ಖಾಸಗಿ ಬಸ್‌ಗಳಿಗೂ ಶಕ್ತಿ ಯೋಜನೆ ವಿಸ್ತರಿಸಲಿ

| Published : Oct 26 2025, 02:00 AM IST

ಖಾಸಗಿ ಬಸ್‌ಗಳಿಗೂ ಶಕ್ತಿ ಯೋಜನೆ ವಿಸ್ತರಿಸಲಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಕಾಂಗ್ರೆಸ್ ಸರ್ಕಾರ ''ಶಕ್ತಿ ಯೋಜನೆ'' ಜಾರಿಗೆ ತಂದು ಖಾಸಗಿ ಬಸ್ ಮಾಲೀಕರು, ಬಸ್‌ಗಳನ್ನೇ ನಂಬಿ ಬದುಕುತ್ತಿರುವ ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ವಿಷ ಕೊಟ್ಟಿದೆ. ಕೂಡಲೇ ಸರ್ಕಾರ ಶಕ್ತಿ ಯೋಜನೆ ಖಾಸಗಿ ಬಸ್‌ಗಳಿಗೂ ವಿಸ್ತರಿಸಲಿ ಎಂದು ದಾವಣಗೆರೆ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘ ಅಧ್ಯಕ್ಷ ಮಲ್ಲೇಶಪ್ಪ ಒತ್ತಾಯಿಸಿದ್ದಾರೆ.

- ಪತ್ರಕರ್ತರಿಗೆ ಖಾಸಗಿ ಬಸ್ ಪಾಸ್ ವಿತರಿಸಿ ಅಧ್ಯಕ್ಷ ಮಲ್ಲೇಶಪ್ಪ ಆಗ್ರಹ - - -

ಕನ್ನಡಪ್ರಭ ವಾರ್ತೆ ಜಗಳೂರು

ರಾಜ್ಯ ಕಾಂಗ್ರೆಸ್ ಸರ್ಕಾರ ''''ಶಕ್ತಿ ಯೋಜನೆ'''' ಜಾರಿಗೆ ತಂದು ಖಾಸಗಿ ಬಸ್ ಮಾಲೀಕರು, ಬಸ್‌ಗಳನ್ನೇ ನಂಬಿ ಬದುಕುತ್ತಿರುವ ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ವಿಷ ಕೊಟ್ಟಿದೆ. ಕೂಡಲೇ ಸರ್ಕಾರ ಶಕ್ತಿ ಯೋಜನೆ ಖಾಸಗಿ ಬಸ್‌ಗಳಿಗೂ ವಿಸ್ತರಿಸಲಿ ಎಂದು ದಾವಣಗೆರೆ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘ ಅಧ್ಯಕ್ಷ ಮಲ್ಲೇಶಪ್ಪ ಒತ್ತಾಯಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಶನಿವಾರ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ರಾಜ್ಯದಲ್ಲೇ ಇದೇ ಮೊದಲ ಬಾರಿಗೆ ಖಾಸಗಿ ಬಸ್ ಮಾಲೀಕರ ಸಂಘದಿಂದ ದಾವಣಗೆರೆ ಜಿಲ್ಲಾದ್ಯಂತ ಉಚಿತ ಸಂಚಾರಕ್ಕೆ ಬಸ್‌ ಪಾಸ್‌ ವಿತರಿಸಿ ಅವರು ಮಾತನಾಡಿದರು.

ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ನಮ್ಮ ವಿರೋಧವಿಲ್ಲ. ರಾಜ್ಯದ 9 ಜಿಲ್ಲೆಗಳಲ್ಲಿ ಮಾತ್ರ ಖಾಸಗಿ ಬಸ್‌ಗಳಿದ್ದು, 9000 ಖಾಸಗಿ ಬಸ್‌ಗಳು ಸಂಚರಿಸುತ್ತಿವೆ. ವರ್ಷಕ್ಕೆ ಲಕ್ಷಾಂತರ ಹಣ ತೆರಿಗೆ ಭರಿಸುತ್ತಿದ್ದೇವೆ. ಆದರೆ ಶಕ್ತಿ ಯೋಜನೆಯಿಂದಾಗಿ ರಾಜ್ಯದ ಲಕ್ಷಾಂತರ ಬಸ್‌ ಕಾರ್ಮಿಕರ ಕುಟುಂಬಗಳು ಬೀದಿಗೆ ಬಂದಿವೆ. ಈಗ ಸರ್ಕಾರ ಖಾಸಗಿ ಸಾರಿಗೆ ಉದ್ಯಮವನ್ನೇ ಬಂದ್ ಮಾಡುವ ಹುನ್ನಾರ ನಡೆಸುತ್ತಿರೋದು ನೋವಿನ ಸಂಗತಿ ಎಂದರು.

ಸಂಘದ ಖಜಾಂಚಿ ಮಹಮ್ಮದ್ ಅಸ್ಲಾಂ ಮಾತನಾಡಿ, ನಮಗೆ ಪೈಪೋಟಿ ನೀಡಲು ನಮ್ಮ ಖಾಸಗಿ ಬಸ್‌ಗಳು ಸಂಚರಿಸುವ ಸಮಯಕ್ಕೆ ಕೆಎಸ್ಆರ್ಟಿಸಿ ಬಸ್‌ಗಳನ್ನು ಬಿಟ್ಟಿದ್ದಾರೆ. ಇದರಿಂದ ನಾವು ಬೀದಿಗೆ ಬರುವಂತಾಗಿದೆ. ಜಿಲ್ಲಾ ಸಾರಿಗೆ ಅಧಿಕಾರಿಗಳು ಸಮಯ, ಗ್ರಾಮಾಂತರ ಸಂಪರ್ಕ ಕಲ್ಪಿಸುವ ರೂಟ್ ಬದಲಿಸಿ ಬಸ್‌ಗಳ ಬಿಡಲಿ. ಇದರಿಂದ ಜನರಿಗೂ, ನಮಗೂ ಅನುಕೂಲವಾಗುತ್ತದೆ ಎಂದರು.

ಸಂಘದ ಗೌರವಾಧ್ಯಕ್ಷ ಕಂಬತ್ತಹಳ್ಳಿ ಮಂಜುನಾಥ್, ಸರ್ಕಾರ ಕೆಎಸ್ಆರ್ಟಿಸಿ ಬಸ್‌ನವರಿಗೆ ಕೊಟ್ಟಂತೆ ಉಚಿತ ಟಿಕೆಟ್ ಕೊಟ್ಟು ಸರ್ಕಾರ ಹಣ ತುಂಬುತ್ತಿದೆ. ಅದೇ ರೀತಿ ಖಾಸಗಿ ಸಾರಿಗೆ ಉದ್ಯಮಕ್ಕೂ ಹಣ ನೀಡಲಿ. ಆರ್ಥಿಕ ನಷ್ಟದಲ್ಲಿ ನಾವು ನಲುಗಿಹೋಗಿದ್ದೇವೆ. ಸರ್ಕಾರ ಈಗಲಾದರೂ ಅನ್ಯಾಯ ಸರಿಪಡಿಸಲಿ ಎಂದರು.

ಕಾರ್ಯದರ್ಶಿ ಎಂ.ಆರ್.ಸತೀಶ್, ನಿರ್ದೇಶಕ ಜಗದೀಶ್‌ ರೆಡ್ಡಿ ಮಾತನಾಡಿ, ಬಡವರಿಗೆ ಉಚಿತವಾಗಿ ಸಾರಿಗೆ ವ್ಯವಸ್ಥೆ ಕೊಡಲಿ. ಆದರೆ, ತೆರಿಗೆ ಕಟ್ಟುವ ಸರ್ಕಾರಿ ನೌಕರರಿಗೂ, ಆರ್ಥಿಕ ಸ್ಥಿತಿವಂತರಿಗೂ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿ ನಮ್ಮ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿದೆ ಎಂದು ನೋವಿನಿಂದ ನುಡಿದರು.

ಖಾಸಗಿ ಬಸ್ ಮಾಲೀಕರ ಸಂಘ ನಿರ್ದೇಶಕ ವೀರೇಂದ್ರ ಪಾಟೀಲ್, ಸೈಯದ್‌ ಅನ್ವರ್, ಅಬೂಬಕ್ಕರ್ ಸಿದ್ಧಿಕ್, ಸಾತ್ವಿಕ್, ವೀರೇಶ್ ಶಿವಗಂಗಾ, ಖಜಾಂಚಿ ಅಸ್ಲಾಂ, ಇಮ್ತಿಯಾಜ್, ಇಲಿಯಾಸ್, ಪ್ರತಾಪ ರೆಡ್ಡಿ, ಹಿರಿಯ ಪತ್ರಕರ್ತರಾದ ಅಣಬೂರು ಮಠದ ಕೊಟ್ರೇಶ್, ಸಾಮಾಜಿಕ ಕಾರ್ಯಕರ್ತ ಹೊಸಕೆರೆ ಮುಕುಂದ, ಎಂ.ಸಿ.ಬಸವರಾಜ್ , ಖಜಾಂಚಿ ಜಗದೀಶ್, ಕಾರ್ಯದರ್ಶಿ ಜೆ.ಒ. ರವಿಕುಮಾರ್, ಸೋಮನಗೌಡ, ಧನ್ಯಕುಮಾರ್, ಮಾದಿಹಳ್ಳಿ ಮಂಜುನಾಥ್, ಧನ್ಯಕುಮಾರ್, ಮಹಾಂತೇಶ್ ಬ್ರಹ್ಮ, ಶಿವಲಿಂಗಪ್ಪ, ಮರೇನಹಳ್ಳಿ ಬಾಬು, ಜಗಜೀವನರಾಮ್, ಬಸವರಾಜ್‌ ಇನ್ನಿತರ ಇದ್ದರು.

- - -

(ಕೋಟ್‌) ಜಗಳೂರು ತಾಲೂಕಿನಿಂದ ಪತ್ರಕರ್ತರು ವಿವಿಧ ಗ್ರಾಮಗಳಿಗೆ ಸುದ್ದಿಗಾಗಿ, ವೈಯಕ್ತಿಕ ಕೆಲಸಗಳಿಗೆ ತೆರಳಲು ಹಣ ಭರಿಸಿ ಸಂಚರಿಸಲು ಎಲ್ಲರಿಗೂ ಕಷ್ಟವಿತ್ತು. ಖಾಸಗಿ ಬಸ್ ಮಾಲೀಕರು ಪ್ರಸ್ತುತ ಸರ್ಕಾರಿ ಬಸ್‌ಗಳ ಪೈಪೋಟಿಯ ಸಂಚಾರ, ಶಕ್ತಿ ಯೋಜನೆಗಳಿಂದ ಸವಾಲು ಎದುರಿಸುತ್ತಿದ್ದಾರೆ. ಈ ದುಸ್ಥಿತಿ ಮಧ್ಯೆಯೂ ಜಗಳೂರು ತಾಲೂಕು ಪತ್ರಕರ್ತರ ಸಂಚಾರಕ್ಕೆ ಅನುಕೂಲವಾಗಲು, ಸಾಮಾಜಿಕ ಸೇವೆ ಮನಗಂಡು, ದಾವಣಗೆರೆ ಜಿಲ್ಲಾ ಖಾಸಗಿ ಬಸ್ ಮಾಲೀಕರು ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಉಚಿತ ಬಸ್ ಪಾಸ್ ಸೌಲಭ್ಯ ವಿತರಿಸಿರುವುದಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

- ಜಿ.ಎಸ್. ಚಿದಾನಂದ, ಅಧ್ಯಕ್ಷ, ಜಗಳೂರು ಪತ್ರಕರ್ತರ ಸಂಘ.

- - -

-25ಜೆ.ಜಿ.ಎಲ್.1:

ಜಗಳೂರು ಪಟ್ಟಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಸದಸ್ಯರು, ಪತ್ರಕರ್ತರಿಗೆ ರಾಜ್ಯದಲ್ಲೇ ಮೊದಲ ಬಾರಿಗೆ ಖಾಸಗಿ ಬಸ್ ಮಾಲೀಕರ ಸಂಘದಿಂದ ಉಚಿತ ಸಂಚಾರಕ್ಕೆ ಬಸ್‌ ಪಾಸ್‌ಗಳನ್ನು ದಾವಣಗೆರೆ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಮಲ್ಲೇಶಪ್ಪ ನೇತೃತ್ವದಲ್ಲಿ ಬಸ್ ಮಾಲೀಕರು ವಿತರಿಸಿದರು.