ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ಪೂರಿಗಾಲಿ ಹನಿ ನೀರಾವರಿ ಯೋಜನೆ ಪೂರ್ಣಗೊಂಡು ಯೋಜನೆ ಯಶಸ್ವಿಗೆ ವಿಜ್ಞಾನಿಗಳು ಹಾಗೂ ಅಧಿಕಾರಿಗಳು ರೈತರಿಗೆ ಅರಿವು ಮೂಡಿಸುವ ಕಾರ್ಯ ಈಗಾಗಲೇ ನಡೆಯುತ್ತಿದೆ. ಸಾಮೂಹಿಕ ಕೃಷಿ ಪದ್ಧತಿ ಬಗ್ಗೆ ತಿಳಿವಳಿಕೆ ಇಲ್ಲದೇ ರೈತರನ್ನು ದಿಕ್ಕು ತಪ್ಪಿಸುವ ಹೇಳಿಕೆ ನೀಡುವವರ ಬಗ್ಗೆ ಏನು ಮಾತನಾಡುವುದಿಲ್ಲ ಎಂದು ಮಾಜಿ ಶಾಸಕರ ವಿರುದ್ಧ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕಿಡಿಕಾರಿದರು.ಪಟ್ಟಣದ ತಾಪಂನ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೂರಿಗಾಲಿ ಹನಿ ನೀರಾವರಿ ಯೋಜನೆಯಿಂದ ಹಮ್ಮಿಕೊಳ್ಳುವ ಸಾಮೂಹಿಕ ಕೃಷಿ ಪದ್ಧತಿ ಬಗ್ಗೆ ಅಧಿಕಾರಿಗಳು ವಿಜ್ಞಾನಿಗಳು ನನ್ನ ನೇತೃತ್ವದಲ್ಲಿ ಹಲವು ಗ್ರಾಮಗಳಲ್ಲಿ ಸಭೆ ನಡೆಸಿ ಸಂಪೂರ್ಣ ಮಾಹಿತಿ ನೀಡಲಾಗುತ್ತಿದೆ. ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡು ರೈತರಿಗೆ ಅನುಕೂಲವಾಗಬೇಕೆಂಬುವುದು ನನ್ನ ಉದ್ದೇಶವಾಗಿದೆ ಎಂದರು.
ನನ್ನ ಅಧಿಕಾರದ ಅವಧಿಯಲ್ಲಿ ಸಾವಿರಾರು ಕೋಟಿ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗಿದೆ. ಅರ್ಥಕ್ಕೆ ನಿಂತು ಹೋಗಿದ್ದ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಶಿಕ್ಷಣ, ಆರೋಗ್ಯಕ್ಕೆ ವಿಶೇಷ ಒತ್ತು ನೀಡಲಾಗಿದೆ. ಅಭಿವೃದ್ಧಿ ಏನು ಎನ್ನುವುದನ್ನು ಮೊದಲು ತಿಳಿದುಕೊಳ್ಳಲಿ ಎಂದರು.ಸಿದ್ದರಾಮಯ್ಯ ಅವರು ಮೊದಲು ಮುಖ್ಯಮಂತ್ರಿಯಾಗಿದ್ದಾಗ ಯೋಜನೆಗಳನ್ನು ತಯಾರು ಮಾಡಲು ಸಾಮಾಜಿಕ ಆರ್ಥಿಕ, ಶೈಕ್ಷಣಿಕೆ ಸಮೀಕ್ಷೆ ನಡೆಸಲು ಹಿಂದುಳಿದ ವರ್ಗಗಳ ಇಲಾಖೆಯಿಂದ ಜಾತಿ ಗಣತಿ ಆರಂಭಿಸಿ ಆಯೋಗದ ಅಧ್ಯಕ್ಷರನ್ನಾಗಿ ಕಾಂತರಾಜು ಅವರನ್ನು ಆಯ್ಕೆ ಮಾಡಲಾಗಿತ್ತು. ನಂತರ ಬಂದ ಬಿಜೆಪಿ ಸರ್ಕಾರ ಆಯೋಗದ ಹೊಸ ಅಧ್ಯಕ್ಷರನ್ನು ನೇಮಕ ಮಾಡಿದೆ. ಆಯೋಗವೇ ಸರಿಯಲ್ಲ ಎಂದಾದರೇ ಬಿಜೆಪಿ ಸರ್ಕಾರ ರದ್ದು ಪಡಿಸಬಹುದಾಗಿತ್ತು. ಆಯೋಗದ ವರದಿ ಸರಿ ತಪ್ಪುಗಳ ಬಗ್ಗೆ ವಿಮರ್ಶೆ ಹಂತದಲ್ಲಿರುವಾಗಲೇ ಆಕ್ಷೇಪ ಎತ್ತುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ರಾಷ್ಟ್ರದಲ್ಲಿ ಜನರ ಸ್ಥಿತಿಗತಿಗಳನ್ನು ಸಮತೋಲನ ಮಾಡುವಂತಹ ಸಾಮಾಜಿಕ ನ್ಯಾಯ ಮತ್ತು ಅರ್ಥಿಕ ನ್ಯಾಯದ ಪರಿಕಲ್ಪನೆಯನ್ನು ಸಂವಿಧಾನದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಹೇಳಿದ್ದಾರೆ. ಈ ದಿಸೆಯಲ್ಲಿ ಜಾತಿಗಣತಿ ನಡೆಸಲಾಗಿದೆ ಎಂದು ವಿವರಿಸಿದರು.