ಸಾರಾಂಶ
ಐತಿಹಾಸಿಕ ಹಿನ್ನೆಲೆಯ ಗುಡಿಬಂಡೆ ಪಟ್ಟಣದಿಂದ ಗೌರಿಬಿದನೂರು ಹಾಗೂ ಚಿಕ್ಕಬಳ್ಳಾಪುರ ತಾಲೂಕಿನ ಗಡಿ ಕೇವಲ ಒಂದೆರೆಡು ಕಿಮೀ ಇದೆ. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಇದೀಗ ಮೂರು ತಾಲೂಕು ಕೇಂದ್ರಗಳಿವೆ. ಇದರಿಂದಾಗಿ ಅಭಿವೃದ್ಧಿಯಾಗುವುದು ಸಹ ತುಂಬಾ ಕಷ್ಟವಾಗಿದೆ. ದೊಡ್ಡ ಕ್ಷೇತ್ರವಾದರೂ ಚಿಕ್ಕ ಕ್ಷೇತ್ರವಾದರೂ ಅನುದಾನ ಒಂದೇ ರೀತಿ ಕೊಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ತಾಲೂಕು ಅಭಿವೃದ್ಧಿ ಕುಂಠಿತವಾಗುತ್ತಿದೆ.
ಕನ್ನಡಪ್ರಭ ವಾರ್ತೆ ಗುಡಿಬಂಡೆ
ಗುಡಿಬಂಡೆಯನ್ನು ಪ್ರತ್ಯೇಕ ವಿಧಾನಸಭಾ ಕ್ಷೇತ್ರವನ್ನಾಗಿ ಘೋಷಣೆ ಮಾಡಲು ಹಲವು ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಶೀಘ್ರ ಗುಡಿಬಂಡೆಯನ್ನು ಪ್ರತ್ಯೇಕ ವಿಧಾನಸಭಾ ಕ್ಷೇತ್ರವನ್ನಾಗಿ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಕಂದಾಯ ಸಚಿವ ಕೃಷ್ಣಬೈರೇಗೌಡರಿಗೆ ತಾಲೂಕು ಕೆಡಿಪಿ ಸದಸ್ಯರು, ಗುಡಿಬಂಡೆ ತಾಲೂಕು ಪ್ರತ್ಯೇಕ ವಿಧಾನಸಭಾ ಕ್ಷೇತ್ರ, ಕರ್ನಾಟಕ ರಕ್ಷಣಾ ವೇದಿಕೆ, ಜೆಡಿಎಸ್ ಪಕ್ಷ ಹಾಗೂ ಕನ್ಯಕಾ ಪರಮೇಶ್ವರಿ ಸಂಘದ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.ಈ ವೇಳೆ ಮನವಿ ಮಾಡಿರುವ ಮುಖಂಡರು, ಐತಿಹಾಸಿಕ ಹಿನ್ನೆಲೆಯ ಗುಡಿಬಂಡೆ ಪಟ್ಟಣದಿಂದ ಗೌರಿಬಿದನೂರು ಹಾಗೂ ಚಿಕ್ಕಬಳ್ಳಾಪುರ ತಾಲೂಕಿನ ಗಡಿ ಕೇವಲ ಒಂದೆರೆಡು ಕಿಮೀ ಇದೆ. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಇದೀಗ ಮೂರು ತಾಲೂಕು ಕೇಂದ್ರಗಳಿವೆ. ಇದರಿಂದಾಗಿ ಅಭಿವೃದ್ಧಿಯಾಗುವುದು ಸಹ ತುಂಬಾ ಕಷ್ಟವಾಗಿದೆ. ದೊಡ್ಡ ಕ್ಷೇತ್ರವಾದರೂ ಚಿಕ್ಕ ಕ್ಷೇತ್ರವಾದರೂ ಅನುದಾನ ಒಂದೇ ರೀತಿ ಕೊಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ತಾಲೂಕು ಅಭಿವೃದ್ಧಿ ಕುಂಠಿತವಾಗುತ್ತಿದೆ.
ಗೌರಿಬಿದನೂರು ತಾಲೂಕಿನ ನೆಗರಗೆರೆ ಹೋಬಳಿ ಮತ್ತು ಚಿಕ್ಕ ಬಳ್ಳಾಪುರ ತಾಲೂಕಿನ ಮಂಡಿಕಲ್ಲು ಗ್ರಾಪಂ ಮತ್ತು ಕಮ್ಮಗುಟ್ಟಹಳ್ಳಿ ಗ್ರಾಪಂ ಹೋಬಳಿ ಗಳನ್ನು ಭೌಗೋಳಿಕವಾಗಿ ಗುಡಿಬಂಡೆ ತಾಲೂಕಿಗೆ ಸೇರಿಸಿದರೆ ಈ ಪ್ರದೇಶದ ಜನರಿಗೆ ತುಂಬಾ ಅನುಕೂಲವಾಗುತ್ತದೆ. ಗುಡಿಬಂಡೆ ಚಿಕ್ಕ ತಾಲೂಕು ಆಗಿರುವುದರಿಂದ ದೊಡ್ಡ ದೊಡ್ಡ ಯೋಜನೆಗಳು ತಾಲೂಕಿನಲ್ಲಿ ಸ್ಥಾಪನೆ ಯಾಗದೆ ಇರುವುದರಿಂದ ಆರ್ಥಿಕವಾಗಿ ಹಿಂದುಳಿದಿದೆ. ಆದ್ದರಿಂದ ಗುಡಿಬಂಡೆ ತಾಲೂಕಿಗೆ ಮೇಲ್ಕಂಡ ಪ್ರದೇಶಗಳನ್ನು ಸೇರಿಸಿದರೆ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಕಂದಾಯ ಸಚಿವರಿಗೆ ಮನವಿ ಮಾಡಿದರು.ಮನವಿ ಸ್ವೀಕರಿಸಿದ ಕೃಷ್ಣಬೈರೇಗೌಡ ಎರಡೂ ತಾಲೂಕಿನವರು ಒಪ್ಪಿದರೆ ಭೌಗೋಳಿಕವಾಗಿ ಪಕ್ಕದ ತಾಲೂಕುಗಳ ಕೆಲವೊಂದು ಪ್ರದೇಶಗಳನ್ನು ಸೇರಿಸಲು ನನಗೇನು ಅಭ್ಯಂತರವಿಲ್ಲ. ಈ ಕುರಿತು ಸೂಕ್ತ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸುತ್ತೇನೆ ಎಂದು ಭರವಸೆ ನೀಡಿದರು.