ಧಾರವಾಡ:

ಪಂಚಗಂಗಾ ಬೀಜ ಕಂಪನಿಯು ಕಳಪೆ ಈರುಳ್ಳಿ ಬೀಜ ಮಾರಾಟ ಮಾಡಿದ್ದು, ಕಂಪನಿ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಸೋಮವಾರ ಕಬ್ಬೇನೂರು ಗ್ರಾಮದ ರೈತರು ತೋಟಗಾರಿಕಾ ಇಲಾಖೆ ಎದುರು ಪ್ರತಿಭಟನೆ ನಡೆಸಿ ಆಗ್ರಹಿಸಿದರು.

ಕಬ್ಬೇನೂರ ಗ್ರಾಮ ಹಾಗೂ ಸುತ್ತಲಿನ ರೈತರು ಸುಮಾರು 500 ಎಕರೆ ಭೂಮಿಯಲ್ಲಿ ಪಂಚಗಂಗಾ ಕಂಪನಿ ಈರುಳ್ಳಿ ಬೀಜ ಖರೀದಿಸಿ ಬಿತ್ತನೆ ಮಾಡಿದ್ದು, ಬಹುತೇಕ ಶೇ.75ರಷ್ಟು ಮೊಳಕೆ ಬಾರದೇ ಬೆಳೆ ಹಾಳಾಗಿದೆ. ಇನ್ನುಳಿದ ಶೇ. 25ರಷ್ಟು ಬೆಳೆಯು ಬೀಜ ಮೊಳಕೆಯೊಡೆದು ನಂತರದಲ್ಲಿ ಒಣಗಿದೆ. ಮಳೆ ಕೊರತೆ ಹಿನ್ನೆಲೆಯಲ್ಲಿ ಹೀಗಾಗಿರಬಹುದು ಎಂದು ನೀರು ಸಹ ಉಣಿಸಿದ್ದೇವೆ. ಆದರೆ, ಇದೇ ಸಮಯದಲ್ಲಿ ನಮ್ಮ ಜೊತೆಗೆ ಬೇರೆ ಕಂಪನಿ ಬೀಜ ಬಿತ್ತಿದ ರೈತರ ಬೆಳೆಯು ಚೆನ್ನಾಗಿದೆ. ಆದ್ದರಿಂದ ಇದು ಬೀಜದ ಸಮಸ್ಯೆ ಎಂದು ರೈತರಾದ ಮಲ್ಲಿಕಾರ್ಜುನ ಕರಗುಂದ ಆರೋಪಿಸಿದರು.

ಗ್ರಾಮದ ಬಹಳಷ್ಟು ರೈತರು ಬಿತ್ತನೆ ಮಾಡಿರುವ ಈರುಳ್ಳಿ ಬೆಳೆದಿಲ್ಲ. ಈ ಬಗ್ಗೆ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಬೇಕೆಂದು ಕಂಪನಿ ಅಧಿಕಾರಿಗಳಿಗೆ ಸಂಪರ್ಕಿಸಿದರೂ ಸ್ಪಂದಿಸುತ್ತಿಲ್ಲ. ಪ್ರತಿ ಎಕರೆಗೆ ₹ 15ರಿಂದ ₹ 20 ಸಾವಿರ ವೆಚ್ಚ ಮಾಡಿದ್ದು, ಆರ್ಥಿಕ ಸಂಕಷ್ಟದಲ್ಲಿದ್ದೇವೆ. ಈರುಳ್ಳಿ ಬೆಳೆ ಮುರಿದು ಬೇರೆ ಬೆಳೆ ಬಿತ್ತನೆಗೆ ನೀರಿನ ಕೊರತೆ ಇದೆ. ಜೊತೆಗೆ ಮತ್ತೊಮ್ಮೆ ಬಿತ್ತನೆಗೆ ಖರ್ಚು ಮಾಡುವಷ್ಟು ಆರ್ಥಿಕ ಸಂಕಷ್ಟ ನಮಗಿದೆ. ಈ ಹಿನ್ನೆಲೆಯಲ್ಲಿ ತಮಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.

ರೈತರ ಮನವಿಗೆ ಸ್ಪಂದಿಸಿದ ತೋಟಾಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಕಾಶೀನಾಥ ಭದ್ರಣ್ಣವರ, ಕೂಡಲೇ ಕಬ್ಬೇನೂರ ಗ್ರಾಮಕ್ಕೆ ತೋಟಗಾರಿಕೆ ವಿವಿ ವಿಜ್ಞಾನಿಗಳನ್ನು ಕಳುಹಿಸಿ ಈರುಳ್ಳಿ ಬೀಜದ ಪರಿಶೀಲನೆ ಮಾಡಲಾಗುವುದು. ವಿಜ್ಞಾನಿಗಳು ನೀಡಿದ ವರದಿ ಆಧರಿಸಿ ರೈತರಿಗೆ ನ್ಯಾಯ ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.


ಈ ವೇಳೆ ರೈತರಾದ ವಿನಾಯಕ ಕರಡಿಗುಡ್ಡ, ಮಾಂತೇಶ ಕರಡಿಗುಡ್ಡ, ದಯಾನಂದ ಹಸಬಿ, ಯಲ್ಲಪ್ಪಗೌಡ ಮೂದಿಗೌಡ್ರ, ರುದ್ರಗೌಡ ಪರತಗೌಡ, ಸಂಗಣ್ಣ ಹಸಬಿ, ಈರನಗೌಡ ರಾಚನಗಗೌಡ್ರ ಮತ್ತಿತರರು ಇದ್ದರು.