ಈಶ್ವರಪ್ಪ ಆರೋಪ ಸುಳ್ಳಿನ ಕಂತೆ: ಬಿ.ವೈ.ರಾಘವೇಂದ್ರ

| Published : Mar 30 2024, 12:48 AM IST

ಸಾರಾಂಶ

ತಂದೆಯ ವಯಸ್ಸಿನವರಾದ ಕೆ.ಎಸ್. ಈಶ್ವರಪ್ಪ ನಮ್ಮ ಕುಟುಂಬದ ವಿರುದ್ಧ ವಿನಾಕಾರಣ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಮ್ಮ ತಂದೆಯವರಿಂದ ಧರ್ಮ, ಸಂಸ್ಕಾರ ಮತ್ತು ಸಂಸ್ಕೃತಿ ಕಲಿತಿದ್ದೇವೆ. ಕಳೆದ ತಿಂಗಳು ಶಿಕಾರಿಪುರದಲ್ಲಿ ನಡೆದ ಸಮಾವೇಶ ವೇಳೆ ಬಿಎಸ್‌ವೈರನ್ನು ರಾಜಾಹುಲಿ, ವಿಜಯೇಂದ್ರರನ್ನು ಮರಿ ಹುಲಿ ಎಂದು ಕೊಂಡಾಡಿದ್ದರು. ಈ ಪ್ರವೃತ್ತಿ ಕೇವಲ ಎರಡು ವಾರಗಳಲ್ಲಿ ಅವರ ವ್ಯಕ್ತಿತ್ವವೇ ಬದಲಾಗಿದೆ ಏಕೆ?

ಕನ್ನಡಪ್ರಭ ವಾರ್ತೆ ಸೊರಬ

ಗುರುಗಳು, ಮಠಾಧೀಶರು ಕೆ.ಎಸ್.ಈಶ್ವರಪ್ಪರಿಗೆ ಆಶೀರ್ವಾದ ಮಾಡದಂತೆ ಬೆದರಿಕೆ ಹಾಕಿದ್ದೇನೆ. ಈ ವಿಚಾರವಾಗಿ ಮಠಾಧೀಶರು ಕಣ್ಣೀರಿಡುತ್ತಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ನನ್ನ ಮೇಲೆ ಮಾಡಿರುವ ಆರೋಪ ಸುಳ್ಳಿನ ಕಂತೆ. ಬೆದರಿಕೆ ಹಾಕಿರುವುದು ನಿಜವಾಗಿದ್ದರೆ ಈಶ್ವರಪ್ಪ ಅವರು ಚಂದ್ರಗುತ್ತಿ ಶ್ರೀ ರೇಣುಕಾಂಬೆ ಸನ್ನಿಧಿಗೆ ಬಂದು ಗಂಟೆ ಹೊಡೆದು ಪ್ರಮಾಣ ಮಾಡಲಿ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸವಾಲು ಹಾಕಿದರು.

ತಾಲೂಕಿನ ಚಂದ್ರಗುತ್ತಿಯ ಪುರಾಣ ಹಾಗೂ ಐತಿಹಾಸಿಕ ಪ್ರಸಿದ್ಧ ಶ್ರೀ ರೇಣುಕಾಂಬಾ ದೇವಸ್ಥಾನದಲ್ಲಿ ಶ್ರೀದೇವಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಟಿಕೆಟ್ ಹಂಚಿಕೆ ವಿಷಯ ಕೇಂದ್ರದ ನಾಯಕರು ತೀರ್ಮಾನಿಸುತ್ತಾರೆ. ತಮಗೂ ಕೂಡ ಕಾಂತೇಶ್ ರಿಗೆ ಟಿಕೆಟ್ ದೊರೆಯಲಿ ಎಂಬ ಅಭಿಲಾಷೆ ಇತ್ತು. ಕೇಂದ್ರದ ಚುನಾವಣಾ ಸಮಿತಿ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು. ಇದರಲ್ಲಿ ನಮ್ಮ ಕುಟುಂಬದ ಹಸ್ತಕ್ಷೇಪ ಇಲ್ಲ ಎಂದರು. ಈಶ್ವರಪ್ಪ ವ್ಯಕ್ತಿತ್ವ ಬದಲಾದದ್ದು ಏಕೆ?

ತಂದೆಯ ವಯಸ್ಸಿನವರಾದ ಕೆ.ಎಸ್. ಈಶ್ವರಪ್ಪ ನಮ್ಮ ಕುಟುಂಬದ ವಿರುದ್ಧ ವಿನಾಕಾರಣ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಮ್ಮ ತಂದೆಯವರಿಂದ ಧರ್ಮ, ಸಂಸ್ಕಾರ ಮತ್ತು ಸಂಸ್ಕೃತಿ ಕಲಿತಿದ್ದೇವೆ. ಕಳೆದ ತಿಂಗಳು ಶಿಕಾರಿಪುರದಲ್ಲಿ ನಡೆದ ಸಮಾವೇಶ ವೇಳೆ ಬಿಎಸ್‌ವೈರನ್ನು ರಾಜಾಹುಲಿ, ವಿಜಯೇಂದ್ರರನ್ನು ಮರಿ ಹುಲಿ ಎಂದು ಕೊಂಡಾಡಿದ್ದರು. ಈ ಪ್ರವೃತ್ತಿ ಕೇವಲ ಎರಡು ವಾರಗಳಲ್ಲಿ ಅವರ ವ್ಯಕ್ತಿತ್ವವೇ ಬದಲಾಗಿದೆ ಏಕೆ? ಎಂದು ಪ್ರಶ್ನಿಸಿದರು.

ಈಶ್ವರಪ್ಪನವರಿಗೆ ಸಿಟ್ಟಿರುವುದು ವರಿಷ್ಠರ ಮೇಲೆ ಆದರೆ ಹೈಕಮಾಂಡ್‌ ಬಗ್ಗೆ ಮಾತನಾಡಲಾಗುತ್ತಿಲ್ಲ. ಬದಲಾಗಿ ತಂದೆಯವರ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇನ್ನೂ ಕಾಲಾವಕಾಶ ಇದೆ. ಮುಂದಿನ ದಿನಗಳಲ್ಲಿ ಅವರ ಆಶೀರ್ವಾದ ನಮ್ಮ ಮೇಲೆ ಇರುತ್ತೆ ಎಂದು ಭಾವಿಸುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.

ಪ್ರಚಾರಕ್ಕೆ ಮೊದಲು ಪೂಜೆ ಸಲ್ಲಿಕೆ:

ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂಬುದು ಜನತೆಯ ಅಭಿಲಾಷೆ. ಪಕ್ಷದ ಹಿರಿಯರ ಆಶೀರ್ವಾದದಿಂದ ಮತ್ತೆ ತಮಗೆ ಪಕ್ಷ ಈ ಬಾರಿಯ ಚುನಾವಣೆಗೆ ಟಿಕೆಟ್ ನೀಡಿದೆ. ಪಕ್ಷದಿಂದ ಅಧಿಕೃತವಾಗಿ ಪ್ರಚಾರ ಕಾರ್ಯ ಕೈಗೊಳ್ಳುವ ಮೊದಲು ಮಲೆನಾಡಿನ ಅಧಿದೇವತೆ ಶ್ರೀ ರೇಣುಕಾಂಬಾ ದೇವಿಗೆ ಪೂಜೆ ಸಲ್ಲಿಸಿ, ಪ್ರಧಾನಿ ಮೋದಿಯವರಿಗೂ ಒಳಿತಾಗಬೇಕು ಎಂದು ಪ್ರಾರ್ಥಿಸಿ ಪೂಜೆ ಸಲ್ಲಿಸಲಾಯಿತು. ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರದ ಪ್ರವಾಸೋದ್ಯಮ ಇಲಾಖೆಯಿಂದ ೨ ಕೋಟಿ ರು., ಅನುದಾನ ಬಿಡುಗಡೆಯಾಗಿತ್ತು. ಆದರೆ, ಪ್ರಸ್ತುತ ರಾಜ್ಯದ ಕಾಂಗ್ರೆಸ್‌ ಸರ್ಕಾರವು ಅನುದಾನ ಬಿಡುಗಡೆಗೆ ಮೀನಾಮೇಷ ಎಣಿಸಿದೆ. ಚುನಾವಣೆಯ ನಂತರ ಯಾತ್ರಿ ನಿವಾಸ ಸೇರಿ ಅಭಿವೃದ್ಧಿ ಕಾರ್ಯಗಳ ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಟಿ.ಜಿ. ಗಣಪತಿ, ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ನಿಕಟಪೂರ್ವ ಅಧ್ಯಕ್ಷ ರಾಜು ಎಂ. ತಲ್ಲೂರು, ಮುಖಂಡರಾದ ಡಾ. ಎಚ್.ಇ. ಜ್ಞಾನೇಶ್, ಶಿವಕುಮಾರ ಕಡಸೂರು, ಎಂ.ಡಿ. ಉಮೇಶ್, ವೀರೇಶ್ ಮೇಸ್ತಿç, ಮಧುರಾಯ್ ಜಿ. ಶೇಟ್, ರಮೇಶ್ ಮಾವಿನಬಳ್ಳಿಕೊಪ್ಪ, ವೀರೇಂದ್ರಗೌಡ, ಪರಮೇಶ್ ಮಣ್ಣತ್ತಿ, ಗುರುಕುಮಾರ್ ಪಾಟೀಲ್, ಸಣ್ಣಪ್ಪ ಮಾಕೊಪ್ಪ, ಚಂದ್ರಪ್ಪ ಅಂಗಡಿ, ಪ್ರಸನ್ನ ಶೇಟ್, ಧನಂಜಯ ಡಿ. ನಾಯ್ಕ್ ಸೇರಿದಂತೆ ಮತ್ತಿತರರಿದ್ದರು. ಮಧು ಹೇಳಿಕೆ ಸಭ್ಯತೆಯ ಲಕ್ಷಣವಲ್ಲ

ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಬಗ್ಗೆ ಗೌರವವಿದೆ. ಅವರ ಪುತ್ರ, ಶಿಕ್ಷಣ ಸಚಿವ ಮಧು ಬಂಗಾರಪ್ಪ ನಾಲಿಗೆ ಮೇಲೆ ಹಿಡಿತವಿಲ್ಲದೇ ಹೇಳಿಕೆಗಳ ನೀಡುವುದು ಮತ್ತು ಬಿಜೆಪಿ ಕಾರ್ಯಕರ್ತರ ಕುರಿತು ಹಗುರವಾಗಿ ಮಾತನಾಡುವುದು ಸಭ್ಯತೆಯ ಲಕ್ಷಣವಲ್ಲ. ಬಂಗಾರಪ್ಪ ಬಿಜೆಪಿಯಿಂದ ಸ್ಪರ್ಧಿಸಿದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಬೆಂಬಲ ನೀಡಿದ್ದಾರೆ. ಮಧು ಬಂಗಾರಪ್ಪ ಕೂಡ ಬಿಜೆಪಿಯಿಂದ ಮೊದಲ ಬಾರಿ ಸ್ಪರ್ಧಿಸಿದಾಗ ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದಾರೆ. ಅಂತಹ ಕಾರ್ಯಕರ್ತರ ವಿರುದ್ಧ ಮಾತನಾಡುವುದು ಅವರ ಅಹಂಕಾರ ಎತ್ತಿ ತೋರುತ್ತದೆ ಎಂದು ಬಿ.ವೈ.ರಾಘವೇಂದ್ರ ಆಪಾದಿಸಿದರು.

ಕುಟುಂಬಗಳ ನಡುವಿನ ಚುನಾವಣೆಯಲ್ಲ

ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ, ಎಸ್. ಬಂಗಾರಪ್ಪ ಕುಟುಂಬದ ನಡುವಿನ ಚುನಾವಣೆ ಎಂದು ಬಿಂಬಿಸುವುದು ಸಲ್ಲದು. ಈ ಬಾರಿಯ ಚುನಾವಣೆ ನೇರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ. ಕೆ.ಎಸ್.ಈಶ್ವರಪ್ಪ ಬಂಡಾಯ ಕೇಂದ್ರದ ವಿರುದ್ಧವಾಗಿದೆಯೇ ಹೊರತು ಯಡಿಯೂರಪ್ಪ ಕುಟುಂಬದ ವಿರುದ್ಧವಲ್ಲ. ಪ್ರಧಾನಿ ಮೋದಿಯವರು ನೀಡಿದ ಜನಪರ ಯೋಜನೆಗಳ ಮುಂದಿಟ್ಟು ಚುನಾವಣೆಯ ಸಮರ್ಥವಾಗಿ ಎದುರಿಸಲು ನಾವು ಸಿದ್ಧರಾಗಿರಾಗಿದ್ದೇವೆ.

ಬಿ.ವೈ.ರಾಘವೇಂದ್ರ, ಸಂಸದ, ಬಿಜೆಪಿ ಅಭ್ಯರ್ಥಿ