ಯಕ್ಷ ಕುಟೀರ ಯಕ್ಷಗಾನ ತರಬೇತಿ ಕೇಂದ್ರ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಕುಮಟಾಗುರುಮುಖೇನ ಸರಿಯಾದ ತರಬೇತಿ ಇಲ್ಲದೆ ಯಕ್ಷಗಾನದಲ್ಲಿ ರಂಗ ಪ್ರವೇಶಿಸುವುದು ಸರಿಯಲ್ಲ. ಏಕೆಂದರೆ ಯಕ್ಷಗಾನದ ತರಬೇತಿ ಕೇಂದ್ರಗಳು ಹೊಸ ಪ್ರತಿಭೆಗಳಿಗೆ ದಾರಿ ದೀಪವಿದ್ದಂತೆ ಎಂದು ಯಕ್ಷಗಾನದ ಹವ್ಯಾಸಿ ಕಲಾವಿದ ಮಾಧವ ಪಟಗಾರ ಹೇಳಿದರು.

ಹೆಗಡೆಯ ಮೇಲಿನಕೇರಿಯಲ್ಲಿ ಯಕ್ಷಗಾನ ಕಲೆಯನ್ನು ಗ್ರಾಮೀಣ ಮಟ್ಟದಲ್ಲಿ ವಿಸ್ತರಿಸುವ ಯಕ್ಷ ಕುಟೀರ ಯಕ್ಷಗಾನ ತರಬೇತಿ ಕೇಂದ್ರವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು. ತರಬೇತಿ ಕೇಂದ್ರದ ಸ್ಥಾಪಕ ಲಕ್ಷ್ಮಣ ಟಿ. ಪಟಗಾರ ಪ್ರಾಸ್ತಾವಿಕ ಮಾತನಾಡಿ, ಯಕ್ಷಗಾನ ರಂಗಕಲೆ ಮಾತ್ರವಲ್ಲ, ಅದು ಜೀವನಶೈಲಿಯನ್ನು ರೂಪಿಸುವ ಮಹತ್ತರ ಸಾಧನ. ವ್ಯಕ್ತಿಯಲ್ಲಿ ಆತ್ಮವಿಶ್ವಾಸ, ಪುರಾಣ ಜ್ಞಾನ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುತ್ತದೆ. ಯಕ್ಷಗಾನವನ್ನು ಹವ್ಯಾಸವನ್ನಾಗಿ ಮಾಡಿಕೊಂಡವರು ಸಾರ್ಥಕ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ. ಗ್ರಾಮೀಣ ಪ್ರದೇಶದ ಮಕ್ಕಳಿಗೂ ಈ ಮಹತ್ವದ ಕಲೆಯನ್ನು ಕಲಿಯುವ ಅವಕಾಶ ದೊರಕಬೇಕು ಎಂಬ ಉದ್ದೇಶದಿಂದ ಉಚಿತವಾಗಿ ಈ ತರಬೇತಿ ಕೇಂದ್ರ ಆರಂಭಿಸಿದ್ದೇನೆ ಎಂದರು. ಯಕ್ಷಗಾನ ತರಬೇತುದಾರ ಮಹೇಶ ಭಂಡಾರಿ, ವಿದ್ಯಾದಾನವು ಅನ್ನದಾನಕ್ಕಿಂತ ಶ್ರೇಷ್ಠ ಎಂದು ಹೇಳುತ್ತಾರೆ. ಈ ಯಕ್ಷಕುಟೀರದ ಮೂಲಕ ಅನೇಕ ವಿದ್ಯಾರ್ಥಿಗಳು ಕಲಾವಿದರಾಗಿ ಮೆರೆಯಲಿ, ಪ್ರತಿ ರವಿವಾರ ತರಗತಿ ಇರಲಿದ್ದು ಈಗಾಗಲೇ ೨೫ಕ್ಕೂ ಹೆಚ್ಚು ಕಲಿಕಾರ್ಥಿಗಳು ಯಕ್ಷಕುಟೀರದಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕ ಪ್ರಮೋದ ಹೆಗಡೆ ಕಡೆಕೇರಿ, ಗುರು ಮತ್ತು ಗುರಿ ಇದ್ದಲ್ಲಿ ಸಾಧನೆ ಅಸಾಧ್ಯವಲ್ಲ. ತಾನು ಬೆಳೆದು ಇತರರನ್ನು ಬೆಳೆಸುವ ಮನೋಭಾವವೇ ಮಹತ್ವದ್ದು. ಈ ನಿಟ್ಟಿನಲ್ಲಿ ಯಕ್ಷಕುಟೀರ ಕಟ್ಟಿದ ಲಕ್ಷ್ಮಣ ಟಿ. ಪಟಗಾರ ಕಾರ್ಯ ಶ್ಲಾಘನೀಯ ಎಂದರು. ಯಕ್ಷಗಾನದ ಹವ್ಯಾಸಿ ಕಲಾವಿದರಾದ ಗಿರೀಶ ಪಟಗಾರ, ವಿಷ್ಣು ಪಟಗಾರ, ಬೊಬ್ಬು ಪಟಗಾರ ಶುಭ ಹಾರೈಸಿದರು. ಚಂಡೆ ಕಲಿಕಾರ್ಥಿ ಮಂಜುನಾಥ ಗುನಗ ಹಳಕಾರ, ಯೋಗೇಶ ಪಟಗಾರ, ಮಂಜುನಾಥ ರಾಮದಾಸ ಪಟಗಾರ ಇನ್ನಿತರರು ಇದ್ದರು