ಕೆರೆಗಳಿಗೆ ನೀರು ತುಂಬಿಸಲು ಆಗ್ರಹಿಸಿ ಉಪವಾಸ ಸತ್ಯಾಗ್ರಹ

| Published : Jan 09 2025, 12:46 AM IST

ಸಾರಾಂಶ

ತಾಲೂಕಿನ ವಿವಿಧ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಇಲ್ಲಿನ ತಹಸೀಲ್ದಾರ ಕಚೇರಿ ಬಳಿ ಬುಧವಾರ ಉಪವಾಸ ಸತ್ಯಾಗ್ರಹ ನಡೆಸಿದರು.

ಕರ್ನಾಟಕ ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರ ಒತ್ತಾಯ

ಕನ್ನಡಪ್ರಭ ವಾರ್ತೆ ಕನಕಗಿರಿ

ತಾಲೂಕಿನ ವಿವಿಧ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಇಲ್ಲಿನ ತಹಸೀಲ್ದಾರ ಕಚೇರಿ ಬಳಿ ಬುಧವಾರ ಉಪವಾಸ ಸತ್ಯಾಗ್ರಹ ನಡೆಸಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಗದ್ದಿ ಮಾತನಾಡಿ, ಕನಕಗಿರಿ ತಾಲೂಕಿನ ಸಿರಿವಾರ, ಕರಡೋಣ, ಲಾಯದುಣಸಿ, ದೇವಲಾಪೂರ, ಇಂಗಳದಾಳ, ಬಸರಿಹಾಳ, ನಾಗಲಾಪೂರ ಸೇರಿದಂತೆ ನಾನಾ ಕೆರಗಳು ಬರಿದಾಗಿವೆ. ಈ ವರ್ಷ ಕೆರೆ ತುಂಬುವಷ್ಟು ಮಳೆಯಾಗದಿದ್ದರೂ ತುಂಗಭದ್ರಾ ನದಿಯಿಂದ ಯಥೇಚ್ಛವಾಗಿ ನದಿಯ ಮೂಲಕ ನೀರು ಪೋಲಾಗಿದೆ. ಇದೇ ನೀರನ್ನು ಲಕ್ಷ್ಮೀದೇವಿ ಹಾಗೂ ಕಾಟಾಪೂ ಖಾಲ್ಸಾ ಕೆರೆಗಳ ಮೂಲಕ ತಾಲೂಕಿನ ಹಲವು ಕೆರೆಗಳಿಗೆ ನೀರು ಸರಬರಾಜು ಮಾಡಬಹುದಾಗಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷತನದಿಂದಾಗಿ ನೀರು ಸರಬರಾಜು ಆಗಿಲ್ಲ. ಬರುವ ಬೇಸಿಗೆಯಲ್ಲಿ ಹಲವು ಗ್ರಾಮಗಳಲ್ಲಿ, ಜನ ಜಾನುವಾರುಗಳಿಗೆ ನೀರಿನ ಸಮಸ್ಯೆಯಾಗಲಿದೆ. ಕೆರೆಗಳಿಗೆ ನೀರು ತುಂಬಿಸುವುದಕ್ಕಾಗಿ ರೈತ ಸಂಘಟನೆಯಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು.

ನಂತರ ತಹಸೀಲ್ದಾರ ವಿಶ್ವನಾಥ ಮುರುಡಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಜ.10ರಂದು ಸಂಬಂಧಿಸಿದ ಅಧಿಕಾರಿಗಳ ಜತೆ ಸಭೆ ನಡೆಸಿ ಕೆರೆಗಳಿಗೆ ನೀರು ಸರಬರಾಜುಗೊಳಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದರಿಂದ ರೈತರು ಪ್ರತಿಭಟನೆ ಹಿಂಪಡೆದರು.

ಸಣ್ಣ ನೀರಾವರಿ ಇಲಾಖೆಯ ಸೆಲ್ಯೂ ಕುಮಾರ, ರೈತ ಮುಖಂಡರಾದ ಭೀಮನಗೌಡ ಜಿರಾಳ, ಶಿವಕುಮಾರ ಬಡಿಗೇರ, ನಿಂಗಪ್ಪ ಹುಡೇಜಾಲಿ, ಬಾಲಪ್ಪ ನಾಡಿಗೇರ, ಶಿವಣ್ಣ ಅಂಗಡಿ, ಸೋಮನಾಥ ನಾಯಕ, ಸಣ್ಣ ಶೇಖರಪ್ಪ ಗದ್ದಿ, ರಾಮಲಿಂಗಪ್ಪ ಗದ್ದಿ, ಸಣ್ಣ ಯಂಕಪ್ಪ ಗೊಲ್ಲರ, ಸಿದ್ದು ಕಾರಪುಡಿ, ಮಂಜುನಾಥ ಮುಸಲಾಪುರ ಸೇರಿದಂತೆ ಇತರರಿದ್ದರು.