ಬಿಜೆಪಿ ಪಾಳಯದಲ್ಲಿ ಪ್ರಧಾನಿ ಮೋದಿ ಆಗಮನದ ಉತ್ಸಾಹ

| Published : Apr 27 2024, 01:22 AM IST

ಬಿಜೆಪಿ ಪಾಳಯದಲ್ಲಿ ಪ್ರಧಾನಿ ಮೋದಿ ಆಗಮನದ ಉತ್ಸಾಹ
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿಯೂ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಬೇಕೆಂಬ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಚಾರಕ್ಕೆ ಬರುತ್ತಿದ್ದಾರೆ. ಸುಮಾರು 2 ಲಕ್ಷ ಜನ ಸೇರುವ ನಿರೀಕ್ಷೆ ಹೊಂದಲಾಗಿದೆ.

ಕೃಷ್ಣ ಎನ್‌. ಲಮಾಣಿ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಬಳ್ಳಾರಿ-ಕೊಪ್ಪಳ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್‌ 28ರಂದು ಸಂಜೆ 4ಕ್ಕೆ ಹೊಸಪೇಟೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಾಳಯದಲ್ಲೀಗ ಉತ್ಸಾಹ ಗರಿಗೆದರಿದೆ.

ಈ ಬಾರಿಯೂ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಬೇಕೆಂಬ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಚಾರಕ್ಕೆ ಬರುತ್ತಿದ್ದಾರೆ. ಸುಮಾರು 2 ಲಕ್ಷ ಜನ ಸೇರುವ ನಿರೀಕ್ಷೆ ಹೊಂದಲಾಗಿದೆ. ಈಗಾಗಲೇ ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಬಿಜೆಪಿ ಜಿಲ್ಲಾ ಘಟಕಗಳು ಪ್ರಧಾನಿ ಮೋದಿ ಬರುವ ಹಿನ್ನೆಲೆಯಲ್ಲಿ ಕೆಲ ಜವಾಬ್ದಾರಿಯನ್ನು ಹಂಚಿಕೆ ಮಾಡಿವೆ. ಜನರು ಅಪಾರ ಸಂಖ್ಯೆಯಲ್ಲಿ ಬರುವ ಹಿನ್ನೆಲೆಯಲ್ಲಿ ಯಾವುದೇ ಅಡೆತಗಡೆಗಳು ಆಗದಂತೆ ಮುನ್ನೆಚ್ಚರಿಕೆ ಕ್ರಮವಹಿಸಲು ಕೂಡ ಕಾರ್ಯಕರ್ತರಿಗೆ ಆಯಾ ಜಿಲ್ಲಾ ಘಟಕಗಳ ಅಧ್ಯಕ್ಷರು ಸೂಚನೆ ರವಾನಿಸಿದ್ದಾರೆ. ಸ್ವತಃ ಪ್ರಧಾನಿಯವರೇ ಚುನಾವಣಾ ಪ್ರಚಾರ ಅಖಾಡಕ್ಕೆ ಇಳಿಯುತ್ತಿರುವ ಈ ಹೊತ್ತಿನಲ್ಲಿ ಬಿಜೆಪಿ ಪಾಳಯದಲ್ಲಿ ಹೊಸ ಹುಮ್ಮಸ್ಸು ನೀಡಿದೆ. ಹಾಗಾಗಿ, ಕಾರ್ಯಕರ್ತರು ಉತ್ಸಾಹದಿಂದ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಬಿಜೆಪಿಗೆ ಟಾನಿಕ್‌

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಭಾರೀ ಹೊಡೆತ ಬಿದ್ದಿದೆ. ಬಳ್ಳಾರಿ ಲೋಕಸಭೆ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರು ಗೆದ್ದಿದ್ದಾರೆ. ಇನ್ನೂ ಒಂದೇ ಒಂದು ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ. ಬಿಜೆಪಿ ಮೈತ್ರಿ ಪಕ್ಷ ಜೆಡಿಎಸ್‌ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಇನ್ನೂ ದಾವಣಗೆರೆ ವಿಧಾನಸಭೆ ಕ್ಷೇತ್ರದಲ್ಲಿ ಬರುವ ಹರಪನಹಳ್ಳಿಯಲ್ಲಿ ಪಕ್ಷೇತರ ಶಾಸಕರು ಇದ್ದಾರೆ. ಇವರು ಈಗ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದಾರೆ. ಕೊಪ್ಪಳ ಲೋಕಸಭೆ ಕ್ಷೇತ್ರದಲ್ಲಿ ಬರುವ ಸಿರುಗುಪ್ಪದಲ್ಲಿ ಕಾಂಗ್ರೆಸ್‌ ಶಾಸಕರು ಇದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಎರಡು ಜಿಲ್ಲೆಯ ಹತ್ತು ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿರುವುದು ಒಂದು ಕ್ಷೇತ್ರ ಮಾತ್ರ. ಈ ಹಿಂದೆ ಕಾಂಗ್ರೆಸ್‌ನ ಭದ್ರಕೋಟೆಯನ್ನು ಛಿದ್ರ ಮಾಡಿ, ಕೇಸರಿ ಪಾಳಯ ಅಧಿಪತ್ಯ ಸಾಧಿಸಿತ್ತು. ಆದರೆ, ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಗೆ ಭಾರೀ ಹಿನ್ನಡೆಯಾಗಿತ್ತು. ಹಾಗಾಗಿ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಬಾವುಟ ಹಾರಿಸಿ, ಆಗಿರುವ ನಷ್ಟ ಭರ್ತಿ ಮಾಡಿಕೊಳ್ಳಲು ಬಿಜೆಪಿ ಮತ್ತೆ ಮೋದಿ ಮೋರೆ ಹೋಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಆಗಿರುವ ಹಿನ್ನಡೆಯನ್ನು ಭರ್ತಿ ಮಾಡಿಕೊಳ್ಳಲು ಬಿಜೆಪಿ ಮೋದಿ ಫ್ಯಾಕ್ಟರ್‌ ಬಳಕೆ ಮಾಡಿಕೊಳ್ಳುತ್ತಿದೆ. ಸ್ವತಃ ಪ್ರಧಾನಿ ಅವರೇ ಪ್ರಚಾರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಗೆ ಟಾನಿಕ್‌ ನೀಡಿದಂತಾಗಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ, ಶ್ರೀರಾಮುಲು ಅವರು ಕೂಡ ಈಗಾಗಲೇ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಮೋದಿ ಅವರು ಪ್ರಚಾರ ಮಾಡಲು ಬರುತ್ತಿರುವುದರಿಂದ ಇನ್ನಷ್ಟು ಬಲ ನೀಡಿದಂತಾಗಿದೆ.

ಹೊಸಪೇಟೆಗೆ ಎರಡನೇ ಬಾರಿ ಮೋದಿ ಆಗಮನ

2023ರ ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೊಸಪೇಟೆಗೆ ಆಗಮಿಸಿದ್ದರು. ಪುನೀತ್‌ ರಾಜ್‌ಕುಮಾರ ಜಿಲ್ಲಾ ಕ್ರೀಡಾಂಗಣದಲ್ಲೇ ಪ್ರಚಾರ ಮಾಡಿದ್ದರು. ಈಗ ವರ್ಷದ ಅಂತರದಲ್ಲಿ ಎರಡನೇ ಬಾರಿಗೆ ಮೋದಿ ಅವರು ಹೊಸಪೇಟೆಗೆ ಆಗಮಿಸುತ್ತಿದ್ದಾರೆ. ಈಗ ಜಿಲ್ಲಾ ಕ್ರೀಡಾಂಗಣದಲ್ಲೇ ಚುನಾವಣಾ ಭಾಷಣ ಮಾಡಲಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಮೋದಿ ಪ್ರಚಾರಕ್ಕೆ ಬಂದಿದ್ದರೂ ಫಲಿತಾಂಶ ಮಾತ್ರ ಉಲ್ಟಾ ಆಗಿತ್ತು. ವಿಜಯನಗರ ಜಿಲ್ಲೆಗೆ ಎರಡನೇ ಬಾರಿ ಆಗಮಿಸುತ್ತಿರುವ ಮೋದಿ ಈ ಬಾರಿ ಕಮಾಲ್‌ ಮಾಡಲಿದ್ದಾರೆ ಎಂಬ ನಿರೀಕ್ಷೆ ಬಿಜೆಪಿ ವಲಯದಲ್ಲಿ ಹೆಚ್ಚಿದೆ.

ಬಳ್ಳಾರಿ ಲೋಕಸಭೆ ಚುನಾವಣೆ ಅಖಾಡ ಕಾವೇರುತ್ತಿರುವ ಈ ಹೊತ್ತಿನಲ್ಲಿ ಪ್ರಧಾನಿಯೇ ಬರುತ್ತಿರುವುದರಿಂದ ಅಖಾಡ ಇನ್ನಷ್ಟು ರಂಗೇರುತ್ತಿದೆ. ಅತ್ತ ಕಾಂಗ್ರೆಸ್ ಪಾಳಯ ಎಐಸಿಸಿ ನಾಯಕ ರಾಹುಲ್‌ ಗಾಂಧಿಯವರನ್ನು ಕರೆತಂದು ಪ್ರಚಾರ ಮಾಡಿಸುತ್ತಿದೆ. ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಬಳ್ಳಾರಿ ಲೋಕಸಭೆ ಕ್ಷೇತ್ರಕ್ಕೆ ಮೂರು ಬಾರಿ ಆಗಮಿಸಿ ಪ್ರಚಾರ ನಡೆಸಲಿದ್ದಾರೆ.

ಭವ್ಯ ವೇದಿಕೆ ನಿರ್ಮಾಣ

ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮಾವೇಶಕ್ಕಾಗಿ ಭವ್ಯ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಬಿಸಿಲು ಬೆಳಗ್ಗೆಯೇ ಏರುತ್ತಿರುವ ಹಿನ್ನೆಲೆಯಲ್ಲಿ ಶಾಮಿಯಾನಾ ಹಾಕಿ ನೆರಳಿನ ವ್ಯವಸ್ಥೆಯೂ ಮಾಡಲಾಗುತ್ತಿದೆ. ಈಗಾಗಲೇ ಎಸ್‌ಪಿಜಿ ತಂಡ ವೇದಿಕೆ ಹಾಗೂ ಹೆಲಿಪ್ಯಾಡ್‌ನಲ್ಲಿ ಪರಿಶೀಲನೆ ಕೂಡ ನಡೆಸಿದೆ. ಬಳ್ಳಾರಿ ಎಸ್ಪಿ ಶ್ರೀಹರಿಬಾಬು ನೇತೃತ್ವದಲ್ಲಿ ಭದ್ರತಾ ಕ್ರಮದ ಪರಿಶೀಲನೆಯೂ ನಡೆದಿದೆ.ಕಾರ್ಯಕರ್ತರಲ್ಲಿ ಉತ್ಸಾಹ

ಪ್ರಧಾನಿ ನರೇಂದ್ರ ಮೋದಿ ಅವರು ಏ. 28ರಂದು ಸಂಜೆ 4ಕ್ಕೆ ಹೊಸಪೇಟೆಗೆ ಆಗಮಿಸಲಿದ್ದಾರೆ. ಬಳ್ಳಾರಿ, ಕೊಪ್ಪಳ ಲೋಕಸಭಾ ಕ್ಷೇತ್ರಗಳಿಂದ ಅಪಾರ ಸಂಖ್ಯೆಯಲ್ಲಿ ಜನರು ಸೇರಲಿದ್ದಾರೆ. ಮೋದಿ ಪ್ರಚಾರದಿಂದ ನಮ್ಮ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಲಿದೆ.

ಬಿ.ಶ್ರೀರಾಮುಲು, ಮಾಜಿ ಸಚಿವರು ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ.