ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ರಾಜ್ಯದಲ್ಲಿ ಜನಪರವಾದಂತಹ ಯಾವುದೇ ಕೆಲಸಕ್ಕೆ ಒತ್ತು ಕೊಡದೇ ಅಧಿಕಾರದ ದುರ್ಬಳಕೆ ಮಾಡಿಕೊಂಡಂತಹ ಬಿಜೆಪಿ ಪಕ್ಷ ಮತ್ತು ಕಾಂಗ್ರೆಸ್ ಸರ್ಕಾರ ಕೂಡ ರೈತರ ಸಮಸ್ಯೆಗೆ ಸ್ಪಂದಿಸುವಲ್ಲಿ ವಿಫಲವಾಗಿದ್ದು, ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪೂಣಚ್ಚ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವು ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ ಸರ್ಕಾರ ಅಧಿಕರಲ್ಲಿ ಇದ್ದ ಅವಧಿಯಲ್ಲಿ ಸತತ ಹೋರಾಟದ ಫಲವಾಗಿ ರೈತ ವಿರೋಧಿ ಮೂರು ಕಾಯಿದೆಗಳನ್ನು ವಾಪಸ್ ಪಡೆದಿದೆ. ಆದರೆ ಈವರೆಗೆ ಕೇಂದ್ರ ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸಿರುವುದಿಲ್ಲ. ಈ ಹೋರಾಟದಲ್ಲಿ ಮೃತಪಟ್ಟ ೭೫೦ ರೈತರಿಗೆ ಪರಿಹಾರ ನೀಡುವುದಾಗಿ ಕೇಂದ್ರ ಭರವಸೆ ನೀಡಿತ್ತು, ಆದರೆ ಈವರೆಗೆ ಅದರ ಬಗ್ಗೆ ಸರ್ಕಾರ ಗಮನಹರಿಸಿರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಮೂರು ಕಾಯಿದೆಯನ್ನು ವಾಪಸ್ ಪಡೆದು ಜನಪರ ಆಡಳಿತ ಕೊಡುವುದಾಗಿ ಹೇಳಿ ಬಂದಂತಹ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಿ ಒಂದು ವರ್ಷಗಳಾಗಿದೆ. ಈಗ ೫ ಗ್ಯಾರಂಟಿಗಳನ್ನು ಮಾತ್ರ ಕೊಡುವುದು ಕರ್ತವ್ಯ ಎಂದುಕೊಂಡಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡ ಕೇವಲ ಭರವಸೆಗಳನ್ನು ನೀಡಿ ರೈತರಿಗೆ ವಂಚನೆ ಮಾಡಿದೆ, ಕೊಬ್ಬರಿಗೆ ರೈತರಿಗೆ ಬೇಡಿಕೆಯಷ್ಟು ಬೆಂಬಲ ಬೆಲೆ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ. ಬರ ಪರಿಹಾರ ನೀಡುವಲ್ಲಿ ಕೂಡ ಸರ್ಕಾರಗಳು ವಿಫಲವಾಗಿದ್ದು ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ತೋರಿವೆ ಎಂದರು.
ಸೋಲರ್ ಹಾಕಿಸಿ ಸಾಲ ಕೊಡುವುದಾಗಿ ಹೇಳಿದ್ದು, ಸಲಕರಣೆ ವೆಚ್ಚ ರೈತರೇ ಭರಿಸಬೇಕು. ಇನ್ನು ಬರದಿಂದ ರೈತರು ತತ್ತರಿಸಿ ಹೋಗಿದ್ದರೂ ಬರ ಪರಿಹಾರ ಇದುವರೆಗೂ ಕೊಟ್ಟಿರುವುದಿಲ್ಲ. ಕೇಂದ್ರವು ಕೂಡ ವಂಚನೆ ಮಾಡಿದೆ ಎಂದು ದೂರಿದರು. ಫಸಲು ಪಹಣಿ, ಪೋಡಿ, ದುರಸ್ತಿ ಹಾಗೂ ಪೆಟ್ರೋಲ್, ಡಿಸೇಲ್ ಬೆಲೆಯನ್ನು ಕೂಡ ಹೆಚ್ಚಿಸಿದ್ದು, ಈಗ ಜುಲೈ ೧೫ರಿಂದ ವಿಧಾನಮಂಡಲದ ಅಧಿವೇಶನ ಆರಂಭವಾಗಲಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಕೂಡ ಒಂದು ದಿನ ಸರ್ಕಾರದ ನಿಲುವುಗಳನ್ನು ವಿರೋಧಿಸಿ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.ಇಲ್ಲಿ ಒಂದು ಪ್ರಾದೇಶಿಕ ಪಕ್ಷ ಇದ್ದು, ಅದು ಕೂಡ ರಾಷ್ಟ್ರೀಯ ಪಕ್ಷದ ಜೊತೆ ವಿಲೀನ ಆಗುವ ಹಂತಕ್ಕೆ ಬಂದಿದೆ. ಇಲ್ಲಿನ ನೆಲ ಜಲದ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ಮುಂದಿನ ದಿನಗಳಲ್ಲಿ ಮೂರನೇ ಶಕ್ತಿ ರಾಜಕೀಯವಾಗಿ ಬರಬೇಕು. ಅದು ಪರ್ಯಾಯವಾಗಿರಬೇಕು. ಶೇಕಡ ೭೦ರಿಂದ ೮೦ ಭಾಗ ಜನರು ಸುಮ್ಮನೆ ಕುಳಿತಿದ್ದು, ಸರ್ವೋದಯ ಕನಾಟಕ ಪಕ್ಷವನ್ನು ತಂದು ಮತ್ತೆ ರಾಜ್ಯದಲ್ಲಿ ಗಟ್ಟಿಗೊಳಿಸಬೇಕು. ಪರಿಶಿಷ್ಟ ಜಾತಿಯವರಿಗೆ ಮೀಸಲಿಟ್ಟಂತಹ ೧೮೭ ಕೋಟಿ ರು.ಗಳ ಹಣವನ್ನು ಕೊಳ್ಳೆ ಹೊಡೆಯುವ ಕೆಲಸ ಮಾಡಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ರಘು ಹಿರಿಸಾವೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ವಾಜಿದ್, ತಾಲೂಕು ಅಧ್ಯಕ್ಷ ಶಾಂತರಾಜ್ ಅರಸ್ ಉಪಸ್ಥಿತರಿದ್ದರು.