ಸಾರಾಂಶ
ಕನ್ನಡಪ್ರಭ ವಾರ್ತೆ ಉಳ್ಳಾಲ
ಹವಾಮಾನ ವೈಪರಿತ್ಯ ಹಾಗೂ ಅಡಕೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿದೆ ಎಂಬ ವರದಿಯ ಬಳಿಕ ಅಡಕೆಯ ಎರಡನೇ ಕೊಯ್ಲು ಇಲ್ಲದಂತಾಗಿದೆ. ಭತ್ತಕ್ಕೆ ಸೂಕ್ತ ಬೆಲೆಯೂ ಸಿಗುತ್ತಿಲ್ಲ. ಗೇರುಬೆಳೆಯೂ ಇಳಿಮುಖವಾಗುತ್ತಿದೆ. ದಕ್ಷಿಣ ಆಫ್ರಿಕಾದಿಂದ ಆಮದು ಮಾಡಿಕೊಳ್ಳುವಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇಂಥ ಸಂಕಷ್ಟದ ಸಂದರ್ಭದಲ್ಲಿ ರೈತರಲ್ಲಿ ಧೈರ್ಯ ಮೂಡಿಸಲು ಇಂತಹ ಮೇಳ ಪ್ರಯೋಜನಕಾರಿ ಎಂದು ಸಹಕಾರ ರತ್ನ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.ಕೈರಂಗಳ ಪುಣ್ಯಕೋಟಿನಗರ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ರಾಜ್ಯಮಟ್ಟದ ಶಿಕ್ಷಣ, ಉದ್ಯೋಗ, ಕೃಷಿ ಮೇಳಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ 16 ಮಕ್ಕಳಿಂದ ಆರಂಭಗೊಂಡ ಸಂಸ್ಥೆ ಪ್ರಸ್ತುತ 900ರಷ್ಟು ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಸಣ್ಣ ಸಾಧನೆಯಲ್ಲ ಎಂದ ರಾಜೇಂದ್ರ ಕುಮಾರ್, ಶಿಕ್ಷಣ, ಕೃಷಿ, ಉದ್ಯೋಗ ವಿಚಾರಗಳನ್ನು ಮುಂದಿಟ್ಟುಕೊಂಡು ಮೇಳ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಆರ್ಥಿಕ ತಜ್ಞ ಡಾ. ವಿಘ್ನೇಶ್ವರ ವರ್ಮುಡಿ ಮಾತನಾಡಿ, ಎಸ್ಸೆಸ್ಸೆಎಲ್ಸಿ ನಂತರ ಮುಂದೇನು ಎನ್ನುವ ಬಗ್ಗೆ ಪುಸ್ತಕ ರೂಪದಲ್ಲಿ ಹೊರತರುವ ಪ್ರಯತ್ನ ಪ್ರೌಢಶಾಲಾ ಮಟ್ಟದಲ್ಲೇ ನಡೆಬೇಕು, ಆದಾಯ ಆಧಾರಿತ ಬದಲು ಮೌಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಯಾಗುವ ಅವಕಾಶ, ಸ್ವಉದ್ಯೋಗಾಧಾರಿತ ಶಿಕ್ಷಣ ಅಗತ್ಯ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಸ್ಕ್ಯಾಡ್ ಲಿಮಿಟೆಡ್ ಅಧ್ಯಕ್ಷ ರವೀಂದ್ರ ಕಂಬಳಿ ಅಧ್ಯಕ್ಷತೆ ವಹಿಸಿದ್ದರು. ಅದಾನಿ ಸಮೂಹ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಂತೋಷ್ ಕುಮಾರ್ ರೈ, ಬಾಳೆಪುಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಕನ್ಯಾ ರೈ, ಎಸ್‌ಸಿಡಿಸಿಸಿ ನಿರ್ದೇಶಕ ಶಶಿಕುಮಾರ್ ರೈ ಬಲ್ಯೊಟ್ಟು, ಕ್ಯಾಂಪ್ಕೋ ನಿರ್ದೇಶಕ ಮಹೇಶ್ ಚೌಟ, ಶಾಲಾ ಪ್ರಾಂಶುಪಾಲ ಅರುಣ್ ಪ್ರಕಾಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಶಾರದಾ ಗಣಪತಿ ವಿದ್ಯಾಕೇಂದ್ರದ ಸಂಚಾಲಕ ಟಿ.ಜಿ. ರಾಜಾರಾಮ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಳಗಳ ಅಧ್ಯಕ್ಷ ಜಯರಾಮ ಶೆಟ್ಟಿ ವಂದಿಸಿದರು. ಚಂದ್ರಕುಮಾರ್ ಕಾರ್ಯಕ್ರಮ ನಿರೂಪಿಸಿದರು.ಅಚ್ಚುಕಟ್ಟಾದ ಮಳಿಗೆಗಳು: ಮೇಳದ ಮೊದಲನೆಯ ದಿನವಾದ ಶುಕ್ರವಾರ ನೂರಾರು ಜನರು ಮೇಳದಲ್ಲಿ ಭಾಗವಹಿಸಿದ್ದರು. ಕೃಷಿ, ಆಹಾರ, ವಿವಿಧ ಇಲೆಕ್ಟ್ರಾನಿಕ್ ಉಪಕರಣಗಳ ಪ್ರದರ್ಶನ ಹಾಗೂ ವಿವಿಧ ರೀತಿಯ ಮಾರಾಟ ಮಳಿಗೆಗಳು ಮೇಳದಲ್ಲಿ ಭಾಗವಹಿಸಿದ್ದು ಅಚ್ಚುಕಟ್ಟಾಗಿ ಸ್ಟಾಲ್‌ಗಳ ವ್ಯವಸ್ಥೆ ಯನ್ನು ಮಾಡಲಾಗಿತ್ತು.
ಸರಕಾರಿ, ಖಾಸಗಿ ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಾರ್ಥಿಗಳು, ವಿವಿಧ ಖಾಸಗಿ ಕಂಪನಿಗಳು ಮೇಳದಲ್ಲಿ ಭಾಗವಹಿಸಿದ್ದು ಉದ್ಯೋಗಾರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಿತು.ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಸಂಜೆ 6 ಗಂಟೆಯಿಂದ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ಕೃಪಪೋಷಿತ ಯಕ್ಷಗಾನ ಮಂಡಳಿ ಪಾವಂಜೆ ಇವರಿಂದ ಧರ್ಮಸಿಂಹಾಸನ ಯಕ್ಷಗಾನ ಬಯಲಾಟವು ನಡೆಯಿತು.ಇನ್ನು ಎರಡು ದಿನಗಳ ಕಾಲ ನಡೆಯಲಿರುವ ಮೇಳದಲ್ಲಿ ಗಾನ ವೈವಿಧ್ಯ, ನೃತ್ಯ ಸಂಭ್ರಮ, ಹರಿಕಥೆ ಮೊದಲಾದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.