ಹಾವೇರಿ: ಕೇಂದ್ರ ಸರ್ಕಾರದ ಸಹಕಾರ ಸಚಿವಾಲಯ 5 ವರ್ಷ ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಕೆಸಿಸಿ ಬ್ಯಾಂಕಿನ ಕಚೇರಿ ಆವರಣದಲ್ಲಿ ಸೋಮವಾರ ಸಹಕಾರದಿಂದ ಸಮೃದ್ಧಿ ಎಂಬ ಧ್ಯೇಯದೊಂದಿಗೆ ಜಿಲ್ಲೆಯ ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಮತ್ತು ಸಹಕಾರಿ ಸಂಘದ ಸದಸ್ಯರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡ ಸಹಕಾರ ಸಪ್ತಾಹಕ್ಕೆ ಚಾಲನೆ ನೀಡಲಾಯಿತು.
ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಸವರಾಜ ಅರಬಗೊಂಡ ಅವರು, ಜೂ. 29ರಿಂದ ಜು. 6ರ ವರೆಗೆ ನಡೆಯುವ ಸಹಕಾರ ಸಪ್ತಾಹಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿದರು.ಸಹಕಾರ ಪ್ರತಿಜ್ಞೆ ಮತ್ತು ಹಳ್ಳಿಗಳಲ್ಲಿ ಸಹಕಾರ ಸಂಘಗಳಿಂದ ಮರ ನೆಡುವ ಅಭಿಯಾನ ಮತ್ತು ಗ್ರಾಮೀಣಾಭಿವೃದ್ಧಿ ಯಲ್ಲಿ ಸಹಕಾರಿ ಸಂಸ್ಥೆಗಳ ಮಹತ್ವದ ಕುರಿತು ಮಾಹಿತಿ ನೀಡಿದ ಅವರು, ಸಹಕಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ, ಯುವಜನರು ಹಾಗೂ ಯುವಕರು ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ತಮ್ಮ ತಮ್ಮ ಸುತ್ತಮುತ್ತಲಿನ ಜಾಗದಲ್ಲಿ ಹಾಗೂ ಸಂಘಗಳಲ್ಲಿ ಸಸಿ ನೆಡುವ ಮೂಲಕ ಅವುಗಳನ್ನು ಪಾಲನೆ ಪೋಷಣೆ ಮಾಡಬೇಕು. ಉತ್ತಮ ವಾತಾವರಣ ಹಾಗೂ ಪರಿಸರವನ್ನು ನಿರ್ಮಿಸಿ ಒಳ್ಳೆಯ ಆರೋಗ್ಯ ಪಡೆದುಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಸಹಕಾರ ಸಂಘಗಳ ಸಹಾಯಕ ನಿಬಂಧಕ ವಿಕ್ರಮ್ ಕುಲಕರ್ಣಿ ಮಾತನಾಡಿ, ತಾಂತ್ರಿಕ ಯುಗದಲ್ಲಿ ಸಹಕಾರ ಕ್ಷೇತ್ರ ನಿತ್ಯ ಬದಲಾವಣೆಯಾಗುತ್ತಿದೆ. ಪ್ರತಿಯೊಂದು ಸಹಕಾರ ಸಂಘಗಳಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಜರುಗಿಸಲು ಸಲಹೆ ನೀಡಿದರು. ಸಂಘಗಳಲ್ಲಿ ಕನಿಷ್ಠ 2 ಗಿಡಗಳನ್ನಾದರು ನೆಟ್ಟು ಬೆಳೆಸಬೇಕು ಎಂದರು.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಧರಿಯಪ್ಪಗೌಡ ಪಾಟೀಲ ಅವರು ಕೇಂದ್ರ ಸರ್ಕಾರ ಉದ್ದೇಶಿಸಿರುವ ಈ ಸಹಕಾರ ಸಪ್ತಾಹದ ಉದ್ದೇಶಗಳನ್ನು ಗ್ರಾಮೀಣ ಮಟ್ಟದಲ್ಲಿ ಯಶಸ್ವಿಯಾಗಿ ನೆರವೇರಿಸಬೇಕು ಎಂದು ಹೇಳಿದರು.
ಈ ವೇಳೆ ಧಾರವಾಡ ಕೆ.ಸಿ.ಸಿ. ಬ್ಯಾಂಕಿನ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಮಲ್ಲಿಕಾರ್ಜುನ ಸಾತೇನಹಳ್ಳಿ, ವೀರಭದ್ರಪ್ಪ ಉಪ್ಪಿನ, ಚಂದ್ರಶೇಖರ ಛತ್ರದ, ಬಸವೇಶಗೌಡ ಪಾಟೀಲ, ನಿಸ್ಸೀಮಗೌಡ ಪಾಟೀಲ, ಬಸನಗೌಡ ಪಾಟೀಲ, ಮೃತ್ಯುಂಜಯ ಯಲಿಗಾರ, ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರಕಾಶ ಹಿರಗೊಳಿ, ಸೇರಿದಂತೆ ಕೆಸಿಸಿ ಬ್ಯಾಂಕ್ ಹಾವೇರಿ ಶಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಿಲ್ಲೆಯ ಸಂಘ ಸಂಸ್ಥೆಗಳ ಅಧಿಕಾರಿ ಸಿಬ್ಬಂದಿ ಹಾಜರಿದ್ದರು. ಜಿಲ್ಲಾ ಸಹಕಾರ ಯೂನಿಯನ್ ಸಿಇಒ ಸವಿತಾ ಹಿರೇಮಠ ನಿರ್ವಹಿಸಿದರು.