ಸಾರಾಂಶ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಅಥಣಿರಾಜ್ಯದ ಮೊದಲ ಪುರಸಭೆ ಎಂಬ ಖ್ಯಾತಿಗೆ ಪಾತ್ರವಾದ ಅಥಣಿ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಸೆ.2ರಂದು ಚುನಾವಣೆ ನಿಗದಿ ಆಗಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಒಬಿಸಿ ಮಹಿಳೆಗೆ ಮೀಸಲಾಗಿದೆ.
ಪುರಸಭೆಯ ಒಟ್ಟು 23 ಸ್ಥಾನಗಳ ಪೈಕಿ ಕಾಂಗ್ರೆಸ್ 15, ಬಿಜೆಪಿ 9, ಪಕ್ಷೇತರರು 3 ಜನ ಆಯ್ಕೆಯಾಗಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಮುಖಂಡ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯ 9 ಹಾಗೂ ಮೂವರು ಪಕ್ಷೇತರ ಸದಸ್ಯರು ಸವದಿಯವರನ್ನು ಹಿಂಬಾಲಿಸಿ ಕಾಂಗ್ರೆಸ್ ಗೆ ವಲಸೆ ಬಂದರು.ವಿರೋಧ ಪಕ್ಷವಿಲ್ಲದ ಏಕೈಕ ಪುರಸಭೆ:
ಪುರಸಭೆಯ ಒಟ್ಟು 23 ಸ್ಥಾನಗಳ ಪೈಕಿ 23 ಸದಸ್ಯರು ಕಾಂಗ್ರೆಸ್ ಸದಸ್ಯರಾಗಿದ್ದು, ವಿರೋಧ ಪಕ್ಷವಿಲ್ಲದ ರಾಜ್ಯದ ಏಕೈಕ ಪುರಸಭೆ ಎಂಬ ಖ್ಯಾತಿಗೂ ಅಥಣಿ ಪುರಸಭೆ ಪಾತ್ರವಾಗಿದೆ.ಅಧಿಕಾರಕ್ಕೆ ಬಣಗಳ ಮಧ್ಯೆ ಪೈಪೋಟಿ: ಪುರಸಭೆಯಲ್ಲಿ ವಿರೋಧ ಪಕ್ಷದ ಓರ್ವ ಸದಸ್ಯ ಇಲ್ಲದಿದ್ದರೂ ಪಕ್ಷದೊಳಗೆ ಎರಡು ಬಣಗಳು ಸೃಷ್ಟಿಯಾಗಿದ್ದು, ಅಧಿಕಾರದ ಗದ್ದುಗೆ ಹಿಡಿಯಲು ತೀವ್ರ ಪೈಪೋಟಿ ಶುರುವಾಗಿದೆ. ಹೀಗಾಗಿ ಪುರಸಭೆ ಚುನಾವಣೆ ಗೋಜಲದ ಗೂಡಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಶಿವಲೀಲಾ ಬುಟಾಳೆ, ವಿದ್ಯಾ ಐಹೊಳೆ ಹಾಗೂ ಶಾಂತಾ ಲೋನಾರೆ ಹೆಸರು ಪ್ರಮುಖವಾಗಿ ಕೇಳಿಬರುತ್ತಿವೆ.
ರೆಸಾರ್ಟ್ ರಾಜಕಾರಣ ಆರಂಭ: ಪಕ್ಷದ ಎರಡು ಬಣಗಳ ಮಧ್ಯೆ ಪೈಪೋಟಿ ತೀವ್ರವಾಗಿರುವುದರಿಂದ ರೆಸಾರ್ಟ್ ರಾಜಕಾರಣ ಆರಂಭವಾಗಿದೆ. ಮೂಲ ಕಾಂಗ್ರೆಸ್ ನ ಕೆಲವು ಸದಸ್ಯರು ಈಗಾಗಲೇ ಸಚಿವ ಸತೀಶ ಜಾರಕಿಹೊಳಿ ಅವರನ್ನು ಭೇಟಿಯಾಗಿ ಒಂದು ಸುತ್ತಿನ ಮಾತುಕತೆ ನಡೆಸಿ ಹೈದ್ರಾಬಾದ್‌ಗೆ ಪ್ರಯಾಣ ಬೆಳೆಸಿ ರೆಸಾರ್ಟ್‌ನಲ್ಲಿ ಬೀಡುಬಿಟ್ಟಿದ್ದಾರೆ. ಇವರ ಮೊಬೈಲ್‌ಗಳು ಸ್ವಿಚ್ಡ್‌ಆಫ್ ಆಗಿವೆ. ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಇನ್ನು ಈ ಬಣದ ಕೆಲ ಸದಸ್ಯರು ಇಲ್ಲಿಯೇ ಉಳಿದುಕೊಂಡಿದ್ದು, ರೆಸಾರ್ಟ್‌ಗೆ ತೆರಳಿರುವುದನ್ನು ದೃಢಪಡಿಸಿದ್ದಾರೆ. ಈ ಗುಂಪಿನಲ್ಲಿ 15 ಸದಸ್ಯರು ಇದ್ದಾರೆಂಬ ಮಾಹಿತಿ ಇದೆ.ಬಣದೊಳಗೇ ಮೂಡದ ಸಹಮತ: ಮೂಲ ಕಾಂಗ್ರೆಸ್ ಪಕ್ಷದ ಒಟ್ಟು 15 ಜನ ಅಭ್ಯರ್ಥಿಗಳು ಮೇಲ್ನೋಟಕ್ಕೆ ಒಗ್ಗಟ್ಟು ಪ್ರದರ್ಶಿಸಿದ್ದರೂ ಅಧ್ಯಕ್ಷರ ಆಯ್ಕೆಗೆ ಸಬಂಧಿಸಿ ಸಹಮತ ಮೂಡದೇ ಅವರಲ್ಲೇ ಎರಡು ಗುಂಪುಗಳಾಗಿವೆ ಎಂದು ಹೇಳಲಾಗುತ್ತಿದೆ. ಅಧ್ಯಕ್ಷ ಸ್ಥಾನಕ್ಕೆ ಒಂದು ಗುಂಪಿನವರು ಇನ್ನೊಂದು ಗುಂಪಿನವರನ್ನು ಬೆಂಬಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಊಹಾಪೋಗಳು ಹರಿದಾಡುತ್ತಿವೆ.
9 ಜನ ಮೂಲ ಬಿಜೆಪಿ ಮತ್ತು ಮೂವರು ಪಕ್ಷೇತರರು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಶಾಸಕ ಲಕ್ಷ್ಮಣ ಸವದಿ ಅವರು ಏನು ತೀರ್ಮಾನ ಕೈಗೊಳ್ಳುತ್ತಾರೋ ಅದಕ್ಕೆ ಬದ್ಧರಾಗಿದ್ದೇವೆ ಎಂದು ಹೇಳುತ್ತಿದ್ದು, ಲಕ್ಷ್ಮಣ ಸವದಿ ಅವರು ವಿದೇಶ ಪ್ರಯಾಣದಲ್ಲಿ ಇರುವುದರಿಂದ ಅವರು ವಾಪಸ್ ಬಂದ ಬಳಿಕ ಚರ್ಚಿಸಿ ಅಂತಿ ತೀರ್ಮಾನಕ್ಕೆ ಬರಲು ನಿರ್ಧರಿಸಿದ್ದಾರೆ.ಒಟ್ಟಾರೆ ವಿಪಕ್ಷ ಇಲ್ಲದ ರಾಜ್ಯ ಏಕೈಕ ಪುರಸಭೆ ಎಂದ ಅಭಿದಾನಕ್ಕೆ ಪಾತ್ರವಾಗಿರುವ ಅಥಣಿ ಪುರಸಭೆಯಲ್ಲಿ ಆಂತರಿಕ ಬೇಗುದಿ ಹೆಚ್ಚಾಗಿದ್ದು, ಎರಡೂ ಬಣಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಕುದುರೆ ವ್ಯಾಪಾರವೂ ಜೋರಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.