ಸಾರಾಂಶ
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಅಕ್ರಮ ಹಣ ವರ್ಗಾವಣೆ ಮೂಲಕ ಪಡೆದಿದ್ದರು ಎನ್ನಲಾದ 20.19 ಕೋಟಿ ರು. ಹಣವನ್ನು ತಾವು ಉಸ್ತುವಾರಿ ಹೊತ್ತಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮಾಜಿ ಸಚಿವ ಬಿ.ನಾಗೇಂದ್ರ ವ್ಯಯಿಸಿದ್ದರು
ಬೆಂಗಳೂರು : ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಅಕ್ರಮ ಹಣ ವರ್ಗಾವಣೆ ಮೂಲಕ ಪಡೆದಿದ್ದರು ಎನ್ನಲಾದ 20.19 ಕೋಟಿ ರು. ಹಣವನ್ನು ತಾವು ಉಸ್ತುವಾರಿ ಹೊತ್ತಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮಾಜಿ ಸಚಿವ ಬಿ.ನಾಗೇಂದ್ರ ವ್ಯಯಿಸಿದ್ದರು ಎಂದು ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಲಯ (ಇ.ಡಿ.) ಮಾಹಿತಿ ನೀಡಿದೆ ಎಂದು ತಿಳಿದು ಬಂದಿದೆ.
ನಾಗೇಂದ್ರ ಅವರನ್ನು ಬಂಧಿಸಿದ ಬಳಿಕ ಹೆಚ್ಚಿನ ತನಿಖೆ ಸಲುವಾಗಿ ವಶಕ್ಕೆ ಪಡೆಯಲು ನಗರದ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಇ.ಡಿ. ಅಧಿಕಾರಿಗಳು ರಿಮ್ಯಾಂಡ್ ಅಪ್ಲಿಕೇಷನ್ ಸಲ್ಲಿಸಿದ್ದು, ಅದರಲ್ಲಿ ಲೋಕಸಭಾ ಚುನಾವಣೆಗೆ ವಾಲ್ಮೀಕಿ ನಿಗಮದ ಹಗರಣದ ಹಣ ವೆಚ್ಚವಾಗಿರುವ ಬಗ್ಗೆ ಉಲ್ಲೇಖಿಸಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಈ ಸಂಬಂಧ ರಿಮ್ಯಾಂಡ್ ಅಪ್ಲಿಕೇಷನ್ ಎನ್ನಲಾದ ಕೆಲ ಪುಟಗಳು ಕೂಡ ಬಹಿರಂಗವಾಗಿವೆ.
ಹೇಗೆ ವಂಚನೆ?:
ಇದೇ ವರ್ಷದ ಮಾರ್ಚ್ 4ರಂದು 25 ಕೋಟಿ ರು., 6ರಂದು 25 ಕೋಟಿ ರು., 21ರಂದು 44 ಕೋಟಿ ರು., 22ರಂದು 33 ಕೋಟಿ ರು. ಹಾಗೂ ಮೇ 21ರಂದು 50 ಕೋಟಿ ರು. ಸೇರಿದಂತೆ ಒಟ್ಟು 187.33 ಕೋಟಿ ರು. ಹಣವು ವಾಲ್ಮೀಕಿ ನಿಗಮದ ಬ್ಯಾಂಕ್ ಖಾತೆಗಳಿಗೆ ರಾಜ್ಯ ಖಜಾನೆ-2ರಿಂದ ಜಮೆಯಾಗಿತ್ತು. ಈ ಹಣದ ಪೈಕಿ 94.73 ಕೋಟಿ ರು. ಹಣವು ಎಂ.ಜಿ.ರಸ್ತೆಯ ಯೂನಿಯನ್ ಬ್ಯಾಂಕ್ ಖಾತೆಯಿಂದ ಹೈದರಾಬಾದ್‌ನ ಫಸ್ಟ್ ಫೈನಾನ್ಸ್ ಕೋ ಆಪರೇಟಿವ್ ಬ್ಯಾಂಕ್‌ನ 18 ನಕಲಿ ಖಾತೆಗಳಿಗೆ ರವಾನೆಯಾಗಿತ್ತು. ಆದರೆ ಅಕ್ರಮ ಸದ್ದು ಮಾಡಿದ ಕೂಡಲೇ 5 ಕೋಟಿ ರು. ಮರಳಿ ನಿಗಮದ ಖಾತೆಗೆ ಬಂದಿತ್ತು. ಇನ್ನುಳಿದ 89.73 ಕೋಟಿ ರು. ಹಣವನ್ನು ಹೈದರಾಬಾದ್ ಗ್ಯಾಂಗ್ ದೋಚಿತ್ತು ಎಂಬ ಆರೋಪ ಬಂದಿದೆ.
ಫಸ್ಟ್ ಫೈನಾನ್ಸ್ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಸತ್ಯನಾರಾಯಣ್ ಹಾಗೂ ಅಕ್ರಮ ಹಣ ವರ್ಗಾವಣೆ ದಂಧೆಕೋರ ಸತ್ಯನಾರಾಯಣ್ ವರ್ಮಾ ಗ್ಯಾಂಗ್ ಜತೆ ನಾಗೇಂದ್ರ ಪರವಾಗಿ ಅವರ ಆಪ್ತ ನೆಕ್ಕುಂಟಿ ನಾಗರಾಜ್ ವ್ಯವಹರಿಸಿದ್ದ. ನಾಗೇಂದ್ರ ಸೂಚನೆ ಮೇರೆಗೆ ನಿಗಮದ ಮಾಜಿ ಎಂಡಿ ಪದ್ಮನಾಭ್ ಸೇರಿ ಅಧಿಕಾರಿಗಳು ಹಣ ವರ್ಗಾವಣೆಗೆ ಸಹಕರಿಸಿದ್ದರು. ಈ ಹಣದಲ್ಲಿ 20.19 ಕೋಟಿ ರು. ಅನ್ನು ತಾವು ಉಸ್ತುವಾರಿ ವಹಿಸಿದ್ದ ಬಳ್ಳಾರಿ ಲೋಕಸಭಾ ಚುನಾವಣೆಗೆ ಅವರು ವ್ಯಯಿಸಿದ್ದರು ಎಂದು ಆರೋಪಿಸಲಾಗಿದೆ.
ಕಾರಿನಲ್ಲೇ ಸಭೆ ನಡೆಸಿದ್ದ ನಾಗೇಂದ್ರ:
ವಸಂತನಗರ ಶಾಖೆಯಿಂದ ಎಂ.ಜಿ ರಸ್ತೆಯ ಯೂನಿಯನ್ ಬ್ಯಾಂಕ್ ಶಾಖೆಯ ಖಾತೆಗೆ ನಿಗಮದ ಹಣ ವರ್ಗಾವಣೆಗೆ ನಾಗೇಂದ್ರ ಅವರೇ ಮುತುವರ್ಜಿ ವಹಿಸಿದ್ದರು. ಈ ಹಣ ವರ್ಗಾವಣೆ ವಿಚಾರವಾಗಿ ಶಾಂಘ್ರೀಲಾ ಹೋಟೆಲ್‌ಗೆ ನಿಗಮದ ಮಾಜಿ ಎಂಡಿ ಪದ್ಮನಾಭ್ ಅವರನ್ನು ಕರೆಸಿ ತಮ್ಮ ಆಪ್ತ ನೆಕ್ಕುಂಟಿ ನಾಗರಾಜ್ ಜತೆ ಅವರು ಸಭೆ ನಡೆಸಿದ್ದರು. ಈ ಸಭೆ ನಂತರ ಎಂ.ಜಿ.ರಸ್ತೆಯ ಖಾತೆಗೆ ಹಣ ವರ್ಗಾವಣೆಯಾಗಿ ಅಲ್ಲಿಂದ ಹೈದರಾಬಾದ್ ಸಹಕಾರಿ ಬ್ಯಾಂಕ್‌ಗೆ ಹಣ ಹರಿಯಿತು. ಹೀಗಾಗಿ ಹಣ ವರ್ಗಾವಣೆ ಜಾಲದ ಪ್ರಮುಖ ಸೂತ್ರಧಾರರೇ ನಾಗೇಂದ್ರ ಎಂದು ಇ.ಡಿ. ಹೇಳಿದೆ ಎನ್ನಲಾಗಿದೆ.
ಈ ಅಕ್ರಮ ಹಣದ ವಿಚಾರವಾಗಿ ಬ್ಯಾಂಕ್ ಅಧಿಕಾರಿಗಳು ತಕರಾರು ತೆಗೆದಿರುವ ವಿಚಾರವನ್ನು ನಾಗೇಂದ್ರ ಅವರಿಗೆ ನಿಗಮದ ಅಧಿಕಾರಿಗಳು ತಿಳಿಸಿದ್ದರು. ಅಷ್ಟರಲ್ಲಿ ಶಿವಮೊಗ್ಗದಲ್ಲಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬೆಳವಣಿಗೆ ಬಳಿಕ ಆತಂಕಗೊಂಡ ನಾಗೇಂದ್ರ, ಮೇ 29ರಂದು ಎಂಡಿ ಪದ್ಮನಾಭ್ ಹಾಗೂ ನೆಕ್ಕುಂಟಿ ನಾಗರಾಜ್ ಅವರನ್ನು ಬೆಂಗಳೂರಿನಲ್ಲಿ ತಮ್ಮ ಕಾರಿನಲ್ಲೇ ಕೂರಿಸಿಕೊಂಡು ಸುದೀರ್ಘವಾಗಿ ಮಾತುಕತೆ ನಡೆಸಿದ್ದರು. ಆಗ ಯಾವುದೇ ಕಾರಣಕ್ಕೂ ಪ್ರಕರಣದಲ್ಲಿ ನನ್ನ ಹೆಸರು ನೀವು ಹೇಳಬಾರದು. ನಾನು ಅಧಿಕಾರದಲ್ಲಿದ್ದರೆ ಮಾತ್ರ ನಿಮ್ಮನ್ನು ರಕ್ಷಿಸಲು ಸಾಧ್ಯವಾಗುತ್ತದೆ ಎಂದು ತಾಕೀತು ಮಾಡಿದ್ದರು ಎನ್ನಲಾಗಿದೆ.
ಯಾವುದೇ ಕಾರಣಕ್ಕೂ ನನ್ನ ಹೆಸರು ಹೇಳಬೇಡಿ ಎಂದಿದ್ದ ನಾಗೇಂದ್ರ!
ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಬಳಿಕ ಆತಂಕಗೊಂಡಿದ್ದ ನಾಗೇಂದ್ರ, ಮೇ 29ರಂದು ನಿಗಮದ ಎಂ.ಡಿ.ಪದ್ಮನಾಭ್ ಹಾಗೂ ತಮ್ಮ ಆಪ್ತ ನೆಕ್ಕುಂಟಿ ನಾಗರಾಜ್ ಜೊತೆ ಬೆಂಗಳೂರಿನಲ್ಲಿ ಕಾರಿನಲ್ಲೇ ಕುಳಿತು ಸುದೀರ್ಘ ಮಾತುಕತೆ ನಡೆಸಿದ್ದರು. ಈ ವೇಳೆ, ಯಾವುದೇ ಕಾರಣಕ್ಕೂ ಪ್ರಕರಣದಲ್ಲಿ ನೀವು ನನ್ನ ಹೆಸರು ಹೇಳಬಾರದು. ನಾನು ಅಧಿಕಾರದಲ್ಲಿದ್ದರೆ ಮಾತ್ರ ನಿಮ್ಮನ್ನು ರಕ್ಷಿಸಲು ಸಾಧ್ಯ ಎಂದು ಹೇಳಿದ್ದರು ಎಂದು ರಿಮ್ಯಾಂಡ್ ವರದಿಯಲ್ಲಿದೆ ಎಂದು ಹೇಳಲಾಗಿದೆ.