣಮಟ್ಟದ ಕಾಫಿಯನ್ನು ವಿದೇಶಗಳಿಗೆ ರಫ್ತು ಮಾಡುವ ಮೂಲಕ ದೇಶದ ಆರ್ಥಿಕತೆಗೆ ಕೊಡುಗೆ ನೀಡಲಾಗುತ್ತಿದೆ ಎಂದರು.ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ಉಪಾಧ್ಯಕ್ಷ ಹಾಗೂ ಉದ್ಯಮಿ ಅಂಬೇಕಲ್ ನವೀನ್ ಮಾತನಾಡಿ, ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನರು ತೊಡಗಿಸಿಕೊಳ್ಳುವ ಮೂಲಕ ಭವಿಷ್ಯದ ಉದ್ಯಮಿಗಳನ್ನು ರೂಪಿಸಬಹುದು ಎಂದರು.
ಕೊಡುಗೆ ಮುಖ್ಯ: ಉದ್ಯಮಿ ನಂದಕುಮಾರ್ ಮಾತನಾಡಿ, ಸಮಾಜ ನಮಗೆ ಏನು ನೀಡಿದೆ ಎನ್ನುವುದಕ್ಕಿಂತ, ನಾವು ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇವೆ ಎಂಬುದು ಮುಖ್ಯ ಎಂದರು.ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಎಚ್.ಆರ್. ರಾಮಕೃಷ್ಣ ಮಾತನಾಡಿ, ಜಾಗತಿಕ ಮಾರುಕಟ್ಟೆಯಲ್ಲಿ ಜವಳಿ ಉತ್ಪನ್ನಗಳ ರಫ್ತು ವಿಸ್ತರಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಅವರು ರಾಷ್ಟ್ರ ಮಟ್ಟದಲ್ಲಿ ‘ಸ್ಮಿತ್ಆನ್ ಟೆಕ್ಸ್ಟೈಲ್ಸ್ ಫಾರ್ ಗ್ಲೋಬಲ್ ಮಾರ್ಕೆಟ್ ಸ್ಟ್ರಾಟಜಿ ಫಾರ್ ಅಚೀವ್ಮೆಂಟ್ ಯುಎಸ್ಡಿ 100 ಬಿಲಿಯನ್ ಎಕ್ಸ್ಪೋರ್ಟ್ಸ್’ ಕುರಿತು ಸಮಾವೇಶ ಆಯೋಜಿಸಿದ್ದಾರೆ ಎಂದು ತಿಳಿಸಿದರು. ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕ ಬಿ.ಎಸ್.ಸೋಮಶೇಖರ್ ಮಾತನಾಡಿ, ನಮ್ಮಲ್ಲಿರುವ ಉತ್ಪನ್ನಗಳನ್ನು ಹೆಚ್ಚಿನ ಮಟ್ಟದಲ್ಲಿ, ಗುಣಮಟ್ಟದಲ್ಲಿ ಉತ್ಪಾದನೆ ಮಾಡಬೇಕು ಎಂದು ಹೇಳಿದರು.ಇಲಾಖೆಯ ಸಿಬ್ಬಂದಿ ಭಾಗ್ಯ, ದೀಪ್ತಿ ಮತ್ತು ರಶ್ಮಿ ಪ್ರಾರ್ಥಿಸಿದರು. ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕ ಬಿ.ಎಸ್.ಸೋಮಶೇಖರ್ ಸ್ವಾಗತಿಸಿದರು. ನೇಕಾರರಾದ ಮೇಘಾ ನಾಯಕ್ ನಿರೂಪಿಸಿ, ವಂದಿಸಿದರು.
ಜಿಲ್ಲಾ ರಫ್ತು ಕ್ರಿಯಾ ಯೋಜನೆಯ ಪುಸ್ತಕ ಬಿಡುಗಡೆ ಮಾಡಲಾಯಿತು. ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಉದ್ಯಮಿಗಳೊಂದಿಗೆ ಸಂವಾದ ನಡೆಯಿತು.