ಕನ್ನಡಪ್ರಭ ವಾರ್ತೆ ಮಧುಗಿರಿ

ನಾವು ಕಲಿಯುವ ಅಕ್ಷರಗಳು ನಮ್ಮ ಸಂಸ್ಕೃತಿಯ ತೊಟ್ಟಲಾಗಬೇಕು. ಮಕ್ಕಳು ಗುಣಾತ್ಮಕ ಶಿಕ್ಷಣ ಕಲಿತು ಸಮಾಜಕ್ಕೆ ಆಸ್ತಿಯಾಗುವ ಜೊತೆಗೆ ಮುಂಬರುವ ಪೀಳಿಗೆಗೆ ಮಾದರಿಯಾಗಬೇಕು ಎಂದು ಎಲೆರಾಂಪುರದ ಕುಂಚಿಟಿಗ ಮಠದ ಪೀಠಾಧ್ಯಕ್ಷ ಶ್ರೀ ಹನುಮಂತನಾಥ ಸ್ವಾಮೀಜಿ ತಿಳಿಸಿದರು.

ತಾಲೂಕು ಕುಂಚಿಟಿಗ ವಕ್ಕಲಿಗರ ಸಂಘ ತಾಲೂಕು ಕುಂಚಿಟಿಗರ ನೌಕರರ ಸಂಘ ಇವರ ಸಂಯುಕ್ತಾಶ್ರಯದಲ್ಲಿ 2025-26ನೇ ಸಾಲಿನ ಎಸ್‌ಎಸ್‌ಎಲ್ಸಿ ಹಾಗೂ ಬಿ.ಎನ್ .ಶಂಕರಯ್ಯ ಸ್ಮಾರಕ ಐ.ಟಿ.ಐ. ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಶಿಕ್ಷಣ ಅತ್ಯಂತ ದೊಡ್ಡ ಅಸ್ತ್ರವಾಗಿದೆ. ಶಿಕ್ಷಣ ಮೌಲ್ಯಯುತವಾಗಿರಲಿ ಭವಿಷ್ಯದ ಹಾದಿಗೆ ಬೆಳಕಾಗಬೇಕು. ಜನ್ಮ ನೀಡಿದವರ ಗುರು ಹಿರಿಯರ ಬಗ್ಗೆ ಗೌರವ ತೋರಬೇಕು. ಪ್ರಸ್ತುತ 1 ವರ್ಷಕ್ಕೆ 50 ಮಂದಿ ಕುಂಚಿಟಿಗ ವಿದ್ಯಾರ್ಥಿಗಳು ವೈದ್ಯರಾಗುತ್ತಿದ್ದು, ಶ್ರೀಮಠದಿಂದ ತಾಲೂಕಿನ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಐಎಎಸ್/ ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಉಚಿತ ತರಬೇತಿ ನೀಡಲಾಗುತ್ತಿದೆ. ಕುಂಚಿಟಿಗರಿಗೆ ಓಬಿಸಿ ಮೀಸಲು ಸೌಲಭ್ಯ ನೀಡಬೇಕು ಎಂದರು.

ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ವಿದ್ಯಾರ್ಥಿಗಳು ದಿನ ಪತ್ರಿಕೆ ಹಾಗೂ ವೃತ್ತ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳಸಿಕೊಳ್ಳಬೇಕು. ವಕ್ಕಲಿಗರ ಸಂಘ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು 1 ಕೋಟಿ ರುಗಳ ದತ್ತಿ ನಿಧಿ ಸ್ಥಾಪಿಸುವಂತೆ ಸಲಹೆ ನೀಡಿದರು. ಪ್ರಸ್ತುತ ಕುಂಚಿಟಿಗರಲ್ಲಿ ಯಾವುದೇ ಶಾಸಕರಿಲ್ಲ, ಮಂತ್ರಿಗಳಿಲ್ಲ ಇರುವ ಕೆಲವೇ ಮಂದಿ ಐಎಎಸ್ ಅಧಿಕಾರಿಗಳು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಕುಂಚಿಟಿಗ ಸಮಾಜದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಶ್ರೀಮಠ ಮತ್ತು ಹಾಲಪ್ಪ ಪ್ರತಿಷ್ಠಾಪನಾ ಎಲ್ಲ ರೀತಿಯ ನೆರವು ನೀಡಲಿದೆ ಎಂದರು.


ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಕೊಡಂಡವಾಡಿ ಚಂದ್ರಶೇಖರ್ ಮಾತನಾಡಿ, ಮನೆಯಲ್ಲಿ ಮಕ್ಕಳಿಗೆ ಪೋಷಕರು ನಮ್ಮ ಸಂಸ್ಕೃತಿ,ಆಚಾರ-ವಿಚಾರ ಹಾಗೂ ಸಂಸ್ಕಾರ ಕಲಿಸಬೇಕು ಎಂದರು.

ಚೇತನ ವಿದ್ಯಾಸಂಸ್ಥೆ ಕಾರ್ಯದರ್ಶಿ ತುಂಗೋಟಿ ರಾಮಣ್ಣ ಮಾತನಾಡಿ,ಕುಂಚಿಟಿಗರಿಗೆ ಒಬಿಸಿ ಮಾಸಲಾತಿ ನೀಡಲು ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಅಂಗಿಕರಿಸಿ ಕೇಂದ್ರಕ್ಕೆ ಕಳುಹಿಸಿದ ಮಾಡಿದ ಸಂದರ್ಭದಲ್ಲಿ ಮಧುಗಿರಿ ಕ್ಷೇತ್ರದ ಶಾಸಕ ಕೆ.ಎನ್.ರಾಜಣ್ಣ ಅವರ ಪಾತ್ರ ಮಹತ್ತರವಾದುದು ಎಂದರು.

ಕೆಂಪೇಗೌಡ ಜಯಂತಿ ಪ್ರಯುಕ್ತ ನಡೆದ ಈ ಸಮಾರಂಭದಲ್ಲಿ ಶ್ರೀಹನುಮಂತನಾಥಸ್ವಾಮಿಜಿ ಕುಂಚಿಟಿಗ ವಕ್ಕಲಿಗರ ಸಂಘದಿಂದ ಕೆಂಪೇಗೌಡ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಲ್ಲಿಸಿದರು.ಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸುಧಾರಂಗರಾಜು ,ಮುಖಂಡರಾದ ವೀರೇಂದ್ರ,ಮಲ್ಲಿಕಾರ್ಜುನಯ್ಯ ತಾಲೂಕು ಕುಂಚಿಟಿಗರ ಸಂಘದ ಅಧ್ಯಕ್ಷ ಪಿ.ಎನ್.ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಡಿ.ಎಸ್‌.ಸಿದ್ದಪ್ಪ,ಉಪಾಧ್ಯಕ್ಷ ಜಗದೀಶ್,ಕಾರ್ಯದರ್ಶಿ ಉಮೇಶ್,ಖಜಾಂಚಿ ರಾಮಚಂದ್ರಯ್ಯ ನೌಕರರ ಸಂಘದ ಕರೇಗೌಡ ,ನಿವೃತ್ತ ನೌಕರ ಜಿ.ಜಯರಾಮಯ್ಯ, ನಿರ್ದೇಶಕರಾದ ಬಂದ್ರೇಹಳ್ಳಿ ಕುಮಾರ್,ಎಸ್‌.ಮೋಹನ್,ಕಾಳೇಗೌಡ,ಚೇತ ವಿದ್ಯಾಸಂಸ್ಥೆ ಕಾರ್ಯದರ್ಶಿ ತುಂಗೋಟಿ ರಾಮಣ್ಣ,ಲಕ್ಷ್ಮೀ ಚಾರಿಟಬಲ್ ಟ್ರಸ್ಟ ಅಧ್ಯಕ್ಷೆ ಸುಧಾರಂಗರಾಜು,ಮುಖಂಡರಾದ ವಿರೇಂದ್ರ,ಮಲ್ಲಿಕಾರ್ಜುನಯ್ಯ ಹಾಗೂ ಸಮಾಜದ ಬಂಧುಗಳು ಇದ್ದರು.