5 ವರ್ಷದೊಳಗಿನ ಒಟ್ಟು 1,99,934 ಮಕ್ಕಳ ಗುರಿಯಲ್ಲಿ 1,94,579 ಮಕ್ಕಳಿಗೆ ಯಶಸ್ವಿಯಾಗಿ ಲಸಿಕೆ ಹಾಕಲಾಗಿದೆ

ಬಳ್ಳಾರಿ: ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ಅಂಗವಾಗಿ ಜೂ.28ರ ಭಾನುವಾರದಂದು ನಡೆದ ಲಸಿಕೆ ಕಾರ್ಯಕ್ರಮವು ಬಳ್ಳಾರಿ ಜಿಲ್ಲೆಯಲ್ಲಿ ಮೊದಲ ದಿನವೇ ಶೇ.97.3ರಷ್ಟು ಪ್ರಗತಿ ಸಾಧಿಸಲಾಗಿದೆ.ಜಿಲ್ಲೆಯ ಬಳ್ಳಾರಿ, ಸಂಡೂರು, ಸಿರುಗುಪ್ಪ, ಕುರುಗೋಡು ಮತ್ತು ಕಂಪ್ಲಿ ತಾಲೂಕುಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಬೂತ್ ದಿನದಂದು 5 ವರ್ಷದೊಳಗಿನ ಒಟ್ಟು 1,99,934 ಮಕ್ಕಳ ಗುರಿಯಲ್ಲಿ 1,94,579 ಮಕ್ಕಳಿಗೆ ಯಶಸ್ವಿಯಾಗಿ ಲಸಿಕೆ ಹಾಕಲಾಗಿದೆ.

ಬಳ್ಳಾರಿ ತಾಲೂಕಿನಲ್ಲಿ 95,879 ಮಕ್ಕಳ ಲಸಿಕಾ ಗುರಿಗೆ 91,990ರಷ್ಟು ಸಾಧನೆ ಮಾಡಲಾಗಿದೆ. (ಶೇ.95.9-ಪ್ರಗತಿ), ಕಂಪ್ಲಿ ತಾಲೂಕಿನಲ್ಲಿ 14,627 ಮಕ್ಕಳ ಲಸಿಕಾ ಗುರಿಗೆ 14,921ರಷ್ಟು ಸಾಧನೆಯಾಗಿದೆ. (ಶೇ.102-ಪ್ರಗತಿ), ಕುರುಗೋಡು ತಾಲೂಕಿನಲ್ಲಿ 17,241 ಮಕ್ಕಳ ಲಸಿಕಾ ಗುರಿಗೆ 17,062-ಸಾಧನೆಯಾಗಿದೆ. (ಶೇ. 99-ಪ್ರಗತಿ), ಸಂಡೂರು ತಾಲೂಕಿನಲ್ಲಿ 35,818 ಮಕ್ಕಳ ಲಸಿಕಾ ಗುರಿಗೆ 34,993ರಷ್ಟು ಸಾಧನೆ ಮಾಡಲಾಗಿದೆ. (ಶೇ.98.8-ಪ್ರಗತಿ), ಸಿರುಗುಪ್ಪ ತಾಲೂಕಿನಲ್ಲಿ 36,369 ಮಕ್ಕಳ ಲಸಿಕಾ ಗುರಿಗೆ 35,613ರಷ್ಟು ಸಾಧಿಸಲಾಗಿದೆ. (ಶೇ.97.9-ಪ್ರಗತಿ). 1,99,934 ಲಸಿಕಾ ಗುರಿಗೆ 1,94,579 ರಷ್ಟು ಸಾಧನೆ ಮಾಡಲಾಗಿದೆ.

ವಿಶೇಷವೆಂದರೆ, ಜಿಲ್ಲೆಯ ಕಂಪ್ಲಿ ತಾಲೂಕಿನಲ್ಲಿ ನಿಗದಿಪಡಿಸಿದ್ದ ಗುರಿಗಿಂತಲೂ ಹೆಚ್ಚು ಅಂದರೆ ಶೇ.102ರಷ್ಟು ಮಕ್ಕಳಿಗೆ ಲಸಿಕೆ ನೀಡುವ ಮೂಲಕ ದಾಖಲೆಯ ಸಾಧನೆ ಮಾಡಲಾಗಿದೆ. ಕುರುಗೋಡು ಹಾಗೂ ಸಂಡೂರು ತಾಲೂಕುಗಳೂ ಕ್ರಮವಾಗಿ ಶೇ.99 ಹಾಗೂ ಶೇ.98.8ರಷ್ಟು ಪ್ರಗತಿ ಸಾಧಿಸಿ ಮುಂಚೂಣಿಯಲ್ಲಿವೆ.

ಜಿಲ್ಲಾದ್ಯಂತ ಯಾವುದೇ ಮಗು ಲಸಿಕೆಯಿಂದ ವಂಚಿತವಾಗಬಾರದು ಎಂಬ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ವ್ಯಾಪಕ ಸಿದ್ಧತೆ ಮಾಡಿಕೊಂಡಿತ್ತು. ಜಿಲ್ಲೆಯಲ್ಲಿ 335 ಕ್ಲಿಷ್ಟಕರ ಪ್ರದೇಶಗಳನ್ನು ಗುರುತಿಸಿ, ಅಲ್ಲಿ ಲಸಿಕೆ ಹಾಕಲು 236 ವಿಶೇಷ ತಂಡಗಳನ್ನು ರಚಿಸಲಾಗಿತ್ತು. 977 ಬೂತ್‌ಗಳು ಹಾಗೂ 615 ಮನೆ ಭೇಟಿ ತಂಡಗಳು ಕಾರ್ಯ ನಿರ್ವಹಿಸಿದವು. ಸಂತೆ, ಮಾರುಕಟ್ಟೆ, ಬಸ್ ನಿಲ್ದಾಣಗಳಂತಹ ಜನನಿಬಿಡ ಪ್ರದೇಶಗಳಿಗಾಗಿ 50 ತಂಡಗಳನ್ನು ಹಾಗೂ ಇಟ್ಟಿಗೆ ಭಟ್ಟಿ, ಕಟ್ಟಡ ಕಾಮಗಾರಿ ಪ್ರದೇಶ, ಕಬ್ಬು ಕಡಿಯುವ ಸ್ಥಳ ಮತ್ತು ಕುರಿಹಟ್ಟಿಗಳಂತಹ ವಲಸೆ ಕಾರ್ಮಿಕರ ಪ್ರದೇಶಗಳಿಗಾಗಿ 15 ಸಂಚಾರಿ (ಮೊಬೈಲ್) ತಂಡಗಳನ್ನು ನಿಯೋಜಿಸಲಾಗಿತ್ತು.

ಈ ಬೃಹತ್ ಅಭಿಯಾನದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಕರು ವ್ಯಾಕ್ಸಿನೇಟರ್‌ಗಳಾಗಿ ಸಕ್ರಿಯವಾಗಿ ಭಾಗವಹಿಸಿದ್ದರು. ಇವರ ಕಾರ್ಯದ ಉಸ್ತುವಾರಿಗಾಗಿ 188 ಮೇಲ್ವಿಚಾರಕರು ಹಾಗೂ ಜಿಲ್ಲಾ ಮಟ್ಟದ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು ನೋಡಲ್ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ಅವರು ತಿಳಿಸಿದ್ದಾರೆ.

ಪಲ್ಸ್‌ ಪೋಲಿಯೋ ಅಭಿಯಾನದ ಮೊದಲ ದಿನವೇ ಅತ್ಯುತ್ತಮ ಪ್ರಗತಿಯಾಗಿದೆ. ಜಿಲ್ಲಾಧಿಕಾರಿ, ಜಿಪಂ ಸಿಇಒ ಮಾರ್ಗದರ್ಶನ ಹಾಗೂ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಈ ಮೈಲಿಗಲ್ಲು ತಲುಪಲು ಸಾಧ್ಯವಾಗಿದೆ. ಉಳಿದಿರುವ 5,355 ಮಕ್ಕಳಿಗೆ ಜುಲೈ 1ರವರೆಗೆ ನಡೆಯಲಿರುವ ಮನೆ-ಮನೆ ಲಸಿಕಾ ಕಾರ್ಯಕ್ರಮದಲ್ಲಿ ಪೋಲಿಯೋ ಹನಿಗಳನ್ನು ಹಾಕಲಾಗುವುದು ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್‌ಬಾಬು.