ರೈತರ ಕೊಳವೆ ಬಾವಿಗಳಿಗೆ ನೀಡಬೇಕಾದ 7 ಗಂಟೆ ವಿದ್ಯುತ್ ಅನ್ನು ಸಮರ್ಪಕವಾಗಿ ನೀಡದೆ ನಿರಂತರ ವಿದ್ಯುತ್ ಕಡಿತಗೊಳ್ಳುತ್ತಿರುವುದರಿಂದ ರೈತರು ತುಂಬ ತೊಂದರೆ ಅನುಭವಿಸುತ್ತಿದ್ದು, ವಿದ್ಯುತ್ ಅಭಾವದಿಂದ ರೈತರು ಬೆಳೆದ ಬೆಳೆಯು ಒಣಗಿಹೋಗಿದೆ ಎಂದು ಆರೋಪಿಸಿ ರೈತರನ್ನು ಒಳಗೊಂಡಂತೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಆಲೂರು ಘಟಕದ ವತಿಯಿಂದ ಆಲೂರು ಸೆಸ್ಕ್ ಕಚೇರಿ ಬಳಿ ಎಂಜಿನಿಯರ್ ಹಾಗೂ ಸಿಬ್ಬಂದಿ ವಿರುದ್ಧ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಆಲೂರು
ತಾಲೂಕಿನಾದ್ಯಂತ ರೈತರ ಕೊಳವೆ ಬಾವಿಗಳಿಗೆ ನೀಡಬೇಕಾದ 7 ಗಂಟೆ ವಿದ್ಯುತ್ ಅನ್ನು ಸಮರ್ಪಕವಾಗಿ ನೀಡದೆ ನಿರಂತರ ವಿದ್ಯುತ್ ಕಡಿತಗೊಳ್ಳುತ್ತಿರುವುದರಿಂದ ರೈತರು ತುಂಬ ತೊಂದರೆ ಅನುಭವಿಸುತ್ತಿದ್ದು, ವಿದ್ಯುತ್ ಅಭಾವದಿಂದ ರೈತರು ಬೆಳೆದ ಬೆಳೆಯು ಒಣಗಿಹೋಗಿದೆ ಎಂದು ಆರೋಪಿಸಿ ರೈತರನ್ನು ಒಳಗೊಂಡಂತೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಆಲೂರು ಘಟಕದ ವತಿಯಿಂದ ಆಲೂರು ಸೆಸ್ಕ್ ಕಚೇರಿ ಬಳಿ ಎಂಜಿನಿಯರ್ ಹಾಗೂ ಸಿಬ್ಬಂದಿ ವಿರುದ್ಧ ಪ್ರತಿಭಟನೆ ನಡೆಸಿದರು.ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಎಚ್ ಬಿ ಧರ್ಮರಾಜು ಮಾತನಾಡಿ ಕೆಲವು ಅಧಿಕಾರಿಗಳ ಬೇಜವಾಬ್ದಾರಿತನದಿಂದ ಈ ಭಾಗದಲ್ಲಿ ಹಲವು ದಿನಗಳಿಂದ ವಿದ್ಯುತ್ ಸಮಸ್ಯೆ ಎದುರಾಗಿದೆ ಸರ್ಕಾರವು ರೈತರ ಬೋರ್‌ವೆಲ್‌ಗಳಿಗೆ ದಿನನಿತ್ಯ 7 ಗಂಟೆಗಳ ಕಾಲ ನಿರಂತರ ವಿದ್ಯುತ್ತನ್ನು ನೀಡಬೇಕು ಎಂದು ಆದೇಶ ಮಾಡಿದ್ದರೂ ಕೂಡ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಪ್ರತಿದಿನ ಸರಿಯಾಗಿ ಎರಡರಿಂದ ಮೂರು ಗಂಟೆಗಳ ಕಾಲವೂ ಕೂಡ ವಿದ್ಯುತ್ ರೈತರಿಗೆ ಸರಬರಾಜು ಆಗುತ್ತಿಲ್ಲ. ವಿದ್ಯುತ್ತನ್ನು ನಂಬಿ ಕೊಳವೆಬಾವಿಗಳನ್ನು ಹೊಂದಿರುವ ರೈತರು ಬೇಸಿಗೆಕಾಲದಲ್ಲಿ ವಿವಿಧ ರೀತಿಯ ಬೆಳೆಗಳನ್ನು ಬೆಳೆದಿದ್ದರು ಆದರೆ ವಿದ್ಯುತ್ ಸರಬರಾಜು ಸರಿಯಾಗಿ ಆಗದೆ ಬೆಳೆದ ಬೆಳೆಯು ಸಂಪೂರ್ಣವಾಗಿ ಒಣಗಿದ್ದು ರೈತರನ್ನು ಸಾಲದ ಸುಳಿಗೆ ತಳ್ಳುವಂತೆ ಮಾಡಿದೆ ಈ ವಿಷಯವನ್ನು ಇಲಾಖೆಯ ಮೇಲಧಿಕಾರಿಗಳಿಗೆ ತಿಳಿಸಿದರು ಕೂಡ ಸಮಸ್ಯೆಗೆ ಇಲ್ಲಿಯವರೆಗೆ ಯಾವುದೇ ರೀತಿಯಾದ ಪರಿಹಾರವೂ ಕೂಡ ದೊರೆತಿಲ್ಲ. ಪ್ರಸ್ತುತ ವರ್ಷ ರೈತರು ಬೆಳೆದ ಯಾವುದೇ ಬೆಳೆಗೆ ಬೆಲೆ ಇಲ್ಲದೆ ಕಂಗಾಲಾಗಿರುವ ರೈತರಿಗೆ ವಿದ್ಯುತ್ ಸಮಸ್ಯೆಯೂ ಕೂಡ ರೈತರ ಜೀವನಕ್ಕೆ ಕೊಡಲಿ ಪೆಟ್ಟನ್ನು ಕೊಟ್ಟಂತಾಗಿದೆ. ಆದುದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಕ್ಷಣ ಕಾರ್ಯ ಪ್ರವೃತ್ತರಾಗಿ ತಾಲೂಕಿನಲ್ಲಿ ಆಗುತ್ತಿರುವ ವಿದ್ಯುತ್ ಸಮಸ್ಯೆಗೆ ಶೀಘ್ರ ಪರಿಹಾರವನ್ನು ಕಲ್ಪಿಸುವಂತೆ ಒತ್ತಾಯಿಸಿದರು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸಿಮೆಂಟ್ ಮಂಜು ವಿದ್ಯುತ್ ಸಮಸ್ಯೆಯ ಕುರಿತಾಗಿ ನಾಳೆ ವಿದ್ಯುತ್ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರಿಂದ ಪ್ರತಿಭಟನಾಕರರು ಪ್ರತಿಭಟನೆ ಹಿಂಪಡೆದರು. ಆಲೂರು ಸೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ರವಿ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರನ್ನು ಮನವೊಲಿಸಿ ವಿದ್ಯುತ್ ಸಮಸ್ಯೆ ಬಗ್ಗೆ ಹಾಗೂ ಸರಿಯಾಗಿ ಕರ್ತವ್ಯ ನಿರ್ವಹಿಸದ ಸಿಬ್ಬಂದಿಯ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎಚ್. ಬಿ ಧರ್ಮರಾಜು, ಉಪಾಧ್ಯಕ್ಷ ನಾಗೇಶ್, ರೈತ ಸಂಘಟನೆಗಳ ಮುಖಂಡರಾದ ಕೃಷ್ಣಮೂರ್ತಿ, ಜಯಣ್ಣ, ಮಲ್ಲೇಶ್, ಯೋಗೇಶ್, ಮಂಜುನಾಥ್, ತೀರ್ಥಪ್ರಸಾದ್, ವಿಶ್ವ ಸೇರಿದಂತೆ ಹಲವಾರು ರೈತ ಮುಖಂಡರು, ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.