ರೈತರು ತಮ್ಮ ಜಮೀನಿನ ಬದುಗಳ ಮೇಲೆ ಗಿಡ ಮರ ನೆಟ್ಟು ಮಣ್ಣು ಸವೆತವನ್ನು ತಪ್ಪಿಸಬೇಕು. ಕೃಷಿ ಭೂಮಿಗೆ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಬಳಸುವುದನ್ನು ಕಡಿಮೆ ಮಾಡಿ ಮಣ್ಣು ಸಂರಕ್ಷಣೆ ಮಾಡುವ ಜೊತೆಗೆ ಕೆರೆ ಕಟ್ಟೆಗಳಲ್ಲಿ ನೀರು ನಿಲ್ಲುವಂತೆ ಮಾಡಿ ಜಲಸಂರಕ್ಷಣೆ ಮಾಡಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮಣ್ಣು, ನೀರು ಮತ್ತು ಗಾಳಿ ವಿಷಕಾರಿಯಾದರೆ ಮನುಷ್ಯ ಸೇರಿದಂತೆ ಯಾವೊಂದು ಜೀವಿಯೂ ಬದುಕುಳಿಯಲು ಸಾಧ್ಯವಿಲ್ಲ. ಹಾಗಾಗಿ ಮಣ್ಣಿನ ಮಹತ್ವವನ್ನು ಪ್ರತಿಯೊಬ್ಬರೂ ಅರ್ಥೈಸಿಕೊಂಡು ಸಂರಕ್ಷಣೆ ಮಾಡಬೇಕು ಎಂದು ರಾಜ್ಯ ರೈತ ಉತ್ಪಾದಕರ ಸಂಸ್ಥೆ ನಿರ್ದೇಶಕ ಎನ್.ಜೆ.ರಾಜೇಶ್ ಹೇಳಿದರು.

ತಾಲೂಕಿನ ದೇವಲಾಪುರದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಲಾನಯನ ಅಭಿವೃದ್ಧಿ ಇಲಾಖೆ ಮತ್ತು ಕೃಷಿ ಇಲಾಖೆಯ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಜಲಾನಯನ ಅಭಿವೃದ್ಧಿ ಘಟಕ ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆ ವಾಟರ್‌ಶೆಡ್ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.

ರೈತರು ತಮ್ಮ ಜಮೀನಿನ ಬದುಗಳ ಮೇಲೆ ಗಿಡ ಮರ ನೆಟ್ಟು ಮಣ್ಣು ಸವೆತವನ್ನು ತಪ್ಪಿಸಬೇಕು. ಕೃಷಿ ಭೂಮಿಗೆ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಬಳಸುವುದನ್ನು ಕಡಿಮೆ ಮಾಡಿ ಮಣ್ಣು ಸಂರಕ್ಷಣೆ ಮಾಡುವ ಜೊತೆಗೆ ಕೆರೆ ಕಟ್ಟೆಗಳಲ್ಲಿ ನೀರು ನಿಲ್ಲುವಂತೆ ಮಾಡಿ ಜಲಸಂರಕ್ಷಣೆ ಮಾಡಬೇಕು. ಒಟ್ಟಾರೆ ಭೂಮಿಯಲ್ಲಿ ಮಣ್ಣು ಸವೆಯದಂತೆ ರೈತರು ಎಚ್ಚರ ವಹಿಸಬೇಕೆಂದು ಮನವಿ ಮಾಡಿದರು.

ಪಾಂಡವಪುರ ಉಪ ವಿಭಾಗದ ಉಪ ಕೃಷಿ ನಿರ್ದೇಶಕ ಡಾ.ಭಾನುಪ್ರಕಾಶ್ ಮಾತನಾಡಿ, ಕಳೆದೊಂದು ತಿಂಗಳಿಂದ ದೇಶಾದ್ಯಂತ ಜಲಾನಯನ ಮಹೋತ್ಸವ ನಡೆಯುತ್ತಿದೆ. ಕಳೆದ ಮೂರು ವರ್ಷದ ಹಿಂದೆ ದೇವಲಾಪುರದಲ್ಲಿ ಯೋಜನೆಗೆ ಚಾಲನೆ ನೀಡಿ ರೈತರಿಗೆ ವಿವಿಧ ಕೃಷಿ ಪರಿಕರ ವಿತರಿಸಲಾಗಿತ್ತು ಎಂದರು.

ಈ ಯೋಜನೆ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಸಮರ್ಪಕವಾಗಿ ನಿರ್ವಹಿಸಲು ಸ್ಥಳೀಯ ಗ್ರಾಪಂಗೆ ಹಸ್ತಾಂತರಿಸಲಾಗುತ್ತಿದೆ. ರೈತರು ತಮ್ಮ ಜಮೀನುಗಳಲ್ಲಿ ಮಣ್ಣು ಮತ್ತು ನೀರು ಕೊಚ್ಚಿ ಹೋಗದಂತೆ ಅಗತ್ಯ ಕ್ರಮವಹಿಸಬೇಕು ಎಂದರು.

ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್ ಮಣ್ಣು ಮತ್ತು ನೀರು ಸಂರಕ್ಷಣೆ ಮಾಡುವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ವಾಟರ್‌ಶೆಡ್ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ರಸಪ್ರಶ್ನೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಮಣ್ಣು ಮತ್ತು ನೀರನ್ನು ಸಂರಕ್ಷಣೆ ಮಾಡುವ ಕುರಿತು ವಿಸಿ ಫಾರಂನ ಕೃಷಿ ವಿಜ್ಞಾನಿ ಡಾ.ಅತಿಫಾ ಮುನಾವರಿ ಉಪನ್ಯಾಸ ನೀಡಿದರು. ನಂತರ ಅರ್ಹ ಫಲಾನುಭವಿ ರೈತರಿಗೆ ವಿವಿಧ ಕೃಷಿ ಪರಿಕರಗಳನ್ನು ವಿತರಿಸಲಾಯಿತು. ಗ್ರಾಪಂ ಅಧ್ಯಕ್ಷೆ ಚಿಕ್ಕಬೋರಮ್ಮ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧಿಕಾರಿ ಸಂದೀಪ್, ಕೃಷಿ ಅಧಿಕಾರಿ ಯುವರಾಜ್, ಗ್ರಾಪಂ ಕಾರ್ಯದರ್ಶಿ ಬೆಟ್ಟಸ್ವಾಮಿ, ತೋಟಗಾರಿಕೆ ಇಲಾಖೆ ಅಧಿಕಾರಿ ಸೇರಿದಂತೆ ಇಲಾಖೆ ಸಿಬ್ಬಂದಿ ಮತ್ತು ರೈತರು ಇದ್ದರು.