ಸಾರಾಂಶ
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಒಳಮೀಸಲಾತಿಗಾಗಿ ಸಂಬಂಧಪಟ್ಟ ಜಾತಿಗಳ ಸಮೀಕ್ಷೆ ನಡೆಸಲು ಸರ್ಕಾರ ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹವಾಗಿದ್ದು, ಬಲಗೈ ಸಮುದಾಯದವರು ಜಾತಿ ಕಾಲಂನಲ್ಲಿ ಹೊಲೆಯ ಇಲ್ಲವೇ ಛಲವಾದಿ ಎಂದು ನಮೂದಿಸಬೇಕು ಎಂದು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ರಾಶಿಂಗೆ ಹೇಳಿದರು.ಪಟ್ಟಣದ ಸಂಘದ ಕಚೇರಿಯಲ್ಲಿ ನಡೆದ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಜಾತಿಗಣತಿಯ ಜಾಗೃತಿ ಕುರಿತಾದ ಕರಪತ್ರ, ಪ್ರಚಾರ ಸಾಮಗ್ರಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮೇ 5ರಿಂದ ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣಕ್ಕೆ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರ ಏಕಸದಸ್ಯ ವಿಚಾರಣಾ ಆಯೋಗವು ದತ್ತಾಂಶ ಸಂಗ್ರಹಿಸುವ ಸಮೀಕ್ಷೆ ನಡೆಸಲಿದೆ ಎಂದರು.
ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ನೀಡುವುದರಿಂದ ಸಮುದಾಯಕ್ಕೆ ಸೇರಿದ ಪ್ರತಿ ವ್ಯಕ್ತಿ, ಕುಟುಂಬ ಸಮೀಕ್ಷೆಗೆ ಒಳಪಡಬೇಕು. ಹಾಗಾಗಿ ಈ ಸಮೀಕ್ಷೆಯ ಜಾತಿ ಕಾಲಂನಲ್ಲಿ ಹೊಲೆಯ ಇಲ್ಲವೇ ಛಲವಾದಿ ಎಂದು ನಮೂದಿಸಲು ಸಮುದಾಯದವರನ್ನು ಜಾಗೃತಗೊಳಿಸಬೇಕು. ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ, ಸಮೀಕ್ಷೆ ಕುರಿತು ಮೇಲ್ವಿಚಾರಕರು ಮತ್ತು ಗಣತಿದಾರರುರಿಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಸಲಹೆ ಮಾಡಿದರು.ಒಳಮೀಸಲಾತಿ ಹಂಚಿಕೆ ವಿಚಾರವಾಗಿ ಸಮರ್ಪಕ ಅಂಕಿ-ಅಂಶ ಕಲೆ ಹಾಕಿ ಮೀಸಲಾತಿ ಹಂಚಿಕೆ ಮಾಡುವಲ್ಲಿ ಸಮಸ್ಯೆ ಉಂಟಾಗಿರುವುದರಿಂದ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಆಯೋಗ ರಚಿಸಲಾಗಿದೆ. ಒಳಮೀಸಲಾತಿ ಜಾರಿಗೊಳಿಸಲು ಕುಟುಂಬದ ಉಪಜಾತಿ, ಆರ್ಥಿಕ ಮತ್ತು ಸಾಮಾಜಿಕ ಮಟ್ಟ ಸೇರಿದಂತೆ ಸಮೀಕ್ಷೆಯಲ್ಲಿ ನೀಡಲಾಗುವ ಎಲ್ಲ ಪ್ರಶ್ನೆಗಳಿಗೆ ನಿಖರ ಉತ್ತರ ಪಡೆದು ಅಪಲೋಡ್ ಮಾಡಬೇಕು. ಯಾವುದೇ ಮಾಹಿತಿ ಕೈಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದರು.ಜಾತಿ ಸಮೀಕ್ಷೆಯ ನಮೂನೆಯಲ್ಲಿ ಜಾತಿ ಮತ್ತು ಮೂಲ ಜಾತಿ, ಉಪಜಾತಿಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ತಪ್ಪು ಮಾಹಿತಿ ನೀಡಿದ್ದಲ್ಲಿ ಬಲಗೈ ಗುಂಪಿಗೆ ವಾಸ್ತವಿಕವಾಗಿ ದೊರಬೇಕಿರುವ ಮೀಸಲಾತಿ ಪ್ರಮಾಣದಲ್ಲಿ ಏರುಪೇರು ಆಗಲಿದೆ. ಜೊತೆಗೆ ಶಿಕ್ಷಣ, ಉದ್ಯೋಗ, ರಾಜಕೀಯ ಪ್ರಾತಿನಿಧ್ಯ, ಆರೋಗ್ಯ, ಕೃಷಿ, ವಾಣಿಜ್ಯ, ಕೈಗಾರಿಕೆ, ಇತರೆ ಕ್ಷೇತ್ರಗಳಲ್ಲಿ ಸಿಗುವ ಸೌಲಭ್ಯಗಳಿಂದ ಶಾಶ್ವತವಾಗಿ ವಂಚಿತರಾಗಬೇಕಾಗುತ್ತದೆ. ಮುಂದಿನ ಪೀಳಿಗೆ ಶತಶತಮಾನಗಳವೆಗೆ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.
ಮಹಾಸಭಾ ತಾಲೂಕು ಘಟಕ ಅಧ್ಯಕ್ಷ ಶ್ರೀನಿವಾಸ ವ್ಯಾಪಾರಿ, ಮುಖಂಡರಾದ ಮಾರುತಿ ಚಿಕ್ಕೋಡಿ, ಮಂಜು ಪಡದಾರ, ಕಿರಣ ಬಾಗೇವಾಡಿ, ಸತೀಶ ದಿನ್ನಿಮನಿ, ವಿಶ್ವನಾಥ ಕಟ್ಟಿ, ಅಮೂಲ ಕಾಂಬಳೆ, ದೀಪಕ ಕಾಂಬಳೆ ಮತ್ತಿತರರು ಉಪಸ್ಥಿತರಿದ್ದರು.