ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧಿಪತಿ ಶ್ರೀ ವಚನಾನಂದ ಸ್ವಾಮೀಜಿ ಅವರಿಗೆ ಮಕ್ಕಳ ದುರ್ಬಳಕೆ ಹಾಗೂ ದೌರ್ಜನ್ಯದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಹರಿಹರ: ಇಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧಿಪತಿ ಶ್ರೀ ವಚನಾನಂದ ಸ್ವಾಮೀಜಿ ಅವರಿಗೆ ಮಕ್ಕಳ ದುರ್ಬಳಕೆ ಹಾಗೂ ದೌರ್ಜನ್ಯದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಮಠದ ಆಂತರಿಕ ವಿವಾದಗಳ ನಡುವೆಯೇ ಕೇಳಿಬಂದಿದ್ದ ಈ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಶ್ರೀಗಳ ಪರವಾಗಿ ಏಪ್ರಿಲ್ 21ರಂದು ಜಿಲ್ಲಾ ನ್ಯಾಯಾಲಯದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಲಂ 482ರ ಅಡಿಯಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ (ಕ್ರಿ.ಮಿ.ನಂ. 324/2026) ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು, ಸರ್ಕಾರಿ ಅಭಿಯೋಜಕರ ಆಕ್ಷೇಪಣೆ ಹಾಗೂ ಪ್ರತಿವಾದಗಳನ್ನು ಆಲಿಸಿದ ನಂತರ ಮೇ 2ರಂದು ಶ್ರೀಗಳಿಗೆ ಜಾಮೀನು ನೀಡಿ ಆದೇಶ ಹೊರಡಿಸಿದ್ದು, ಶ್ರೀಗಳಿಗೆ ತಾತ್ಕಾಲಿಕ ಸಮಾಧಾನ ಸಿಕ್ಕಂತಾಗಿದೆ.

ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ, ಅಪ್ರಾಪ್ತ ಮಕ್ಕಳು ಮತ್ತು ಸಂವೇದನಾಶೀಲ ಪ್ರಕರಣಗಳಿಗೆ ಸಂಬಂಧಿಸಿದ ಆದೇಶದ ಪ್ರತಿಗಳನ್ನು ಸಾರ್ವಜನಿಕವಾಗಿ ಆನ್‌ಲೈನ್‌ನಲ್ಲಿ ಲಭ್ಯವಾಗದಂತೆ ಗೌಪ್ಯವಾಗಿಡಲಾಗಿದೆ.

ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು. ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಮತ್ತು ನ್ಯಾಯಾಲಯದ ಅನುಮತಿಯಿಲ್ಲದೇ ವ್ಯಾಪ್ತಿ ಬಿಟ್ಟು ಹೋಗಬಾರದು ಎಂಬಂತಹ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಲಾಗಿದೆ ಎಂದು ತಿಳಿದುಬಂದಿದೆ.

ಪ್ರಕರಣದ ಹಿನ್ನೆಲೆ:

ಏ.17ರಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಮಂಜುಳ ಮಹೇಶ್ ಹಾಗೂ ತಂಡವು ಹರಿಹರ ಮಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಮಠದಲ್ಲಿದ್ದ ಮಕ್ಕಳು ಸ್ವಾಮೀಜಿ ಹೊಡೆಯುತ್ತಾರೆ, ಬೈಯುತ್ತಾರೆ ಹಾಗೂ ಹುಷಾರಿಲ್ಲದಿದ್ದಾಗ ಔಷಧ ಕೊಡುವುದಿಲ್ಲ ಎಂಬ ಆರೋಪಗಳನ್ನು ಸಮಿತಿಯ ಮುಂದೆ ಮಾಡಿದ್ದರು.

ಈ ಸಂಬಂಧ ಮಕ್ಕಳ ವಾಸದ ಕೊಠಡಿ, ಗುರು ನಿವಾಸ ಹಾಗೂ ಭೋಜನಾಲಯಗಳನ್ನು ಸಮಿತಿಯು ಪರಿಶೀಲಿಸಿ, ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಶ್ರೀಗಳ ಬಂಧನದ ಭೀತಿ ಎದುರಾಗಿತ್ತು.

ಸದ್ಯ ಮಠದ ಆವರಣದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಜಾಮೀನು ದೊರೆತಿರುವುದು ಶ್ರೀಗಳ ಬೆಂಬಲಿಗರಲ್ಲಿ ಸಮಾಧಾನ ತಂದಿದೆ. ಆದರೆ, ಲೆಕ್ಕಪತ್ರದ ವಿವಾದ ಹಾಗೂ ಮಠದ ಆಡಳಿತಾತ್ಮಕ ಸಂಘರ್ಷ ಇನ್ನೂ ಬೂದಿ ಮುಚ್ಚಿದ ಕೆಂಡದಂತೆಯೇ ಮುಂದುವರಿದಿದೆ.

- - -

-05HRR.03: ವಚನಾನಂದ ಶ್ರೀ.