ಇಂದು ಸೋಮವಾರಪೇಟೆ ತಾಲೂಕು ಬಂದ್‌ಗೆ ರೈತ ಹೋರಾಟ ಸಮಿತಿ ಕರೆ

| Published : Aug 12 2025, 12:30 AM IST

ಇಂದು ಸೋಮವಾರಪೇಟೆ ತಾಲೂಕು ಬಂದ್‌ಗೆ ರೈತ ಹೋರಾಟ ಸಮಿತಿ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳವಾರ ಸೋಮವಾರಪೇಟೆ ತಾಲೂಕು ಬಂದ್‌ಗೆ ರೈತ ಹೋರಾಟ ಸಮಿತಿ ಕರೆ ನೀಡಿದೆ.

ಖಾಸಗಿ ಬಸ್, ಆಟೋ ಸಂಚಾರ ಸ್ಥಗಿತ । ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ । ಸಂಘಗಳ ಬೆಂಬಲಕನ್ನಡಪ್ರಭ ವಾರ್ತೆ ಸೋಮವಾರಪೇಟೆರೈತರ ಕೃಷಿ ಭೂಮಿಯನ್ನು ಸಿ ಮತ್ತು ಡಿ ಹೆಸರಿನಲ್ಲಿ ಅರಣ್ಯ ಇಲಾಖೆಗೆ ಸೇರ್ಪಡೆಗೊಳಿಸುವುದು, ಸರ್ಕಾರದ ಸೆಕ್ಷನ್ 4 ಸರ್ವೆಗೆ ಮುಂದಾಗಿರುವುದನ್ನು ಖಂಡಿಸಿ ಮಂಗಳವಾರ ಸೋಮವಾರಪೇಟೆ ತಾಲೂಕು ಬಂದ್‌ಗೆ ರೈತ ಹೋರಾಟ ಸಮಿತಿ ಕರೆ ನೀಡಿದೆ.

ಈ ಹಿಂದೆ ಸೋಮವಾರಪೇಟೆ ಹಾಗೂ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಬೃಹತ್ ಹೋರಾಟ ನಡೆಸಿದ ನಂತರ, ಸಮಿತಿ ಮುಖ್ಯಮಂತ್ರಿ ಸೇರಿದಂತೆ ಸಚಿವರು ಹಾಗೂ ಕಂದಾಯ ಮತ್ತು ಅರಣ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆಯ ಗಂಭೀರತೆ ವಿವರಿಸಿತ್ತು. ಆದರೆ, ಇಂದಿಗೂ ಸರ್ಕಾರದಿಂದ ಯಾವುದೇ ಪೂರಕ ಸ್ಪಂದನೆ ದೊರಕದಿರುವುದರಿಂದ ರೈತರು ನಿರ್ಣಾಯಕ ಹಂತದ ಹೋರಾಟಕ್ಕೆ ಮುಂದಾಗಿದ್ದು ಸೋಮವಾರಪೇಟೆ ತಾಲೂಕು ಬಂದ್‌ಗೆ ಕರೆಕೊಟ್ಟಿದೆ.ರೈತ ಹೋರಾಟ ಸಮಿತಿಯು ಹೋರಾಟಕ್ಕೆ ಕರೆ ನೀಡಿರುವುದರಿಂದ ಬಹುತೇಕ ಗ್ರಾಮ ಸಮಿತಿಗಳು, ಮುನ್ನೆಲೆಯಲ್ಲಿರುವ ಸಂಘ ಸಂಸ್ಥೆಗಳು ಬಂದ್‌ಗೆ ಬೆಂಬಲ ಘೋಷಿಸಿವೆ. ಸರ್ಕಾರಿ ಬಸ್‌ಗಳು, ಖಾಸಗಿ ಬಸ್‌ಗಳ ಸಂಚಾರ ಸ್ಥಗಿತಗೊಳ್ಳುವ ಸಂಭವವಿದ್ದು, ಈಗಾಗಲೇ ರೈತ ಹೋರಾಟ ಸಮಿತಿಯ ಪ್ರಮುಖರು ಖಾಸಗಿ ಬಸ್ ಮಾಲೀಕರ ಸಂಘಕ್ಕೂ ಮನವಿ ಮಾಡಿದ್ದಾರೆ. ಸೋಮವಾರಪೇಟೆ ಪಟ್ಟಣದೊಂದಿಗೆ ಮಾದಾಪುರ, ಕೊಡ್ಲಿಪೇಟೆ, ಶನಿವಾರಸಂತೆ, ಶಾಂತಳ್ಳಿ, ಆಲೂರು ಸಿದ್ದಾಪುರ ಭಾಗದಲ್ಲೂ ಸಂಪೂರ್ಣ ಬಂದ್ ಆಗಲಿದೆ. ವರ್ತಕರ ಸಂಘವು ಈಗಾಗಲೇ ಬೆಂಬಲ ಘೋಷಿಸಿದ್ದು, ರೈತರ ಹೋರಾಟಕ್ಕೆ ಎಲ್ಲಾ ಗ್ರಾಮ, ಪಟ್ಟಣದ ಮಂದಿಯೂ ಕೈಜೋಡಿಸುತ್ತಿದ್ದಾರೆ ಎಂದು ರೈತ ಹೋರಾಟ ಸಮಿತಿ ತಿಳಿಸಿದ್ದಾರೆ.ಬಂದ್‌ಗೆ ವಿವಿಧ ಸಂಘ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ. ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಇತ್ಯರ್ಥಕ್ಕೆ ಒತ್ತಾಯಿಸಿ ರೈತ ಹೋರಾಟ ಸಮಿತಿ ಕರೆ ನೀಡಿರುವ ಬಂದ್‌ಗೆ ಸೋಮವಾರಪೇಟೆ ವರ್ತಕರ ಸಂಘ, ಸೋಮವಾರಪೇಟೆ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘ, ಕೂತಿ,ಶಾಂತಳ್ಳಿ, ಹರಗ,ಚೌಡ್ಲು, ಯಡೂರು ಗ್ರಾಮಾಭಿವೃದ್ಧಿ ಸಮಿತಿ ಬೆಂಬಲ ಘೋಷಿಸಿದೆ. ಬಂದ್‌ಗೆ ಕರ್ನಾಟಕ ರಕ್ಷಣಾ ವೇದಿಕೆ ಸಂಪೂರ್ಣ ಸಹಕಾರ ನೀಡಲಿದೆ.ಜೈಜವಾನ್ ಮಾಜಿ ಸೈನಿಕರ ಸಂಘ ಬೆಂಬಲ ಸೂಚಿಸಿದೆ. ಕೊಡಗು ಜಿಲ್ಲಾ ಡೈವಿಂಗ್ ಸ್ಕೂಲ್ ಅಸೋಸಿಯೇಷನ್ ನ ಸೋಮವಾರಪೇಟೆ ಘಟಕ ಬೆಂಬಲ ಸೂಚಿಸಿದ್ದು ಸೋಮವಾರಪೇಟೆ ತಾಲೂಕಿನ ಎಲ್ಲಾ ಡ್ರೈವಿಂಗ್ ಸ್ಕೂಲ್‌ಗಳು ಅಂದು ವಹಿವಾಟು ನಡೆಸದೆ ಬಂದ್‌ ನಲ್ಲಿ ಪಾಲ್ಗೊಳ್ಳಲಿವೆ ಸೋಮವಾರಪೇಟೆ ಸವಿತಾ ಸಮಾಜ ಬೆಂಬಲ ನೀಡಿದ್ದು, ರೈತರ ಹೋರಾಟದಲ್ಲಿ ಸದಸ್ಯರು ಭಾಗಿಯಾಗಲಿದ್ದಾರೆ. ಆಟೋ ಚಾಲಕರು ಮತ್ತು ಮಾಲೀಕರ ಸಂಘ ಸಹ ಬೆಂಬಲ ಘೋಷಿಸಿದೆ. ಆರೋಗ್ಯ ಸಂಬಂಧಿತ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಸಾರ್ವಜನಿಕರ ಸೇವೆಗೆ ಆಟೋಗಳು ಸಂಚರಿಸಲಿದ್ದು, ಉಳಿದಂತೆ ಆಟೋಗಳು ಸಂಚಾರ ಸ್ಥಗಿತಗೊಳಿಸಲಿವೆ.ಸೋಮವಾರಪೇಟೆ ಸಂಪೂರ್ಣ ಬಂದ್ ಆಗಲಿದ್ದು, ಮೆಡಿಕಲ್ ಅಂಗಡಿ , ಆಸ್ಪತ್ರೆಗಳು, ಹಾಲಿನ ಡೈರಿ, ತಾಲೂಕು ಕಚೇರಿ, ಸರ್ಕಾರಿ ಕಚೇರಿಗಳು, ಕೆಎಸ್ಆರ್ ಟಿಸಿ ಬಸ್ ಎಂದಿನಂತೆ ಕಾರ್ಯ ನಿರ್ವಹಿಸಲಿದೆ. ಖಾಸಗಿ ಬಸ್, ಆಟೋ ರಿಕ್ಷಾ, ಸಂಚಾರ ಸ್ಥಗಿತಗೊಳಿಸಲಿದೆ. ನಗರದ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು ಸಂಪೂರ್ಣ ಬಂದ್ ಆಗಲಿದೆ.