ಕನ್ನಡಪ್ರಭ ವಾರ್ತೆ ‌ಮೇಲುಕೋಟೆ

ಹೋಬಳಿಯ ಸಣಬದಕೊಪ್ಪಲು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಚಿಂಪಲ್ ಟಿವಿ - ಟ್ಯಾಬ್ ಹೈಬ್ರಿಡ್ ಕಲಿಕಾ ಕಾರ್ಯಕ್ರಮಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚಾಲನೆ ನೀಡಿದರು.

ಸುತಾರ್‌ ಲರ್ನಿಂಗ್ ಫೌಂಡೇಶನ್ ಮತ್ತು ಪುಟ್ಟಣ್ಣಯ್ಯ ಫೌಂಡೇಶನ್ ಜಂಟಿ ಸಹಯೋಗದೊಂದಿಗೆ ಆಯ್ದ 10 ಸರ್ಕಾರಿ ಶಾಲೆಗಳಲ್ಲಿ ವಿನೂತನ ‘ಟ್ಯಾಬ್ ಬೇಸ್ಡ್ ಲರ್ನಿಂಗ್’ (Tab-based Learning) ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ದರ್ಶನ್‌ ಪುಟ್ಟಣ್ಣಯ್ಯ, ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳಲ್ಲಿ ಡಿಜಿಟಲ್ ಕೌಶಲ್ಯ ಹಾಗೂ ಮೂಲ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನವನ್ನು ಉತ್ತಮಪಡಿಸುವ ನಿಟ್ಟಿನ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಶಾಲೆಗಳ ಎಲ್ಲ ಸಿಬ್ಬಂದಿವರ್ಗ ಮತ್ತು ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದರು.

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಸಣಬದಕೊಪ್ಪಲುವಿನಲ್ಲಿ ಆರಂಭವಾಗಿರುವ ಈ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಚೆಲುವರಸನ ಕೊಪ್ಪಲು, ಶಂಭೂನಹಳ್ಳಿ, ಕೆ.ಬೆಟ್ಟಹಳ್ಳಿ, ಡಾಮಡಹಳ್ಳಿ, ಚಗಶೆಟ್ಟಹಳ್ಳಿ, ಹರಳಹಳ್ಳಿ, ಕೆನ್ನಾಳು, ಎಲೆಕೆರೆ ಹಾಗೂ ಟಿ.ಎಸ್.ಛತ್ರ ಸರ್ಕಾರಿ ಶಾಲೆಗಳಲ್ಲಿ ನಡೆಯಲಿದೆ. ನಂತರ ಪಾಂಡವಪುರ ತಾಲೂಕಿನ ಎಲ್ಲ ಶಾಲೆಗಳಲ್ಲಿ ನಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಸರ್ಕಾರಿ ಶಾಲೆ ಉಳಿವಿಗೆ ಪೋಷಕರು ಕೂಡ ಮುತುವರ್ಜಿ ವಹಿಸಬೇಕು. ಈಗಾಗಲೇ ಶಾಲೆಗಳನ್ನು ಉಳಿಸಲು ಸರ್ಕಾರಿ ಶಾಲೆಗಳ ಶಿಕ್ಷಕರು, ಸಿಬ್ಬಂದಿ ಮತ್ತು ಅಧಿಕಾರಿಗಳು ಬೆಂಬಲಿಸುತ್ತಿದ್ದಾರೆ. ನಮ್ಮಲ್ಲಿ ಲಭ್ಯವಿರುವ ಎಲ್ಲ ಸಂಪನ್ಮೂಲಗಳನ್ನೂ ಬಳಸಿಕೊಂಡು ಸರ್ಕಾರಿ ಶಾಲೆಗಳನ್ನು ಸಬಲೀಕರಿಸೋಣ ಎಂದು ಕರೆನೀಡಿದರು.


1ನೇ ತರಗತಿಯಿಂದ ಪ್ರೈಮರಿ ಶಾಲಾ ಮಕ್ಕಳನ್ನು ಗುರಿಯಾಗಿಸಿಕೊಂಡು ರೂಪಿಸಲಾಗಿರುವ ಈ ಕಾರ್ಯಕ್ರಮ, ಮುಂದಿನ ದಿನಗಳಲ್ಲಿ ಇಡೀ ಮೇಲುಕೋಟೆ ತಾಲೂಕು ಹಾಗೂ ಮಂಡ್ಯ ಜಿಲ್ಲೆಯಾದ್ಯಂತ ವಿಸ್ತರಣೆಯಾಗುವ ಗುರಿ ಹೊಂದಿದೆ ಎಂದು ಹೇಳಿದರು.

ಆಟದ ಮೂಲಕ ಪಾಠ: ಶಿಕ್ಷಕರು ಬೋರ್ಡ್ ಮೇಲೆ ಬರೆದು ಕಲಿಸುವ ಸಾಂಪ್ರದಾಯಿಕ ವಿಧಾನದೊಂದಿಗೆ, ಮಕ್ಕಳು ಆ ಕಲಿಕೆಯನ್ನು ಮತ್ತಷ್ಟು ಸುಲಭವಾಗಿ ಗ್ರಹಿಸಲು ‘ಚಿಂಪಲ್’ (Chimple) ಎಂಬ ವಿಶೇಷ ಆ್ಯಪ್ ಅನ್ನು ಬಳಸಲಾಗುತ್ತಿದೆ. ಈ ಆ್ಯಪ್ ರಾಜ್ಯ ಪಠ್ಯಕ್ರಮ (State Syllabus) ಮತ್ತು ಕೇಂದ್ರ ಸರ್ಕಾರದ ‘ನಿಪುಣ್ ಭಾರತ್’ (Nipun Bharat) ಯೋಜನೆಯ ಸಿಲಬಸ್ ಅನ್ನು ಒಳಗೊಂಡಿದೆ ಎಂದರು.

ಇಲ್ಲಿ ಸಂಪೂರ್ಣ ಪಠ್ಯವನ್ನು ಗೇಮಿಫೈಡ್ (Gamified) ಮಾದರಿಯಲ್ಲಿ ಅಂದರೆ ಆಡಿಯೋ, ವಿಡಿಯೋ ಮತ್ತು ಆಟಗಳ ಮುಖಾಂತರ ವಿನ್ಯಾಸಗೊಳಿಸಲಾಗಿದೆ. ಇದರಿಂದ ಮಕ್ಕಳು ಸ್ವಯಂ ಕಲಿಕೆಯಲ್ಲಿ (Self-learning) ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಕಲಿತ ವಿಷಯಗಳು ಮನಸ್ಸಿನಲ್ಲಿ ದೀರ್ಘಕಾಲ ಉಳಿಯುವಂತೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಶಾಲಾ ಅವಧಿಯ ನಂತರ ಕೂಡ ಮಕ್ಕಳು ಮನೆಯಲ್ಲಿ ಕಲಿಯಲು ‘ಹೋಮ್ ಲರ್ನಿಂಗ್’ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ ಶಾಲೆಯ ಮಕ್ಕಳ ಪೋಷಕರು ಮತ್ತು ಸ್ಥಳೀಯ ಸಮುದಾಯದವರು ಶಾಲೆಗೆ ಬಂದು, ತಮ್ಮ ಮಕ್ಕಳು ಹೇಗೆ ಕಲಿಯುತ್ತಿದ್ದಾರೆ ಹಾಗೂ ಓದುತ್ತಿದ್ದಾರೆ ಎಂಬುದನ್ನು ಪ್ರತ್ಯಕ್ಷವಾಗಿ ತಿಳಿದುಕೊಳ್ಳಲು ಈ ಯೋಜನೆ ಪ್ರೇರೇಪಣೆ ನೀಡುತ್ತದೆ ಎಂದು ತಿಳಿಸಿದರು.