ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರಬಿಡದಿ ಟೌನ್‌ಶಿಪ್‌ಗಾಗಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಸ್ವಾಧೀನಪಡಿಸಿಕೊಳ್ಳುವ ಪ್ರತಿ ಎಕರೆ ಭೂಮಿಗೆ 4 ರಿಂದ 5 ಕೋಟಿ ರುಪಾಯಿ ಪರಿಹಾರ ನೀಡಬೇಕು. ಇಲ್ಲದಿದ್ದರೆ ಭೂ ಸ್ವಾಧೀನ ಪ್ರಕ್ರಿಯೆಗೆ ಅವಕಾಶ ನೀಡದೆ ಹೋರಾಟದ ಹಾದಿ ಹಿಡಿಯುವುದಾಗಿ ದಲಿತ ಮತ್ತು ಹಿಂದುಳಿದ ರೈತರ ಹಿತರಕ್ಷಣಾ ಸಮಿತಿಯ ಶೇಖರ್ ಎಚ್ಚರಿಕೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ದಲಿತರು ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ ರೈತರು ತುಂಡು ಭೂಮಿಯನ್ನು ಹೆಚ್ಚಾಗಿ ಹೊಂದಿದ್ದಾರೆ. ಟೌನ್‌ಶಿಪ್ ಯೋಜನೆಗಾಗಿ ಭೂ ಸ್ವಾಧೀನಪಡಿಸಿಕೊಂಡರೆ ಪ್ರತಿ ಎಕರೆಗೆ 2 ಕೋಟಿಯಷ್ಟು ಬೆಲೆ ಹೆಚ್ಚಾಗುವ ಅಂದಾಜಿದೆ. ಈ ಯೋಜನೆಗೆ ನಮ್ಮ ಬೆಂಬಲವಿದ್ದು, ಪ್ರತಿ ಎಕರೆಗೆ 4 -5 ಕೋಟಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ದಲಿತ ಸಮುದಾಯದವರು ಅತೀ ಸಣ್ಣ ರೈತರಾಗಿದ್ದಾರೆ. ದಲಿತ ಸಮುದಾಯದವರು ತಮ್ಮ ಕುಟುಂಬದಲ್ಲಿ ನಡೆಯುವ ಶುಭ ಕಾರ್ಯಗಳು, ಮಕ್ಕಳ ವಿದ್ಯಾಭ್ಯಾಸ, ಅನಾರೋಗ್ಯ ಸಮಸ್ಯೆಗಳು ಎದುರಾದಾಗ ತಮ್ಮ ಜಮೀನನ್ನು ಮಾರಾಟ ಮಾಡುವ ಪರಿಸ್ಥಿತಿ ಬಂದಾಗ ರಿಯಲ್ ಎಸ್ಟೇಟ್ ದಲ್ಲಾಳಿಗಳು ಎಸ್ಸಿ ಜಮೀನುಗಳನ್ನು ಯಾರು ಖರೀದಿಸುವುದಿಲ್ಲ ಎಂದು ಹೇಳಿ ಕಡಿಮೆ ಬೆಲೆಗೆ ಕೇಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ವಿಧಿಯಿಲ್ಲದೆ ಸಣ್ಣ ರೈತರು ಕಡಿಮೆ ಬೆಲೆಗೆ ತಮ್ಮ ಜಮೀನುಗಳನ್ನು ಕಳೆದುಕೊಳ್ಳುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.ದಲಿತ ಮತ್ತು ಹಿಂದುಳಿದ ಸಮುದಾಯದ ರೈತರಿಗೆ ಸರ್ಕಾರದಿಂದ ಮಂಜೂರಾತಿ ಆಗಿರುವ ಜಮೀನುಗಳಿವೆ. ಸರ್ಕಾರದ ಭೂ ಸ್ವಾಧೀನ ಪ್ರಕ್ರಿಯೆಯಿಂದ ಸಣ್ಣ ರೈತರಿಗೆ ಅನುಕೂಲವೇ ಹೊರತು ಅನಾನುಕೂಲ ಆಗುವುದಿಲ್ಲ. ಈಗ ಜಮೀನುಗಳ ಎಸ್ ಆರ್ ದರ ಕೇವಲ 25 ರಿಂದ 30 ಲಕ್ಷ ರು.ಗಳಿವೆ. ಆದರೆ, ಸರ್ಕಾರದಿಂದ ಹೆಚ್ಚಿನ ಪರಿಹಾರ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.ದಲಿತ ಸಮುದಾಯದ ಬಗ್ಗೆ ಕಾಳಜಿ ಹೊಂದಿರುವ ವ್ಯಕ್ತಿಯೊಬ್ಬರು ದಲಿತ ಮೀಸಲಾತಿ ಅಡಿಯಲ್ಲಿ ತಾಲೂಕು ಪಂಚಾಯಿತಿ ಸದಸ್ಯರಾಗಿ ಅಧಿಕಾರ ಅನುಭವಿಸಿ, ದಲಿತರ ಜಮೀನುಗಳನ್ನು ಮೇಲ್ಜಾತಿಯವರ ಜೊತೆಗೂಡಿ ದಲ್ಲಾಳಿಯಾಗಿ ಮಾರಾಟ ಮಾಡಿಸುತ್ತಿದ್ದಾರೆ. ಅಂಚಿಪುರ ಕಾಲೋನಿ ಗ್ರಾಮದಲ್ಲಿ ದಲಿತ ಭೂಮಿಯನ್ನು ಒಂದು ಎಕರೆಗೆ 55 ಲಕ್ಷಕ್ಕೆ ಮಾರಾಟ ಮಾಡಿಸಿ , ನಂತರ ಹೊಸೂರು ನಾಗರಾಜು ಹೆಸರಿಗೆ ಕ್ರಯ ಮಾಡಿಸಿ ಅದೇ ಜಮೀನನ್ನು ಎಕರೆ 95 ಲಕ್ಷಕ್ಕೆ ಮಾರಾಟ ಮಾಡಿರುವ ಉದಾಹರಣೆ ಇದೆ. ಹೀಗೆ ದಲಿತ ಕುಟುಂಬದ ಒಟ್ಟು ಮೂರು ಎಕರೆಯಷ್ಟು ಜಮೀನು ಮಾರಾಟ ಮಾಡಿಸಿ 1 ಕೋಟಿ 20 ಲಕ್ಷ ರು. ಲಾಭ ಮಾಡಿಕೊಂಡಿದ್ದಾರೆ ಎಂದು ತಾಪಂ ಮಾಜಿ ಸದಸ್ಯ ಪ್ರಕಾಶ್ ವಿರುದ್ಧ ಆರೋಪ ಮಾಡಿದರು.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಶಾಸಕ ಬಾಲಕೃಷ್ಣ ಹಾಗೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್ ರವರು ರೈತರ ಜೊತೆ ಸಮಾಲೋಚನೆ ಮಾಡಿಲ್ಲವೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ರೈತರು ಭೂ ಸ್ವಾಧೀನ ಪ್ರಕ್ರಿಯೆಗೆ ಪ್ರಾಥಮಿಕ ನೋಟಿಸ್ ಅನ್ನು ಮಾತ್ರ ಕೊಟ್ಟಿದ್ದಾರೆ ಎಂಬುದನ್ನು ಮರೆಯಬಾರದು. ಇದಕ್ಕೆ ಪ್ರತ್ಯುತ್ತರ ಏನು ನೀಡುತ್ತಾರೆಂದು ನೋಡಿ ನಂತರ ರೈತರೊಂದಿಗೆ ಸಾಧಕ ಭಾದಕಗಳ ಬಗ್ಗೆ ಚರ್ಚೆ ಮಾಡಿ ಒಪ್ಪಿಗೆ ಪಡೆದು ಮುಂದಿನ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.ವೃಷಭಾವತಿ ನದಿ , ಬೈರಮಂಗಲ ಕೆರೆಯ ಕಲುಷಿತ ನೀರಿನಿಂದ ಜನ ಜಾನುವಾರುಗಳ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮ ಬೀರುತ್ತಿದೆ. ಈ ಭಾಗ ಅಭಿವೃದ್ಧಿಯಾದರೆ ಕಲುಷಿತ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಶೇಖರ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಜಯಚಂದ್ರ, ಶಿವಕುಮಾರ್ , ದೇವರಾಜು, ಲೋಕೇಶ್ , ವೆಂಕಟೇಶ್ , ಲಿಂಗರಾಜು, ಇಟ್ಟಮಡು ಶ್ರೀಧರ್ ಇದ್ದರು....ಕೋಟ್ ...
ಬಿಡದಿ ಟೌನ್ ಶಿಪ್ ಕೇಂದ್ರ ಸಚಿವ ಕುಮಾರಸ್ವಾಮಿರವರ ಕೂಸು. 2006 ಮತ್ತು 2018ರಲ್ಲಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು. ಟೌನ್ ಶಿಪ್ ಮಾಡುವ ಉದ್ದೇಶದಿಂದ ಗುರುತಿಸಿದ್ದ 10 ಸಾವಿರ ಎಕರೆ ಭೂಮಿಯನ್ನು ರೆಡ್ ಜೋನ್ ನಿಂದ ಏಕೆ ವಜಾಗೊಳಿಸಲಿಲ್ಲ. 2018ರಲ್ಲಿ ಶಾಸಕರಾಗಿದ್ದ ಮಂಜುನಾಥ್ ರವರು ಅಂದಿನ ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ ಅವರ ಜೊತೆಗೂಡಿ ಕೆಐಡಿಬಿಯಿಂದ ಭೂ ಸ್ವಾಧೀನಕ್ಕೆ ಮುಂದಾಗಿರಲಿಲ್ಲವೆ. ಇಂದು ಭೂ ಸ್ವಾಧೀನದ ವಿರುದ್ಧ ಹೋರಾಡುತ್ತಿರುವುದು ರಾಜಕೀಯಕ್ಕಾಗಿಯೇ ಎಂಬ ಪ್ರಶ್ನೆ ಮೂಡುತ್ತಿದೆ.- ಜಯಚಂದ್ರ, ಮಾಜಿ ಅಧ್ಯಕ್ಷರು, ತಾಪಂ----5ಕೆಆರ್ ಎಂಎನ್ 1.ಜೆಪಿಜಿದಲಿತ ಮತ್ತು ಹಿಂದುಳಿದ ರೈತರ ಹಿತರಕ್ಷಣಾ ಸಮಿತಿಯ ಶೇಖರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.