ಸಾರಾಂಶ
ಹಾವೇರಿ: ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಜೋತುಬಿದ್ದು ಪ್ರತಿ ಬಾರಿ ನಷ್ಟ ಅನುಭವಿಸುತ್ತಿದ್ದ ರೈತರೊಬ್ಬರು ಉದ್ಯೋಗ ಖಾತ್ರಿ ಯೋಜನೆಯ ಸದ್ಬಳಕೆ ಪಡೆದು ಕಾಕಡಾ ಮಲ್ಲಿಗೆ ಹೂವು ಬೆಳೆದು ಆರ್ಥಿಕ ಸದೃಢರಾಗುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.ತಾಲೂಕಿನ ಕಬ್ಬೂರ ಗ್ರಾಮದ ಸಿದ್ದಪ್ಪ ಹೊಸಳ್ಳಿ ಎಂಬ ರೈತರು ತಮ್ಮ ಜಮೀನಿನಲ್ಲಿ ಕಾಕಡಾ ಮಲ್ಲಿಗೆ ಹೂವು ಬೆಳೆದು ಲಾಭ ಪಡೆಯುತ್ತಿದ್ದಾರೆ. ಮೊದಲು ಗೋವಿನಜೋಳ ಬೆಳೆಯುತ್ತಿದ್ದವರು ಪರ್ಯಾಯವಾಗಿ ಬೇರೆ ಏನಾದರೂ ಬೆಳೆಯಬೇಕು ಎಂದುಕೊಂಡಿದ್ದರು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಲ್ಲಿಗೆ ಹೂವು ಬೆಳೆಯಲು ಗ್ರಾಮ ಪಂಚಾಯಿತಿ ಮತ್ತು ತೋಟಗಾರಿಕೆ ಇಲಾಖೆ ಸಹಾಯಧನ ನೀಡುತ್ತದೆ ಎಂಬ ಮಾಹಿತಿ ತಿಳಿದು ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿ ಯೋಜನೆ ಲಾಭ ಪಡೆದಿದ್ದಾರೆ.ಒಂದು ಎಕರೆಯಲ್ಲಿ ಕಾಕಡಾ ಮಲ್ಲಿಗೆ: ಗೋವಿನಜೋಳ ಬೆಳೆದಿದ್ದರೆ 1 ಎಕರೆಯಲ್ಲಿ 20ರಿಂದ 25 ಕ್ವಿಂಟಲ್ ಗೋವಿನಜೋಳ ಫಸಲು ತೆಗೆಯಬಹುದಿತ್ತು. ಇದರಿಂದ ಬರುವ ಆದಾಯವೂ ಅಷ್ಟಕ್ಕಷ್ಟೇ. ಮಲ್ಲಿಗೆ ಹೂವು ಬೆಳೆದಿದ್ದರಿಂದ ಪ್ರತಿದಿನಕ್ಕೆ 3 ರಿಂದ 4 ಕೆಜಿ ಹೂವು ಬರುತ್ತಿದ್ದು, ಕೆಜಿಗೆ ₹250 ದರ ನಿಗದಿ ಮಾಡಿ ದಿನಕ್ಕೆ ಒಂದು ಸಾವಿರ ರು. ಕನಿಷ್ಠ ಆದಾಯ ಪಡೆದು ತಿಂಗಳಿಗೆ ₹25ರಿಂದ ₹30 ಸಾವಿರ ಆದಾಯ ಪಡೆಯುತ್ತಿದ್ದಾರೆ. ಮಲ್ಲಿಗೆ ಹೂವಿನಲ್ಲಿ ಕಾಕಡಾ, ದುಂಡು ಮಲ್ಲಿಗೆ, ವಾಸನೆ ಮಲ್ಲಿಗೆ ಮತ್ತು ಸೂಜಿ ಮಲ್ಲಿಗೆ ವಿಧಗಳಿವೆ. 6 ಅಡಿ ಅಗಲ, 6 ಅಡಿ ಉದ್ದದಲ್ಲಿ 640 ಕಾಕಡಾ ಮಲ್ಲಿಗೆ ಗಿಡಗಳನ್ನು ಬೆಳೆದಿದ್ದು, ಉದ್ಯೋಗ ಖಾತರಿಯಲ್ಲಿ ₹1,49,023 ರು. ಸಹಾಯಧನ ಪಡೆದಿದ್ದಾರೆ. ಯೋಜನೆ ಪ್ರಯೋಜನ ಹೇಗೆ?: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ರೈತರದು ಜಾಬ್‌ಕಾರ್ಡ್ ಇರಬೇಕು. ಇಂಥವರು ಸಣ್ಣ, ಅತಿ ಸಣ್ಣ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ್ಟ ಪಂಗಡದವರಿಗೆ ಈ ಯೋಜನೆ ಲಾಭ ಸಿಗುತ್ತದೆ. ಈ ಯೋಜನೆಯಲ್ಲಿ ಜಿವನ ಪರ್ಯಂತ ₹5 ಲಕ್ಷದವರೆಗೂ ಯೋಜನೆಯ ಲಾಭ ಪಡೆದುಕೊಳ್ಳಬಹುದು.ಸಿದ್ದಪ್ಪ ಹೊಸಳ್ಳಿ ಪ್ರಸ್ತುತ ಈ ಮಲ್ಲಿಗೆ ಹೂವು ನಾಟಿ ಮಾಡಲು ₹40ರಿಂದ ₹50 ಸಾವಿರ ಖರ್ಚು ಮಾಡಿದ್ದಾರೆ. ದಿನಕ್ಕೊಮ್ಮೆ ಹೊಲದಲ್ಲಿ ಹೂವು ಕಟಾವು ಮಾಡುತ್ತಿರುವ ಕೂಲಿಕಾರರು ಕೂಲಿಯನ್ನು ವಾರಕ್ಕೆ ಒಂದು ಬಾರಿ ಉದ್ಯೋಗದಲ್ಲಿ ಪಡೆಯುತ್ತಿದ್ದಾರೆ. ಇದರಿಂದ ನಾವು ಖರ್ಚು ಮಾಡಿದ ಹಣವು ವಾಪಸ್ ಬರುತ್ತದೆ. ಜತೆಗೆ ಇಲಾಖೆಯಿಂದ ಅನುದಾನ ಸಿಗುತ್ತದೆ ಎಂದು ರೈತ ಸಿದ್ದಪ್ಪ ಅವರು ಹೇಳುತ್ತಾರೆ.
ಹಬ್ಬದ ದಿನಗಳಲ್ಲಿ ತುಂಬಾ ಬೇಡಿಕೆ...ಹಬ್ಬದ ದಿನಗಳಲ್ಲಿ ಮಲ್ಲಿಗೆ ಹೂವಿಗೆ ಬೇಡಿಕೆ ಇರುತ್ತದೆ. ಹಾಗೆಯೇ ಮಹಾರಾಷ್ಟ್ರ, ಗೋವಾ, ಹರಿಯಾಣ ಮುಂತಾದವರು ಮಲ್ಲಿಗೆ ತೋಟಗಳನ್ನು ನೋಡಿಕೊಂಡು ಐದರಿಂದ ಆರು ವರ್ಷ ನಮಗೆ ಹೂವು ಬೇಕು ಎಂದು ₹2.5ರಿಂದ ₹3 ಲಕ್ಷ ವರೆಗೂ ಅಡ್ವಾನ್ಸ್ ದುಡ್ಡನ್ನು ಕೊಟ್ಟು ಒಂದೇ ಮಾರ್ಕೆಟ್ ದರವನ್ನು ನಿಗದಿ ಮಾಡಿ ಹೋಗುತ್ತಿದ್ದಾರೆ. ಇದರಿಂದ ತುಂಬಾ ಖುಷಿಯಾಗಿದೆ ಎಂದು ರೈತ ಸಿದ್ದಪ್ಪ ತಿಳಿಸಿದರು.ತಕ್ಕ ಪ್ರತಿಫಲ: ನರೇಗಾ ಯೋಜನೆ ಶ್ರಮಕ್ಕೆ ತಕ್ಕ ಪ್ರತಿಫಲ ನೀಡುವ ಮೂಲಕ ಗ್ರಾಮೀಣ ಭಾಗದ ಜನರ ಬದುಕಲ್ಲಿ ಹೊಸ ಭರವಸೆ ಹುಟ್ಟಿಸಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಯ ಲಾಭ ಪಡೆದು ಆರ್ಥಿಕ ಸದೃಢತೆ ಸಾಧಿಸಿ, ಇತರರಿಗೆ ಮಾದರಿಯಾಗಬೇಕು ಎಂದು ತಾಪಂ ಇಒ ಡಾ. ಪರಮೇಶ ಎನ್. ಹುಬ್ಬಳ್ಳಿ ತಿಳಿಸಿದರು.