ಸಾರಾಂಶ
ಬಳ್ಳಾರಿ: ರೆಡ್ಡಿ ಜನಸಂಘದಿಂದ ಬೆಂಗಳೂರಿನಲ್ಲಿ ರೆಡ್ಡಿ ವಿಶ್ವವಿದ್ಯಾಲಯ ಆರಂಭಿಸುವ ಚಿಂತನೆಯಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ವೇಮ-ಹೇಮರೆಡ್ಡಿ ಸೌಹಾರ್ದ ಸಹಕಾರಿ ಬ್ಯಾಂಕ್ ಉದ್ಘಾಟನೆ, ಬಳ್ಳಾರಿ ರೆಡ್ಡಿ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರ, ರೆಡ್ಡಿ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ರೆಡ್ಡಿ ಜನಸಂಘ ಸ್ಥಾಪನೆಗೊಂಡು 100 ವರ್ಷಗಳಾಗಿವೆ. ವೈದ್ಯಕೀಯ, ದಂತ ವೈದ್ಯಕೀಯ ಹೊರತುಪಡಿಸಿ ಉಳಿದೆಲ್ಲ ವಿಭಾಗದ ಶಿಕ್ಷಣವನ್ನು ರೆಡ್ಡಿ ಜನಸಂಘದಿಂದ ನೀಡಲಾಗುತ್ತಿದೆ. 10 ಸಾವಿರಕ್ಕೂ ಹೆಚ್ಚು ರೆಡ್ಡಿ ಸಮುದಾಯ, ಇತರೆ ಸಮಾಜದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮದೇ ಆದ ವಿಶ್ವವಿದ್ಯಾಲಯ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ರೆಡ್ಡಿ ಸಮುದಾಯವನ್ನು ಸಂಘಟಿಸುವ ಕೆಲಸ ನಿರಂತರ ನಡೆಯುತ್ತಿದೆ. ನಮ್ಮಲ್ಲಿ ಒಗ್ಗಟ್ಟು ಮೂಡಿಸಿಕೊಂಡು ಸಮುದಾಯದ ಪ್ರಗತಿಗೆ ಶ್ರಮಿಸಬೇಕಾದ ಅಗತ್ಯವಿದೆ. ದೇಶಮಟ್ಟದಲ್ಲಿ ರೆಡ್ಡಿ ಸಮಾಜವನ್ನು ಒಗ್ಗೂಡಿಸುವ ಆಶಯದಿಂದ ರಾಷ್ಟ್ರಮಟ್ಟದ ಸಮಾವೇಶವನ್ನು ಈ ವರ್ಷ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.ನಗರ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಮಾತನಾಡಿ, ರೆಡ್ಡಿ ಸಮುದಾಯದಲ್ಲಿ ಐಕ್ಯತೆ ಕೊರತೆ ಇದೆ. ಇದನ್ನು ನೀಗಿಸುವ ಕೆಲಸವಾಗಬೇಕು. ಸಮಾಜದ ಹಿರಿಯರು ಎಲ್ಲರನ್ನೂ ಒಗ್ಗೂಡಿಸಿ ನಮ್ಮನಮ್ಮಲ್ಲಿ ಐಕ್ಯತೆ ಮೂಡಿಸಬೇಕು. ಸಮುದಾಯದ ಹಿರಿಯರಾದ ರಾಮಲಿಂಗಾರೆಡ್ಡಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಸಮಾಜದ ಹಿತಕ್ಕಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು. ರೆಡ್ಡಿ ಸಮುದಾಯದ ಪ್ರಗತಿಗೆ ಶ್ರಮಿಸುತ್ತಿರುವ ರಾಮಲಿಂಗಾರೆಡ್ಡಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎಂದು ಆಶಿಸಿದರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಹರಿಹರ ತಾಲೂಕಿನ ಮಹಾಯೋಗಿ ವೇಮನ ಸಂಸ್ಥಾನ ಮಠ ರೆಡ್ಡಿಗುರು ಪೀಠದ ವೇಮನಾನಂದ ಸ್ವಾಮೀಜಿ, ರೆಡ್ಡಿ ಸಮುದಾಯ ಮಕ್ಕಳಿಗೆ ಶಿಕ್ಷಣ ನೀಡಿ ಸಂಸ್ಕಾರವಂತರನ್ನಾಗಿಸಬೇಕು ಎಂದು ಹೇಳಿದರು.ಹೇಮ-ವೇಮ ರೆಡ್ಡಿ ಸೌಹಾರ್ದ ಸಹಕಾರಿ ಬ್ಯಾಂಕ್ ನ ಸಂಸ್ಥಾಪಕ ನಿರ್ದೇಶಕ ಗಣಪಾಲ್ ಐನಾಥ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.
ಲಕ್ಷ್ಮಿ ಅರುಣಾ ಜನಾರ್ದನ ರೆಡ್ಡಿ, ಬಸವರಾಜೇಶ್ವರಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ.ಮಹಿಪಾಲ್, ರಾಜ್ಯ ರೆಡ್ಡಿ ಜನಸಂಘದ ನಿರ್ದೇಶಕ ಎಂ.ಸಿ. ಪ್ರಭಾಕರ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಸ್.ಶೇಖರ ರೆಡ್ಡಿ ಮಾತನಾಡಿದರು.ರೆಡ್ಡಿ ನೌಕರರ ಸಂಘದ ಅಧ್ಯಕ್ಷ ಎಂ.ನಾಗರಾಜರೆಡ್ಡಿ, ಬಾಬು ರೆಡ್ಡಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸಾರೆಡ್ಡಿ, ನಗರದ ಶಿಶುವೈದ್ಯ ಹಾಗೂ ಕರ್ನಾಟಕ ಮೆಡಿಕಲ್ ಕೌನ್ಸಿಲ್ ಅಧ್ಯಕ್ಷ ಡಾ.ಯೋಗಾನಂದ ರೆಡ್ಡಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ನಿವೃತ್ತ ರೆಡ್ಡಿ ಸಮುದಾಯದ ನೌಕರರನ್ನು ಸನ್ಮಾನಿಸಲಾಯಿತು. ನಿವೃತ್ತ ಉಪನ್ಯಾಸಕ ಎನ್.ಬಸವರಾಜ್, ನಾಗರಾಜ ರೆಡ್ಡಿ ಕಾರ್ಯಕ್ರಮ ನಿರ್ವಹಿಸಿದರು.