ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಬೈರಮಂಗಲ ವೃತ್ತದಲ್ಲಿ ನಡೆಯುತ್ತಿರುವ ಚಳವಳಿಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಜೆಡಿಎಸ್-ಬಿಜೆಪಿ ಮುಖಂಡರು ಹಾಗೂ ರೈತ ಮುಖಂಡರನ್ನು ಟೌನ್‌ಶಿಪ್ ಪರವಾಗಿರುವ ರೈತರು ಅಡ್ಡಗಟ್ಟಿ ವಾಪಸ್ ಕಳುಹಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ ಮತ್ತು ಜೆಡಿಎಸ್ ಚನ್ನಪಟ್ಟಣ ತಾಲೂಕು ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜುಅವರನ್ನು ಅಡ್ಡಗಟ್ಟಿದ ರೈತರು ನೀವ್ಯಾರು, ಎಲ್ಲಿಂದ ಬರುತ್ತಿದ್ದೀರಿ ಎಂದು ಪ್ರಶ್ನಿಸಿದರು. ಇಬ್ಬರು ಬಿಜೆಪಿ - ಜೆಡಿಎಸ್ ಮುಖಂಡರು, ಚನ್ನಪಟ್ಟಣದಿಂದ ಬಂದಿರುವುದಾಗಿ ಹೇಳಿದಾಗ ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡು ವಾಪಸ್ ಕಳುಹಿಸಿದರು.
ಕುಮಾರಸ್ವಾಮಿ ಹಣ ಕೊಟ್ಟು ಹೊರಗಡೆಯಿಂದ ಜನರನ್ನು ಕರೆಸಿದ್ದಾರೆ. ಆ ಮೂಲಕ ಗೂಂಡಾಗಿರಿ ಮಾಡುತ್ತಿದ್ದಾರೆ. ನಮ್ಮ ಬಳಿ ಆರ್ಟಿಸಿ, ಪಹಣಿ ಇದೆ. ನೀವ್ಯಾಕೆ ಬಂದಿದ್ದೀರಿ ಎಂದು ಹೆಗಲ ಮೇಲೆ ಹಸಿರು ಟವೆಲ್ ಹಾಕಿಕೊಂಡು ಬಂದವರಿಗೆ ಟೌನ್‌ಶಿಪ್ ಪರ ಪ್ರತಿಭಟನಾನಿರತ ರೈತರು ಪ್ರಶ್ನಿಸುತ್ತಿದ್ದರು. ಅಷ್ಟೇ ಅಲ್ಲದೆ ಪ್ರತಿಭಟನಾ ಸ್ಥಳಕ್ಕೆ ಬರುತ್ತಿದ್ದವರನ್ನು ರೈತರು ತಡೆದು ವಾಪಸ್ ಕಳುಹಿಸುತ್ತಿದ್ದರು.27ಕೆಆರ್ ಎಂಎನ್ 5.ಜೆಪಿಜಿ
ಜೆಡಿಎಸ್ ಚನ್ನಪಟ್ಟಣ ತಾಲೂಕು ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜ್ ಅವರನ್ನು ಟೌನ್‌ಶಿಪ್ ಪರ ರೈತರು ತರಾಟೆ ತೆಗೆದುಕೊಂಡಿರುವುದು.