ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಫಹಲ್ಗಾಫ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿ ಖಂಡಿಸಿ ಎಬಿವಿಪಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಮಾಳಿ ಮಾತನಾಡಿ, ಉಗ್ರರ ಹೇಡಿತನದ ಗುಂಡಿನ ದಾಳಿಯನ್ನು ಎಬಿವಿಪಿ ತೀವ್ರವಾಗಿ ಖಂಡಿಸುತ್ತದೆ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂಬುದು ಸಾರ್ವಕಾಲಿಕ ಸತ್ಯ. ಅಲ್ಲಿನ ಪ್ರತ್ಯೇಕವಾದದ ಮನಸ್ಥಿತಿಯನ್ನು ಬದಲಾಯಿಸಲು ಹಾಗೂ ಜನ-ಜೀವನ ಸ್ಥಿತಿಗತಿಗಳನ್ನು ಸ್ಥಿರಗೊಳಿಸಿ ಶಾಂತಿಯುತ ಕಾಶ್ಮೀರವೆಂಬುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಸರ್ಕಾರ ಉಗ್ರರನ್ನು ಸಂಪೂರ್ಣವಾಗಿ ಮಟ್ಟ ಹಾಕಬೇಕು ಎಂದು ಆಗ್ರಹಿಸಿದರು.ಮಹಾನಗರ ಸಹ ಕಾರ್ಯದರ್ಶಿ ಅಭಿಷೇಕ ಬಡಿಗೇರ ಮಾತನಾಡಿ, ಜಮ್ಮು-ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ಹಲವು ಬಿಗಿ ಭದ್ರತೆ ಒದಗಿಸಿದರೂ ಸಹ ಭಯೋತ್ಪಾದಕರ ನುಸುಳುಕೋರರ ಹಾವಳಿ ತಡೆಗಟ್ಟಲು ಸಾಧ್ಯವಾಗಿಲ್ಲ. ಇತ್ತೀಚೆಗೆ ವಲಸೆ ಕಾರ್ಮಿಕರ ಮೇಲಿನ ದಾಳಿಗಳು ಮಾರುಕಟ್ಟೆಗಳಲ್ಲಿ ದಾಳಿಗಳು ಕಳವಳಕಾರಿ ಸಂಗತಿ. ಆದ್ದರಿಂದ ಕೇಂದ್ರ ಸರ್ಕಾರ ತಕ್ಕ ಉತ್ತರವನ್ನು ನೀಡಬೇಕೆಂದು ಆಗ್ರಹಿಸಿದರು.ರಾಜ್ಯ ಕಾರ್ಯ ಸಮಿತಿ ಸದಸ್ಯೆ ಸುರೇಖಾ ಕುಲಕರ್ಣಿ ಮಾತನಾಡಿ, ಜಮ್ಮು-ಕಾಶ್ಮೀರದಲ್ಲಿ ಈಗಾಗಲೇ ೩೭೧ ರದ್ದಾಗಿ ಶಾಂತಿ ಸಹಬಾಳ್ವೆ ಇದ್ದರೂ ಸಹ ಮೇಲಿಂದ ಮೇಲೆ ಇಂತಹ ದುಷ್ಟ ಕೃತ್ಯ ಎಸಗುತ್ತಿರುವದು ಖಂಡನೀಯ ಎಂದರು.ಈ ಸಂದರ್ಭದಲ್ಲಿ ಸಂದೀಪ ಅರಳಗುಂಡಿ, ಚೇತನ ಕೋರವಾರ, ಪವಿತ್ರಾ, ಸಹನಾ, ಐಶ್ವರ್ಯ, ನೇಸರ ಭಜಂತ್ರಿ, ಸಂಜೀವ, ಕಾರ್ತಿಕ, ಪೂಜನ್ನ, ಸಂದೀಪ, ಚೇತನ ಮುಂತಾದವರು ಇದ್ದರು.