ವಿಘ್ನೇಶ್ ಎಂ. ಭೂತನಕಾಡು
ಕನ್ನಡಪ್ರಭ ವಾರ್ತೆ ಮಡಿಕೇರಿಜೂನ್ ಅರ್ಧ ತಿಂಗಳು ಕಳೆದರೂ ಮುಂಗಾರು ಚುರುಕು ಪಡೆದುಕೊಂಡಿಲ್ಲ. ಈ ನಡುವೆ ಜಿಲ್ಲೆಯಲ್ಲಿ ಈ ವರ್ಷ ಭತ್ತದ ಕೃಷಿ ಮಾಡುವವರ ಪ್ರಮಾಣ ಭಾರಿ ಕುಸಿತ ಕಂಡಿದ್ದು, ತೀವ್ರ ಆತಂಕ ಉಂಟು ಮಾಡಿದೆ.
ಕೃಷಿ ಪ್ರದಾನವಾಗಿರುವ ಕೊಡಗು ಜಿಲ್ಲೆಯಲ್ಲಿ ಭತ್ತದ ಕೃಷಿ ಸಂಪ್ರದಾಯಿಕ ಭಾಗವಾಗಿದೆ. ಆದರೂ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಭತ್ತ ಬೆಳೆಯುವವರ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಕುಸಿತ ಕಾಣುತ್ತಿದೆ. ಕೊಡಗಿನಲ್ಲಿ ಭತ್ತದ ಕೃಷಿ ಮಾಡುವುದು ಪ್ರಮುಖವಾಗಿ ಕಾರ್ಮಿಕರ ಕೊರತೆ, ಕಾಡಾನೆ ಹಾವಳಿ, ಅನಿರೀಕ್ಷಿತ ಹವಾಮಾನ ವೈಪರೀತ್ಯ (ಮಳೆ ಕೊರತೆ/ಪ್ರವಾಹ) ಮತ್ತು ಭತ್ತಕ್ಕೆ ಉತ್ತಮ ಬೆಲೆ ಸಿಗದ ಕಾರಣದಿಂದ ನಿರಂತರ ಸವಾಲಾಗಿ ಪರಿಣಮಿಸಿದೆ.ಕಳೆದ ವರ್ಷ ಜಿಲ್ಲೆಯಲ್ಲಿ ಸುಮಾರು 29 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ಭತ್ತದ ಕೃಷಿ ಈ ಬಾರಿ 11 ಸಾವಿರ ಹೆಕ್ಟೇರ್ ಪ್ರದೇಶ ಕುಸಿತ ಕಂಡು, 17,300 ಹೆಕ್ಟೇರ್ ಪ್ರದೇಶಕ್ಕೆ ಇಳಿದಿದೆ.
ಮುಸುಕಿನ ಜೋಳವೂ ಕ್ಷೀಣ:
ಭತ್ತ ಕೃಷಿಯ ಕೊರತೆ ಒಂದೆಡೆಯಾದರೆ ಮುಸುಕಿನ ಜೋಳ ಕೃಷಿ ಪ್ರದೇಶ ಕೂಡ ಈ ಬಾರಿ ಇಳಿಮುಖಗೊಂಡಿದೆ. ಸಾಮಾನ್ಯವಾಗಿ 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯಲಾಗುತ್ತಿತ್ತು. ಆದರೆ ಈ ಬಾರಿ ಕೇವಲ 1300 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಗುರಿಯಿದೆ. ಕುಶಾಲನಗರ ತಾಲೂಕಿನಲ್ಲಿ ಮಾತ್ರ ಮುಸುಕಿನ ಜೋಳ ಬೆಳೆಯಲಾಗುತ್ತಿದೆ. ಇದರಿಂದ ಜೋಳ ಕೃಷಿ ಕೂಡ ಜಿಲ್ಲೆಯಲ್ಲಿ ಕಡಿಮೆಯಾದಂತಾಗಿದೆ.
ಅಲ್ಪಾವಧಿ ತಳಿಗಳತ್ತ ಚಿತ್ತ:ಮುಂಗಾರು ವಿಳಂಬಾಗಿರುವುದರಿಂದ ಈ ಬಾರಿ ದೀರ್ಘಾವಧಿ ಭತ್ತ ತಳಿಯ ಬದಲಾಗಿ ಅಲ್ಪಾವಧಿ ತಳಿಗಳತ್ತ ರೈತರು ಚಿತ್ತ ತೋರಿದ್ದಾರೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಅಲ್ಪಾವಧಿ ತಳಿಗಳಾದ ಅತಿರ, ತುಂಗಾ ತಳಿಗಳಿಗೆ ಹೆಚ್ಚಿನ ಬೇಡಿಕೆ ಇದೆ.
ಕಾಡುತ್ತಿದೆ ವಿವಿಧ ಸಮಸ್ಯೆ:ಕಾಫಿ ತೋಟಗಳಲ್ಲಿ ಹೆಚ್ಚು ಆದಾಯ ಸಿಗುತ್ತಿರುವುದರಿಂದ ಹೆಚ್ಚಿನ ಕಾರ್ಮಿಕರು ತೋಟದ ಕಡೆಗೆ ವಾಲುತ್ತಿದ್ದಾರೆ. ಇದರಿಂದ ಭತ್ತದ ನಾಟಿ ಮತ್ತು ಕಟಾವಿಗೆ ಕೆಲಸಗಾರರು ಸಿಗದೆ ಕೃಷಿ ವೆಚ್ಚ ಹೆಚ್ಚಾಗುತ್ತಿದೆ. ಕಾಡಾನೆಗಳು ಭತ್ತದ ಗದ್ದೆಗಳಿಗೆ ಲಗ್ಗೆ ಇಟ್ಟು ಪೈರನ್ನು ತುಳಿದು ನಾಶ ಮಾಡುತ್ತಿರುವುದರಿಂದ ರೈತರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಮುಂಗಾರು ಮಳೆ ಕೈಕೊಡುವುದು ಅಥವಾ ಅಕಾಲಿಕ ಮಳೆಯಿಂದಾಗಿ ಕೊಯ್ಲು ಮಾಡುವ ಸಮಯದಲ್ಲಿ ಬೆಳೆ ಹಾನಿಯಾಗುವುದು ದೊಡ್ಡ ಸಮಸ್ಯೆಯಾಗಿದೆ. ಭತ್ತದ ಬದಲಾಗಿ ಕಾಫಿ, ಅಡಿಕೆ ಮತ್ತು ಶುಂಠಿ ಬೆಳೆಯಲು ರೈತರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಇದರಿಂದ ಭತ್ತದ ಗದ್ದೆಗಳ ವಿಸ್ತೀರ್ಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಸಸಿ ಮಡಿ ಸಿದ್ಧತೆಗೂ ಮಳೆ ನೀರಿಲ್ಲ!:
ಜೂನ್ ತಿಂಗಳು ಅರ್ಧ ಕಳೆದರೂ ಕೂಡ ಮುಂಗಾರು ಮಳೆ ಚುರುಕು ಪಡೆಯದ ಹಿನ್ನೆಲೆಯಲ್ಲಿ ರೈತರಿಗೆ ಭತ್ತದ ಸಸಿಮಡಿ ಸಿದ್ಧಪಡಿಸಲೂ ಸಾಧ್ಯವಾಗುತ್ತಿಲ್ಲ. ಈ ಬಾರಿ ಸುಮಾರು ಶೇ. 37ರಷ್ಟು ಮಳೆ ಕೊರತೆ ಉಂಟಾಗಿದೆ. ಕಳೆದ ವರ್ಷ ಮೇ ತಿಂಗಳ ಅಂತ್ಯದಲ್ಲಿ ಭಾರಿ ಮಳೆಯಾಗಿತ್ತು. ಆದರೆ ಇದೀಗ ಭತ್ತದ ಸಸಿ ಮಡಿಗೂ ಮಳೆ ನೀರು ಇಲ್ಲದಂತಾಗಿದ್ದು, ಕೆರೆಯ ನೀರು ಬಳಸಿ ಸಸಿ ಮಡಿಯನ್ನು ರೈತರು ಸಿದ್ಧಪಡಿಸಿಕೊಂಡಿದ್ದಾರೆ.ಬಿತ್ತನೆ ಬೀಜ ಕೊಳ್ಳಲು ರೈತರ ನಿರಾಸಕ್ತಿ:
ಮಳೆಗಾಲ ಆರಂಭವಾದರೂ ಕೂಡ ಮಳೆ ವಿಳಂಭವಾದ ಹಿನ್ನೆಲೆಯಲ್ಲಿ ಭತ್ತದ ಬಿತ್ತನೆ ಬೀಜಗಳನ್ನು ತೆಗೆದುಕೊಳ್ಳಲು ರೈತರು ನಿರಾಸಕ್ತಿ ತೋರಿದ್ದಾರೆ. ಜಿಲ್ಲೆಯ ವಿವಿಧ ರೈತ ಸಂಪರ್ಕ ಕೇಂದ್ರಗಳಲ್ಲಿ 700 ಕಿಂಟ್ವಾಲ್ ವಿವಿಧ ಬಿತ್ತನೆ ಬೀಜ ದಾಸ್ತಾನಿದ್ದರೂ ಕೇವಲ 200 ಕ್ವಿಂಟಾಲ್ ಮಾತ್ರ ರೈತರು ಖರೀದಿಸಿದ್ದಾರೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಅತಿರ, ತುಂಗಾ, ಇಂಟಾನ್, ತನು ಮತ್ತಿತರ ತಳಿಗಳ ಬಿತ್ತನೆ ಬೀಜಗಳು ಲಭ್ಯವಿವೆ.ಮಳೆ ಕೊರತೆಯಿಂದ ಈ ಬಾರಿ ಭತ್ತದ ಕೃಷಿ ಮಾಡಲು ಸಮಸ್ಯೆಯಾಗಿದೆ. ಕೆರೆಯ ನೀರನ್ನು ಬಳಸಿ ಭತ್ತದ ಸಸಿಮಡಿಯನ್ನು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮಳೆ ವಿಳಂಬವಾದಲ್ಲಿ ಮತ್ತಷ್ಟು ಸಮಸ್ಯೆಯಾಗಲಿದೆ.
-ನವೀನ್ ಅಜ್ಜಳ್ಳಿ, ಭತ್ತ ಕೃಷಿಕ ಜಿಲ್ಲೆಯಲ್ಲಿ ಈ ಬಾರಿ 17,300 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿ ಹಾಗೂ 1,300 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಕೃಷಿ ಮಾಡಲಾಗುತ್ತಿದೆ. ಭತ್ತದ ಕೃಷಿಯಲ್ಲಿ ಹಲವು ಸಮಸ್ಯೆಯಿಂದಾಗಿ ಭತ್ತದ ಕೃಷಿ ಮಾಡಲು ರೈತರು ಮುಂದಾಗುತ್ತಿಲ್ಲ. ರೈತ ಸಂಪರ್ಕ ಕೇಂದ್ರದಲ್ಲಿ ಈಗಾಗಲೇ ಬಿತ್ತನೆ ಬೀಜ ಲಭ್ಯವಿದ್ದು, ರೈತರು ಪಡೆದುಕೊಳ್ಳಬಹುದಾಗಿದೆ.-ಚಂದ್ರಶೇಖರ್ ಬಿ.ಎಸ್., ಜಂಟಿ ನಿರ್ದೇಶಕರು ಕೃಷಿ ಇಲಾಖೆ ಮಡಿಕೇರಿ
