ಬಳ್ಳಾರಿ: ಭಕ್ತಿ ಪಂಥದ ಪ್ರಮುಖ ಹರಿಕಾರರು, ಸಮಾಜ ಸುಧಾರಕರೂ ಆದ ಸಂತಕವಿ ಕನಕದಾಸರ ತತ್ವ ಆದರ್ಶಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ‘ಮುತ್ತು ಬಂದಿದೆ ಕೇರಿಗೆ’ ಸಂಗೀತ-ನೃತ್ಯ ರೂಪಕ ಗಮನ ಸೆಳೆಯಿತು.

ಕನಕದಾಸರ ಪ್ರಸಿದ್ಧ ಕೀರ್ತನೆ ‘ಮುತ್ತು ಬಂದಿದೆ ಕೇರಿಗೆ’ ಎಂಬ ಸಾಲುಗಳನ್ನೇ ಶೀರ್ಷಿಕೆಯಾಗುಳ್ಳ ಈ ರೂಪಕವು, ಕೇವಲ ಭಕ್ತಿಯನ್ನಷ್ಟೇ ಅಲ್ಲದೇ ಅವರು, ಸಾರಿದ ಸಾಮಾಜಿಕ ಸಮಾನತೆಯ ಸಂದೇಶವನ್ನು ಕಲಾತ್ಮಕವಾಗಿ ಅನಾವರಣಗೊಳಿಸಿತು.

ನುರಿತ ನೃತ್ಯ ಕಲಾವಿದರು ಕನಕದಾಸರ ಜೀವನದ ಪ್ರಮುಖ ಘಟ್ಟಗಳಾದ ಬಾಲ್ಯ, ಯುದ್ಧರಂಗದ ವೈರಾಗ್ಯ, ಉಡುಪಿಯ ಕನಕನ ಕಿಂಡಿಯ ಪವಾಡ ಹಾಗೂ ಅವರ ಕೀರ್ತನೆಗಳ ಸಾರವನ್ನು ಭರತನಾಟ್ಯ ಮತ್ತು ಸಮಕಾಲೀನ ನೃತ್ಯ ಶೈಲಿಗಳ ಮೂಲಕ ಮನೋಜ್ಞವಾಗಿ ವೇದಿಕೆಯ ಮೇಲೆ ತಂದರು.

ಕನಕದಾಸರ ಪ್ರಸಿದ್ಧ ಕೀರ್ತನೆಗಳಾದ ‘ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ’, ‘ಕುಲ ಕುಲವೆಂದು ಹೊಡೆದಾಡದಿರಿ’ ಮತ್ತು ‘ಯಾರಿಗೆ ವಧುವಾದೆ ರಾಘವೇಂದ್ರ’ ಹಾಡುಗಳಿಗೆ ಶಾಸ್ತ್ರೀಯ ಹಾಗೂ ಜಾನಪದ ಶೈಲಿಯ ಸಮ್ಮಿಶ್ರಣದಲ್ಲಿ ಅದ್ಭುತವಾಗಿ ಸಂಗೀತ ಸಂಯೋಜಿಸಲಾಗಿತ್ತು. ಹಿನ್ನೆಲೆ ಗಾಯನ ಮತ್ತು ವಾದ್ಯವೃಂದದ ಜುಗಲ್‌ಬಂದಿ ಕಾರ್ಯಕ್ರಮದ ಜೀವಾಳವಾಗಿತ್ತು.

ಜಾತಿ ಪದ್ಧತಿಯ ನಿರ್ಮೂಲನೆ ಮತ್ತು ಮಾನವೀಯತೆಯ ಮಹತ್ವವನ್ನು ಸಾರುವ ಕನಕದಾಸರ ಆಶಯಗಳು ಇಂದಿನ ಸಮಾಜಕ್ಕೂ ಎಷ್ಟು ಪ್ರಸ್ತುತ ಎಂಬುದನ್ನು ರೂಪಕದ ಸಂಭಾಷಣೆಗಳು ನೆನಪಿಸಿಕೊಟ್ಟವು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಹಾನಗರ ಪಾಲಿಕೆ ಮಹಾಪೌರ ಪಿ.ಗಾದೆಪ್ಪ ಮಾತನಾಡಿ, ಕನಕದಾಸರ ಸಾಹಿತ್ಯ ಕೇವಲ ಪೂಜಾಗೃಹಕ್ಕೆ ಸೀಮಿತವಾಗದೆ, ಇಂತಹ ದೃಶ್ಯ-ಕಾವ್ಯಗಳ ಮೂಲಕ ಜನಸಾಮಾನ್ಯರನ್ನು, ವಿಶೇಷವಾಗಿ ಯುವಪೀಳಿಗೆಯನ್ನು ತಲುಪುತ್ತಿರುವುದು ಶ್ಲಾಘನೀಯ ಎಂದು ಪ್ರಶಂಸಿಸಿದರು.

ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಪ್ರೇಕ್ಷಕರು ಕರತಾಡನದ ಮೂಲಕ ಕಲಾವಿದರ ಪ್ರತಿಭೆಯನ್ನು ಪ್ರೋತ್ಸಾಹಿಸಿದರು. ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದಿರುವ ಸ್ನೇಹ ಕಪ್ಪಣ್ಣ ಅವರ ನೃತ್ಯ ಸಂಯೋಜನೆ, ಪ್ರಸಿದ್ಧ ಸಂಗೀತ ತಜ್ಞ ಡಾ.ಪ್ರವೀಣ್ ಡಿ.ರಾವ್ ಸಂಗೀತ ಸಂಯೋಜನೆ ಒಳಗೊಂಡಿತ್ತು.

ಕಾ.ತ.ಚಿಕ್ಕಣ್ಣ ಅವರ ಪರಿಕಲ್ಪನೆ ಹಾಗೂ ಸಾಹಿತ್ಯವಿತ್ತು. ಶ್ರೀನಿವಾಸ ಜಿ. ಕಪ್ಪಣ್ಣ ಸಮನ್ವಯ, ತಾಂತ್ರಿಕ ನಿರ್ದೇಶನದ ಮೂಲಕ ‘ಭ್ರಮರಿ ಡ್ಯಾನ್ಸ್ ರೆಪರ್ಟರಿ'''''''' ಕಲಾವಿದರು ಈ ನೃತ್ಯ ರೂಪಕವನ್ನು ಪ್ರಸ್ತುತಪಡಿಸಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಸಂಚಾಲಕ ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ಡಿ.ಕಗ್ಗಲ್, ಸಂತಕವಿ ಕನಕದಾಸ ಮತ್ತು ತತ್ವ ಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ, ಹಿರಿಯ ರಂಗಸಂಘಟಕರಾದ ಶ್ರೀನಿವಾಸ ಜಿ. ಕಪ್ಪಣ್ಣ, ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಡಾ.ಪಿ.ಎಲ್. ಗಾದಿಲಿಂಗನಗೌಡ, ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸದಸ್ಯ ಡಾ.ದಸ್ತಗಿರಿಸಾಬ್ ಸೇರಿದಂತೆ ಬಳ್ಳಾರಿಯ ಕಲಾಭಿಮಾನಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರಿನ ‘ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಹಾಗೂ ಬಳ್ಳಾರಿಯ ‘ರಂಗಜಂಗಮ ಸಂಸ್ಥೆ ಡಿ. ಕಗ್ಗಲ್'''''''' ಅವರ ಸಹಯೋಗದಲ್ಲಿ ಸಂತಕವಿ ಕನಕದಾಸರ ಕುರಿತ ವಿಶೇಷ ಸಂಗೀತ-ನೃತ್ಯ ರೂಪಕ ಕಾರ್ಯಕ್ರಮ ಆಯೋಜಿಸಲಾಗಿತ್ತು.