ಅಂಬೇಡ್ಕರ್ ವೃತ್ತದ ಬಳಿ ನ್ಯಾಯಕ್ಕಾಗಿ ಅನಿರ್ದಿಷ್ಟಾವಧಿ ಮೌನ ಸತ್ಯಾಗ್ರಹ
ಕನ್ನಡಪ್ರಭ ವಾರ್ತೆ ಗುಡಿಬಂಡೆತಾಲೂಕಿನ ಸೋಮೇಶ್ವರ ಗ್ರಾಮದ ಸರ್ವೇ ಸಂಖ್ಯೆ 31ರಲ್ಲಿ ಸುಮಾರು 54 ಎಕರೆ ಗೋಮಾಳ ಭೂಮಿ ಹಾಗೂ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಜಮೀನನ್ನು ಅತಿಕ್ರಮಿಸಿ ಸೋಲಾರ್ ಪ್ಲಾಂಟ್ ನಿರ್ಮಿಸಲಾಗಿದೆ ಎಂದು ಆರೋಪಿಸಿರುವ ನೊಂದ ರೈತರು, ತಮ್ಮಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಅನಿರ್ದಿಷ್ಟಾವಧಿ ಮೌನ ಸತ್ಯಾಗ್ರಹ ಆರಂಭಿಸಿದ್ದಾರೆ.
ಈ ವೇಳೆ ಪ್ರತಿಭಟನಾನಿರತರಾದ ವೆಂಕಟೇಶ್ ಮಾತನಾಡಿ, ಸೋಮೇಶ್ವರ ಗ್ರಾಮದ ಸರ್ವೇ ಸಂಖ್ಯೆ 31ರಲ್ಲಿ ಗೋಮಾಳ ಭೂಮಿ ಹಾಗೂ ಪರಿಶಿಷ್ಟರ ಜಮೀನನ್ನು ಅತಿಕ್ರಮಿಸಿ ಸೋಲಾರ್ ಪ್ಲಾಂಟ್ ನಿರ್ಮಿಸಲಾಗಿದೆ. ಇದರಿಂದ ಹಲವು ರೈತರಿಗೆ ಅನ್ಯಾಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಆದ್ದರಿಂದ ನಮಗೆ ನ್ಯಾಯ ಸಿಗುವವರೆಗೆ ಅನಿರ್ದಿಷ್ಟಾವಧಿ ಮೌನ ಸತ್ಯಾಗ್ರಹವನ್ನು ಮುಂದುವರಿಸುತ್ತೇವೆ. ಸರ್ಕಾರ ಹಾಗೂ ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.ಇನ್ನೂ ಈಗಾಗಲೇ ಸಾಕಷ್ಟು ಬಾರಿ ನಾವು ಸಂಬಂಧಪಟ್ಟ ಇಲಾಖೆಗಳಿಗೆ ದೂರು ಸಹ ನೀಡಿದ್ದೇವೆ. ಸುಮಾರು ವರ್ಷಗಳಿಂದ ದೂರು ನೀಡುತ್ತಾ ಬಂದರೂ ಸಮಸ್ಯೆ ಬಗೆಹರಿಸುತ್ತಿಲ್ಲ. ಈ ಸಂಬಂಧ ಪ್ರತಿಭಟನೆ ಮಾಡೋಕೂ ನಮಗೆ ಸ್ಥಳೀಯ ಆಡಳಿತ ಅವಕಾಶ ನೀಡುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ನಾವು ಈ ಸತ್ಯಾಗ್ರಹ ಕೈಗೆತ್ತಿಕೊಂಡಿದ್ದೇವೆ. ನಮಗೆ ನ್ಯಾಯ ಸಿಗುವ ತನಕ ನಾವು ಈ ಸತ್ಯಾಗ್ರಹವನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಆಕ್ರೋಶ ಹೊರಹಾಕಿದರು.
ಇದೇ ಸಮಯದಲ್ಲಿ ನೊಂದ ರೈತರು ಮಾತನಾಡಿ, ಕೆಲವು ವರ್ಷಗಳ ಹಿಂದೆ ನಮ್ಮ ಬಳಿ ಜಮೀನು ಖರೀದಿಸಿ, ನಿಮ್ಮ ಮನೆಯಲ್ಲಿ ಯಾರಿಗಾದರೂ ಸೋಲಾರ್ ಪ್ಲಾಂಟ್‌ನಲ್ಲಿ ಕೆಲಸ ಕೊಡುತ್ತೇವೆ, ಜಮೀನು ಬದಲಿಗೆ ಮತ್ತೊಂದು ಕಡೆ ಜಮೀನು ಖರೀದಿಸಿ ಕೊಡುತ್ತೇವೆ ಎಂದು ಹೇಳಿ ನಮಗೆ ಮೋಸ ಮಾಡಿದ್ದಾರೆ. ಇದೀಗ ನ್ಯಾಯ ಕೇಳಲು ಹೋದರೇ ನಮ್ಮ ಮೇಲೆ ದೌರ್ಜನ್ಯ ಮಾಡುತ್ತಾರೆ. ನಮಗೆ ನ್ಯಾಯ ಸಿಗದೇ ಪರದಾಡುವಂತಾಗಿದೆ. ನಮಗೆ ಕೂಡಲೇ ನ್ಯಾಯ ಒದಗಿಸಿಕೊಡಬೇಕೆಂದು ನೋವು ಹಂಚಿಕೊಂಡರು.
08ಜಿಯುಡಿ2: ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಅನಿರ್ದಿಷ್ಟಾವಧಿ ಮೌನ ಸತ್ಯಾಗ್ರಹ ಆರಂಭಿಸಿರುವುದು.