ಕನ್ನಡಪ್ರಭ ವಾರ್ತೆ ನಾಗಮಂಗಲ
ಸಾರ್ವಜನಿಕರಿಂದ ಯಾವುದೇ ದೂರುಗಳು ಬಾರದಂತೆ ಎಲ್ಲ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ಸಣ್ಣ ಪುಟ್ಟ ತಪ್ಪುಗಳನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಕಾನೂನು ಕ್ರಮ ಅನಿವಾರ್ಯ ಎಂದು ಲೋಕಾಯುಕ್ತ ಎಸ್ಪಿ ಸುರೇಶ್‌ಬಾಬು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಪಟ್ಟಣದ ತಾಲೂಕು ಆಡಳಿತಸೌಧದ ನ್ಯಾಯಾಲಯದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಾರ್ವಜನಿಕರ ಅಹವಾಲು ದೂರು ಸ್ವೀಕಾರ ಮತ್ತು ಕುಂದುಕೊರತೆ ಸಭೆ ನಂತರ ಮಾತನಾಡಿದ ಅವರು, ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೂ ಸಹ ಕೆಲ ಅಧಿಕಾರಿಗಳಿಂದ ಸಣ್ಣ ಪುಟ್ಟ ತಪ್ಪುಗಳು ನಡೆಯುತ್ತದೆ. ಅವುಗಳನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಿದರು.
ತಾಲೂಕಿನ ಚಿಣ್ಯ ಗ್ರಾಮದ ಸ.ನಂ.49ರಲ್ಲಿ 34 ಗುಂಟೆ ಜಮೀನಿನ ಪೋಡಿ ದುರಸ್ತು ಮಾಡಲು ಎಡಿಎಲ್‌ಆರ್ ದೊಳ್ಳೇಗೌಡ ಸೇರಿದಂತೆ ಸರ್ವೇ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗೆ 15 ಸಾವಿರ ರು. ಲಂಚ ನೀಡಿದ್ದೇನೆ. ಆರು ತಿಂಗಳು ಕಳೆದರೂ ಪೋಡಿ ದುರಸ್ತು ಮಾಡಿಕೊಟ್ಟಿಲ್ಲ ಎಂದು ಗ್ರಾಮದ ಸಿ.ಎನ್.ನಾಗೇಂದ್ರ ಅವರು ಲೋಕಾಯುಕ್ತ ಎಸ್ಪಿ ಅವರಿಗೆ ದೂರು ಸಲ್ಲಿಸಿದರು.ಈ ವೇಳೆ ಗರಂ ಆದ ಲೋಕಾಯುಕ್ತ ಅಧಿಕಾರಿಗಳು ಅರ್ಜಿದಾರರ ಕೆಲಸ ಮಾಡಿಕೊಡಲು ಲಂಚ ಕೇಳುತ್ತೀರೆಂದರೆ ನಿಮಗೆ ನಾಚಿಕೆಯಾಗುವುದಿಲ್ಲವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಪಂಚದಲ್ಲಿ ಇಲ್ಲದ ಸಮಸ್ಯೆ ನಿಮ್ಮ ಮುಂದೆ ಬಂದಿದೆಯೇ. ಈ ವಿಚಾರದಲ್ಲಿ ಸಮಸ್ಯೆಗೆ ಸಿಕ್ಕಿ ಹಾಕಿಕೊಳ್ಳುತ್ತೀರಿ. ಕಾನೂನು ಬದ್ಧವಾಗಿದ್ದರೆ ಕೆಲಸ ಮಾಡಿಕೊಡಬೇಕು. ಯಾವುದೇ ಕೆಲಸ ಕಾರ್ಯಗಳಿಗೆ ಜನರಿಂದ ಲಂಚ ಪಡೆದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಡಿಎಲ್‌ಆರ್ ದೊಳ್ಳೇಗೌಡರನ್ನು ತರಾಟೆಗೆ ತೆಗೆದುಕೊಂಡು ಖಡಕ್ ಎಚ್ಚರಿಕೆ ನೀಡಿದರು.
38 ಅರ್ಜಿಗಳ ಸ್ವೀಕಾರ:
ಸಭೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ 28 ದೂರು ಅರ್ಜಿ ಸಲ್ಲಿಕೆಯಾದರೆ, ಪಂಚಾಯತ್ ರಾಜ್, ನಗರಾಭಿವೃದ್ಧಿ, ಶಿಕ್ಷಣ ಹಾಗೂ ಪೊಲೀಸ್ ಇಲಾಖೆಗೆ ಸಂಬಂಧಿಸಿದ ತಲಾ 2 ದೂರು ಅರ್ಜಿ, ಗಣಿ ಮತ್ತು ಭೂವಿಜ್ಞಾನ ಹಾಗೂ ಹೇಮಾವತಿ ಇಲಾಖೆಗೆ ಸಂಬಂಧಿಸಿದ ತಲಾ 1 ಅರ್ಜಿ ಸೇರಿ ಒಟ್ಟು 38 ದೂರು ಅರ್ಜಿಗಳು ಸಲ್ಲಿಕೆಯಾದವು. ಕೆಲವು ಸಮಸ್ಯೆಗಳನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಮೂಲಕ ಸ್ಥಳದಲ್ಲಿಯೇ ಪರಿಹರಿಸಲಾಯಿತು.ಈ ವೇಳೆ ಲೋಕಾಯುಕ್ತ ಡಿವೈಎಸ್ಪಿ ಎಚ್.ಟಿ.ಸುನೀಲ್‌ಕುಮಾರ್, ಇನ್ಸ್‌ಪೆಕ್ಟರ್‌ಗಳಾದ ಬಿ.ಟಿ.ಬ್ಯಾಟರಾಯಗೌಡ, ಎಂ.ರವಿಕುಮಾರ್, ತಹಸೀಲ್ದಾರ್ ಅಶೋಕ್, ಗ್ರೇಡ್-2 ತಹಸೀಲ್ದಾರ್ ಮಂಜುನಾಥ್, ತಾಪಂ ಇಒ ಸತೀಶ್, ಬಿಇಒ ಎಸ್.ಆರ್.ಲೋಕೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ನಾರಾಯಣ, ಅರಣ್ಯಾಧಿಕಾರಿ ಸಂಪತ್‌ಪಟೇಲ್, ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್, ಎಆರ್‌ಟಿಒ ಹೊನ್ನೇಗೌಡ, ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಮಹೇಶ್, ಪುರಸಭೆ ಮುಖ್ಯಾಧಿಕಾರಿ ವೀಣಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಾಲೂಕಿನ ಎಲ್ಲಾ ಗ್ರಾಪಂ ಗಳ ಪಿಡಿಒಗಳು ಇದ್ದರು.