ಮಾಧ್ಯಮಗಳಿಗೆ ಕಳಂಕ ತರುವ ಭ್ರಷ್ಟರ ಬಯಲು ಮಾಡಿ: ರವಿ ಹೆಗಡೆ

| Published : Jul 14 2024, 01:36 AM IST

ಸಾರಾಂಶ

ಚಿತ್ರದುರ್ಗದಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಕನ್ನಡಪ್ರಭ, ಏಷಿಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಅವರಿಗೆ ಬಯಲು ಸೀಮೆ ಗೌರವ ನೆರವೇರಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಾಧ್ಯಮಗಳಿಗೆ ಕಳಂಕ ತರುವ ಭ್ರಷ್ಟರು ನಮ್ಮ ನಡುವೆ ಇದ್ದಾರೆ. ಇಂತಹವರ ಹುಡುಕಿ ಸಮಾಜದ ಎದಿರು ಬಯಲು ಮಾಡುವ ತುರ್ತು ಅನಿವಾರ್ಯವಿದೆ ಎಂದು ಕನ್ನಡಪ್ರಭ, ಏಷಿಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪದಕ ರವಿ ಹೆಗಡೆ ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಘಟಕ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾದ ಪತ್ರಿಕಾ ದಿನಾಚರಣೆಯಲ್ಲಿ ದಿಕ್ಸೂಚಿ ಮಾತುಗಳನ್ನಾಡಿದ ಅವರು, ಪ್ರಸಕ್ತ ಸಮಾಜದಲ್ಲಿ ಮಾಧ್ಯಮ ಎನ್ನುವುದು ಭ್ರಷ್ಟಾಚಾರ ಮಾಡಲು ಸಲಕರಣೆಯಾಗಿ ಬಳಕೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದರು.

ಜುಲೈ ಒಂದನೇ ತಾರೀಖನ್ನು ಪತ್ರಿಕಾ ದಿನಾಚರಣೆ ಎನ್ನುವ ಬದಲು ಮಾಧ್ಯಮ ದಿನಾಚರಣೆ ಎಂದು ಕರೆದರೆ ಹೆಚ್ಚು ಅರ್ಥಪೂರ್ಣ ಎನಿಸುತ್ತದೆ. ಮೊದಲ ಪತ್ರಿಕೆ ಪ್ರಾರಂಭವಾದ ದಿನಗಳಲ್ಲಿ ಮುದ್ರಣ ಮಾಧ್ಯಮ ಅಸ್ತಿತ್ವದಲ್ಲಿತ್ತು. ಆದರೆ ಈಗ ಟಿವಿ ಹಾಗೂ ಡಿಜಿಟಲ್ ಮಾಧ್ಯಮವೂ ಕೂಡ ಅಸ್ತಿತ್ವದಲ್ಲಿರುವುದರಿಂದ, ಮಾಧ್ಯಮ ದಿನಾಚರಣೆ ಎನ್ನುವುದು ಸೂಕ್ತ. ಈ ದಿನವನ್ನು ಆತ್ಮಾವಲೋಕ ದಿನವಾಗಿ ಆಚರಿಸಬೇಕು. ವೃತ್ತಿಪರತೆ ಅಳವಡಿಸಕೊಳ್ಳುವ ಮೂಲಕ ಸಮಾಜ ಸರಿದಾರಿಯಲ್ಲಿ ತರಲು ಪ್ರಯತ್ನಿಸಬೇಕು ಎಂದರು.

ಮಾಧ್ಯಮಗಳಲ್ಲಿಂದು ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ವಸೂಲಿ ದಂಧೆ ನಡೆಯುತ್ತಿದೆ. ಭ್ರಷ್ಟಾಚಾರದ ಕುರಿತು ಪ್ರಕಟವಾದ ಸುದ್ದಿಗಳಿಗಿಂತ, ಪ್ರಕಟವಾಗದೇ ಮುಚ್ಚಿ ಹೋಗುವ ಭ್ರಷ್ಟಾಚಾರದ ಸುದ್ದಿಗಳ ಬಗ್ಗೆ ಹೆಚ್ಚು ಯೋಚಿಸುವ ಅನಿವಾರ್ಯತೆಯಿದೆ. ಮಾಧ್ಯಮಗಳಿಗೆ ಕಳಂಕ ತರುವ ಭ್ರಷ್ಟರನ್ನು ಖಂಡಿಸಬೇಕು. ಪತ್ರಕರ್ತರ ಸಂಘಗಳು ಇಂತಹವರಿಗೆ ಮನ್ನಣೆ ನೀಡಬಾರದು ಎಂದು ರವಿ ಹೆಗಡೆ ಹೇಳಿದರು.

ಸರ್ಕಾರಗಳನ್ನು ಸರಿದಾರಿಗೆ ತರುವ ಶಕ್ತಿ ಮಾಧ್ಯಮಗಳಿಗಿದೆ. ಹಗರಣಗಳನ್ನು ಬಯಲಿಗೆ ಎಳೆಯುವ ಮೂಲಕ ಭ್ರಷ್ಟಾಚಾರನ್ನು ತಡೆಗಟ್ಟಬಹದು. ರಾಜ್ಯದಲ್ಲಿ ನಡೆದ ಪಿಎಸ್ಐ ನೇಮಕಾತಿ ಹಗರಣವನ್ನು ಕನ್ನಡ ಪ್ರಭ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿತು. ಏನೂ ಆಗಿಲ್ಲವೆಂದು ಹೇಳಿದ ಸರ್ಕಾರವೇ ಉನ್ನತ ಅಧಿಕಾರಿಗಳು ಸೇರಿ100ಕ್ಕೂ ಹೆಚ್ಚು ಜನರ ಬಂಧಿಸಿತು ಎಂದರು.

ಚಿತ್ರದುರ್ಗ ಜಿಲ್ಲೆ ಪತ್ರಕರ್ತರು ಅಭಿವೃದ್ದಿ ಪರ ಆಲೋಚಿಸಿದ್ದಾರೆ. ಭದ್ರಾ ಮೇಲ್ದಂಡೆಯಂತಹ ₹22 ಸಾವಿರ ಕೋಟಿ ವೆಚ್ಚದ ಬೃಹತ್ ಯೋಜನೆ ಜಾರಿಗೆ ಕಾರಣರಾಗಿದ್ದಾರೆ. ಈ ನಡೆಗಳು ಇಷ್ಟಕ್ಕೆ ನಿಲ್ಲಬಾರದು. ಭವಿಷ್ಯದಲ್ಲಿ ಯೋಜನೆ ಸರಿ ದಿಕ್ಕಿನಲ್ಲಿ ಸಾಗುವ ಬಗ್ಗೆ ನಿಗಾವಹಿಸಬೇಕೆಂದು ಹೇಳಿದರು.

ಕವಿ ಹಾಗೂ ಜನಪರ ಹೋರಾಟಗಾರ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿ, ನಾಡಿನಲ್ಲಿ ಜನಪರ, ರೈತ ಹಾಗೂ ಪರಿಸರ ರಕ್ಷಣೆ ಹೋರಾಟಗಳಲ್ಲಿ ಪತ್ರಿಕೆಗಳು ಹಾಗೂ ಪತ್ರಕರ್ತರ ಪಾತ್ರ ದೊಡ್ಡದಿದೆ. ಸಾಮಾಜಿಕ ಹೋರಾಟಗಾರಿಗೆ ಬೆನ್ನೆಲುಬಾಗಿ ನಿಂತು ಪತ್ರಕರ್ತರು ಕಾರ್ಯನಿರ್ವಹಿಸುತ್ತಾರೆ. ಬಹಳಷ್ಟು ವಿಷಯಗಳು ಪತ್ರಕರ್ತರ ಮೂಲಕವೇ ಸಾಮಾಜಿಕ ಹೋರಾಟಗಾರರಿಗೆ ತಲುಪುತ್ತವೆ. ಸರ್ಕಾರದ ನೀತಿ ನಿರೂಪಣೆಗಳ ಬಗ್ಗೆ ಜನರಿಗೆ ಮುಂಚಿತವಾಗಿ ಜಾಗೃತಗೊಳಿಸುವ ಕಾರ್ಯವನ್ನು ಮಾಧ್ಯಮಗಳು ಮಾಡುತ್ತಾ ಬಂದಿವೆ ಎಂದರು.

ಇದೇ ಸಂದರ್ಭದಲ್ಲಿ ಕನ್ನಡಪ್ರಭ, ಏಷಿಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಅವರಿಗೆ ಬಯಲು ಸೀಮೆ ಗೌರವ ನೆರವೇರಿಸಲಾಯಿತು. ಸಂಸದ ಗೋವಿಂದ ಕಾರಜೋಳ, ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್, ಶಾಸಕರಾದ ಟಿ.ರಘುಮೂರ್ತಿ, ವೀರೇಂದ್ರಪಪ್ಪಿ, ವಿಪ ಸದಸ್ಯ ನವೀನ್, ಪತ್ರಕರ್ತರ ಸಂಘದ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಇದ್ದರು.