ಸಾರಾಂಶ
ಕನ್ನಡಪ್ರಭ ವಾರ್ತೆ ಯಲಬುರ್ಗಾ
ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಅಂದಾಗ ಸಸ್ಯ ಸಂಕುಲ ಉಳಿಯಲು ಸಾಧ್ಯ ಎಂದು ಉಪಅರಣ್ಯ ವಲಯ ಅಧಿಕಾರಿ ಅಂದಪ್ಪ ಕುರಿ ಹೇಳಿದರು.ಪಟ್ಟಣದ ಸ್ನಾತಕೋತ್ತರ ಪದವಿ ಕೇಂದ್ರದ ಆವರಣದಲ್ಲಿ ಬುಧವಾರ ಪ್ರಾದೇಶಿಕ ಅರಣ್ಯ ವಲಯ ಕೊಪ್ಪಳ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚಾರಣೆ ನಿಮಿತ್ತ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡುವುದರಿಂದ ಉತ್ತಮ ಆರೋಗ್ಯ ಪಡೆಯಬಹುದಾಗಿದೆ. ಪ್ರತಿಯೂಬ್ಬರು ಪರಿಸರದ ಬಗ್ಗೆ ಕಾಳಜಿ ವಹಿಸಿದಾಗ ಸುಂದರ ನಾಡು ಕಾಣಲು ಸಾಧ್ಯ ಎಂದರು.
ಪರಿಸರ ನಾಶದಿಂದ ಹೆಚ್ಚುತ್ತಿರುವ ತಾಪಮಾನ, ಜನಸಂಖ್ಯೆ ಹೆಚ್ಚಳ, ಕ್ಷೀಣಿಸುತ್ತಿರುವ ಮರಗಳು ಕಾರ್ಖಾನೆಗಳ ಮಾಲಿನ್ಯಕಾರಕ ಹೊಗೆಯಿಂದ ಪರಿಸರದಲ್ಲಿ ಅಸಮತೋಲನ ಉಂಟಾಗಿದೆ. ಇದರಿಂದಾಗಿ ಉಸಿರಾಟ ತೊಂದರೆ ಅನುಭವಿಸುತ್ತಿದ್ದೇವೆ, ಇದರಿಂದ ಎಲ್ಲರೂ ಮುಕ್ತಿ ಕಾಣಬೇಕಾದರೆ ಹೆಚ್ಚಿನ ಸಂಖ್ಯೆಯಲ್ಲಿ ಸಸಿ ಬೆಳೆಸಬೇಕು ಎಂದು ಹೇಳಿದರು.ಪಿಜಿ ಕೇಂದ್ರದ ನಿರ್ದೇಶಕ ಪ್ರಕಾಶ ಯಳವಟ್ಟಿ ಮಾತನಾಡಿ, ಪ್ರತಿಯೊಬ್ಬರು ನಗರದಲ್ಲಿ ಹಸಿರೀಕರಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಉಪಅರಣ್ಯ ವಲಯ ಅಧಿಕಾರಿ ಶರೀಫ್ ಕೊತ್ವಾಲ್, ಉಪನ್ಯಾಸಕರಾದ ಬಸವರಾಜ ಇಳ್ಗಿನೂರ, ಡಾ. ಅಸೀನಾ ಸೇರಿದಂತೆ ಮತ್ತಿತರರು ಇದ್ದರು.ಗಿಡಮರಗಳ ಸಂರಕ್ಷಣೆಗೆ ಎಲ್ಲರೂ ಮುಂದಾಗಲಿ:ಪ್ರತಿಯೊಬ್ಬರು ಮರಗಳನ್ನು ಸಂರಕ್ಷಣೆ ಮಾಡುವ ಮೂಲಕ ಪರಿಸರ ಉಳಿಸಿ, ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಯಲಬುರ್ಗಾ ತಾಲೂಕಿನ ಬಳೂಟಗಿ ಗ್ರಾಮದ ಕಿತ್ತೂರ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ಜ್ಯೋತಿಶ್ವರ ಬೇಸ್ತರ ಹೇಳಿದರು.ತಾಲೂಕಿನ ಬಳೂಟಗಿ ಗ್ರಾಮದ ಕಿತ್ತೂರ ಚನ್ನಮ್ಮ ವಸತಿ ಶಾಲೆಯ ಆವರಣದಲ್ಲಿ ವಿಶ್ವಪರಿಸರ ದಿನಾಚರಣೆ ನಿಮಿತ್ತ ವಸತಿ ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಬುಧವಾರ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಅರಣ್ಯ ಸಂರಕ್ಷಣೆ ಮಾಡಿದಾಗ ಮಳೆ, ಬೆಳೆ ಪಡೆಯಲು ಹೆಚ್ಚು ಅನುಕೂಲವಾಗುತ್ತದೆ. ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಒಂದೊಂದು ಸಸಿ ನೆಡುವ ಕಾರ್ಯ ಮಾಡಬೇಕು ಎಂದರು.ದೇಶದಲ್ಲಿ ಅರಣ್ಯ ನಾಶವಾಗುತ್ತಾ ಹೊರಟಿರುವ ಪರಿಣಾಮ ಜೀವ ಸಂಕುಲಕ್ಕೆ ತೊಂದರೆಯಾಗಲಿದೆ. ಹೀಗಾಗಿ ಎಲ್ಲರೂ ಪರಿಸರ ಸಂರಕ್ಷಣೆಗೆ ಪ್ರಯತ್ನಿಸಬೇಕು. ಜೊತೆಗೆ ಮಾನವನಿಗೆ ಗಾಳಿ, ನೀರು, ಆಹಾರ ಈ ಮೂರು ಅತಿ ಅವಶ್ಯಕ. ಮರಗಳ ಸಂರಕ್ಷಣೆ ಮಾಡುವುದರಿಂದ ನೈಸರ್ಗಿಕವಾಗಿ ಶುಚಿಯಾದ ಉತ್ತಮ ಗಾಳಿ ದೊರೆಯುತ್ತದೆ. ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ ಸಸಿ ನಡೆಯುವ ಜತೆಗೆ ಅವುಗಳಿಗೆ ನಿತ್ಯ ನೀರುಣಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ನಾಗರಾಜ ನಾಯಕ, ಶ್ರೀಕಾಂತ, ಶ್ರೀನಿವಾಸ ತೇಲ್ಕರ್, ಹನುಮಪ್ಪ ಕಡೇಕೊಪ್ಪ, ಸಾವಿತ್ರಿ ಡಂಬಳ, ಶಶಿಕಲಾ, ವಿಜಯಲಕ್ಷ್ಮೀ ತೊಂಡಿಹಾಳ, ಪ್ರೇಮಾ ಕೆಂಪಣ್ಣನವರ್ ಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.