ಸಾರಾಂಶ
ಸಂಭ್ರಮದಿಂದ ನಡೆದ ಗಣೇಶ ಮೂರ್ತಿಯ ವಿಸರ್ಜನೆ
ಕನ್ನಡಪ್ರಭ ವಾರ್ತೆ ಸಿರುಗುಪ್ಪವಿಶ್ವ ಹಿಂದು ಪರಿಷತ್, ಬಜರಂಗದಳ ಹಾಗೂ ಹಿಂದೂ ಮಹಾ ಗಣಪತಿ ಸಮಿತಿಯಿಂದ ನಗರದ ನಿಟ್ಟೂರು ನರಸಿಂಹ ಮೂರ್ತಿ ಬಯಲು ಜಾಗದಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಯು 11ನೇ ದಿನದ ವಿಸರ್ಜನೆಯ ಅಂಗವಾಗಿ ಶೋಭಾಯಾತ್ರೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು.
ನಗರದ ಅಭಯಾಂಜನೇಯ್ಯ ಸ್ವಾಮಿ ದೇವಸ್ಥಾನದಿಂದ ಶರುಗೊಂಡ ಶೋಭಾಯಾತ್ರೆ ಪೊಲೀಸ್ ಠಾಣೆಯ ರಸ್ತೆ ಮೂಲಕ ವಾಲ್ಮೀಕಿ ವೃತ್ತ, ಮಹಾತ್ಮ ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತದಿಂದ ಪೇಟೆ ಆಂಜನೇಯ ದೇವಸ್ಥಾನ, ಅಂಬಿಗರ ಚೌಡಯ್ಯ ವೃತ್ತ, ಕೊಟ್ಟೂರೇಶ್ವರ ದೇವಾಸ್ಥಾನದ ದೇಶನೂರು ರಸ್ತೆ ಮೂಲಕ ಶಂಭುಲಿಂಗೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ತೆರಳಿ ತುಂಗಾಭದ್ರಾ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.ಶೋಭಾಯಾತ್ರೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಿ, ಮೆರಗು ನೀಡಿದವು. ಹಾವೇರಿಯ ಹಲ್ಲಿಕೇರಿ ಬಸವೇಶ್ವರ ಸಾಂಸ್ಕೃತಿಕ ಯುವ ಸಂಘದಿಂದ ದೊಡ್ಡಾಟದ ಕುಣಿತ ರಂಜಿಸಿತು. ಸಿರುಗುಪ್ಪದ ನೇಹರಂಗ ಕಲಾ ತಂಡದ ವಿಶೇಷ ಡೊಳ್ಳುವಾದ್ಯ, ಸಿರುಗುಪ್ಪ ತಾಲೂಕು ಅಗಸನೂರು ಗ್ರಾಮದ 20 ತಮಟೆ ನಾದ, ಗಜೇಂದ್ರಗಡದ ಚಂಡಿ ಮೇಳ, ಆರ್ಯವೈಶ್ಯ ಮಹಿಳಾ ತಂಡದಿಂದ ನಡೆದ ಕೋಲಾಟ ಪ್ರದರ್ಶನ, ನಾಗವೇಷಧಾರಿಗಳ ಕುಣಿತ ಗಮನ ಸೆಳೆದವು. ಬೊಂಬೆ ಕುಣಿತ ಇತರ ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನ ಹಾಗೂ ವಿವಿಧ ಕನ್ನಡ ಗೀತೆಗಳಿಗೆ ಕುಣಿತ ಮೆರವಣಿಗೆಯ ಸೊಬಗು ಹೆಚ್ಚಿಸಿದವು. ಛತ್ರಪತಿ ಶಿವಾಜಿ ಮಹಾರಾಜ ಅವರ ಪ್ರತಿಕೃತಿ ಮೆರವಣಿಗೆಗೆ ಮೆರಗು ನೀಡಿತು.
ಎದೆ ನಡುಗಿಸುವ ಡಿಜೆ ಸದ್ದು, ಕಣ್ಣು ಕುಕ್ಕುವ ಬಣ್ಣ ಬಣ್ಣದ ವಿದ್ಯುತ್ ಬೆಳಕಿನಡಿ ಯುವಕ, ಯುವತಿಯರು ಕುಣಿದು ಕುಪ್ಪಳಿಸಿದರು.ರಾಜಬೀದಿಯಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಕೇಸರಿ ಬಾವುಟಗಳ ಹಾರಾಟ ಧ್ವನಿವರ್ಧಕದೊಂದಿಗೆ ಝೇಂಕರಿಸಿತು. ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಅಹಿತಕರ ಘಟನೆಗೆ ನಡೆಯದಂತೆ 1200ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.
ಮೆರವಣಿಗೆಯಲ್ಲಿ ಬಳ್ಳಾರಿಯ ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಸಿರುಗುಪ್ಪ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಸೇರಿದಂತೆ ಪಕ್ಷದ ಮುಖಂಡರು ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು. ಮಧ್ಯಾಹ್ನ 12 ಗಂಟೆಯಿಂದಲೇ ಗಣೇಶನ ಮೆರವಣಿಗೆ ಶುರುಗೊಂಡು ಸಂಜೆ ವೇಳೆಗೆ ವಿಸರ್ಜನೆಗೊಂಡಿತು.