ಜಾತಿ ಪದ್ಧತಿ ನಿರ್ಮೂಲನೆ ಆಗದೆಯೇ ಸಮಾನತೆ ಅಸಾಧ್ಯ: ಸಿದ್ದರಾಮಯ್ಯ

| Published : Nov 19 2024, 12:45 AM IST

ಜಾತಿ ಪದ್ಧತಿ ನಿರ್ಮೂಲನೆ ಆಗದೆಯೇ ಸಮಾನತೆ ಅಸಾಧ್ಯ: ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಜಾತಿ ಪದ್ಧತಿ ನಿರ್ಮೂಲನೆಯಾಗದ ಹೊರತು ಸಮಾಜದಲ್ಲಿ ಸಮಾನತೆ ಮೂಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಜಾತಿ ಪದ್ಧತಿ ನಿರ್ಮೂಲನೆಯಾಗದ ಹೊರತು ಸಮಾಜದಲ್ಲಿ ಸಮಾನತೆ ಮೂಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಂಸ್ಕೃತಿ ಇಲಾಖೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಕನಕದಾಸರ ಜಯಂತಿ ಆಚರಣೆ ಹಾಗೂ ಕನಕ ಶ್ರೀ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನಕದಾಸರು 16ನೇ ಶತಮಾನದಲ್ಲಿ ದಾಸ ಸಾಹಿತ್ಯದ ಮೂಲಕ ಸಮಾಜವನ್ನು ಸುಧಾರಣೆ ಮಾಡಿದರು. ಮನುಷ್ಯನನ್ನು ಮನುಷ್ಯನಾಗಿ ನೋಡಬೇಕು ಎಂದು ಪ್ರತಿಪಾದಿಸಿದ್ದರು. ‘ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ’ ಎಂಬ ತತ್ವಪದ ಹೇಳುವ ಮೂಲಕ ಸಮಾಜದಲ್ಲಿ ಜಾತಿ ಪದ್ಧತಿ ನಿರ್ಮೂಲನೆಯಾಗಲು ಯತ್ನಿಸಿದ್ದರು. ಆದರೆ, ಈಗಲೂ ಸಮಾಜದಲ್ಲಿ ಅಸಮಾನತೆ ಹಾಗೂ ಜಾತಿ ಪದ್ಧತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾಗಿನೆಲೆ ಕನಕಗುರು ಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ, ಡೊಳ್ಳುಕುಣಿತ ಸೇರಿದಂತೆ ಹಾಲುಮತದ ವರ್ಗದವರ 18 ಜಾನಪದ ಕಲೆಗಳು ಅಳುವಿನ ಅಂಚಿನಲ್ಲಿವೆ. ಅವುಗಳನ್ನು ಪೋಷಿಸಲು ಹಾಲುಮತ-ಕುರುಬ ಕಲಾ ಅಕಾಡೆಮಿ ಆರಂಭಿಸಬೇಕು. ಕನಕದಾಸರ ಕೀರ್ತಿಯನ್ನು ಚಿರಸ್ಥಾಯಿಯಾಗಿ ಉಳಿಸಲು ಹಂಪಿ ಅಥವಾ ಧಾರವಾಡ ವಿಶ್ವವಿದ್ಯಾಲಯಕ್ಕೆ ಕನಕದಾಸರ ಹೆಸರು ನಾಮಕರಣ ಮಾಡಬೇಕು. ಮೀನಾಮೇಷ ಎಣಿಸದೆ ಜಾತಿ ಜಣಗತಿ ವರದಿಯನ್ನು ಮುಂದಿನ ಕನಕದಾಸ ಜಯಂತಿ ಒಳಗೆ ಜಾರಿ ಮಾಡಬೇಕು ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್‌. ತಂಗಡಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕನಕದಾಸ ದಾಸ ಸಾಹಿತ್ಯ ಅಧ್ಯಯನ ಮತ್ತು ಪ್ರಚಾರ ಸೇವೆಯಲ್ಲಿ ತೊಡಗಿದ ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯ, ಡಾ.ತಾಳ್ತಜೆ ವಸಂತ ಕುಮಾರ, ಡಾ.ನೀಲಪ್ಪ ಮೈಲಾರಪ್ಪ ಅಂಬಲಿಯವರ, ಡಾ.ಎನ್‌.ಎನ್‌. ಮುರಳೀಧರ, ಡಾ.ಜಿ.ವಿ. ಆನಂದ ಮೂರ್ತಿ ಅವರಿಗೆ ‘ಕನಶ ಶ್ರೀ’ ಪ್ರಶಸ್ತಿ , ಡಾ.ಅನಿಲ್‌ ಕುಮಾರ್‌, ಡಾ.ಚಿಕ್ಕಮಗಳೂರು ಗಣೇಶ್‌, ಡಾ.ಎಂ.ಉಮೇಶ್‌ ಅವರಿಗೆ ಕನಕ ಯುವ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ವೇಳೆ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಸರ್ಕಾರದ ಮುಖ್ಯಸಚೇತಕ ಸಲೀಂ ಅಹ್ಮದ್‌, ಮಾಜಿ ಸಚಿವ ಎಚ್‌.ಎಂ.ರೇವಣ್ಣ, ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ಮತ್ತಿತರರು ಉಪಸ್ಥಿತರಿದ್ದರು.

500ನೇ ಜಯಂತಿ ಆಚರಿಸಿದ್ದೆ ನಾನು: 1988ರ ಎಸ್‌.ಆರ್.ಬೊಮ್ಮಾಯಿ ಸರ್ಕಾರದಲ್ಲಿ ನಾನು ಸಾರಿಗೆ ಸಚಿವನಾಗಿದ್ದೆ. ಆಗ 1988ರ ನ.25ರಂದು ನಾನು ಕನಕದಾಸರ 500ನೇ ಜಯಂತಿ ಆಚರಣೆ ಮಾಡಿದ್ದೆ. ಅಲ್ಲಿಂದ ಸರ್ಕಾರದ ವತಿಯಿಂದಲೇ ಪ್ರತಿ ವರ್ಷವೂ ಕನಕ ಜಯಂತಿ ಆಚರಣೆ ಮಾಡಲು ಪ್ರಾರಂಭ ಮಾಡಿದೆವು. ಹಿರಿಯ ಸಾಹಿತಿ ದೆ.ಜವರೇಗೌಡ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಕನಕದಾಸ ಕಾವ್ಯ, ಸಾಹಿತ್ಯ, ಕೀರ್ತನೆಗಳು ಸಂಗ್ರಹಿಸಿ ಪ್ರಕಟಿಸಿ ಕಡಿಮೆ ದುಡ್ಡಿನಲ್ಲಿ ಜನರಿಗೆ ವಿತರಿಸಿದ್ದೆವು ಎಂದು ಸಿದ್ದರಾಮಯ್ಯ ಸ್ಮರಿಸಿದರು.

ಅಲ್ಲದೆ, ತತದ್ವಪದ ಯೋಜನೆಯಡಿ ಪ್ರಕಟಿಸಿರುವ ಸಂಪುಟಗಳನ್ನು ರಾಜ್ಯದ ಎಲ್ಲಾ ಅಕಾಡೆಮಿ, ಪ್ರಾಧಿಕಾರಗಳಿಗೆ, ಗಣರಾಜ್ಯೋತ್ಸವ, ರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ ಆಚರಣೆ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರಿಗೆ ಶೇ.50ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಕ್ರಮ ಕೈಗೊಳ್ಳುವಂತೆ ಸಚಿವ ಶಿವರಾಜ್‌ ಎಸ್. ತಂಗಡಗಿ ಅವರಿಗೆ ಸೂಚಿಸಿದರು.