ಸಾರಾಂಶ
-ಕಡೂರು ವೀರಭದ್ರೇಶ್ವರ ದೇವಾಲಯ ಪ್ರಾಂಗಣದಲ್ಲಿ ನಡೆದ ಶ್ರಾವಣ ಸರಣಿಯಲ್ಲಿ ಬಸವಪ್ರಭು ಸ್ವಾಮೀಜಿ
-------ಕನ್ನಡಪ್ರಭವಾರ್ತೆ ಹೊಳಲ್ಕೆರೆ
ಅಂತರಂಗ ಮತ್ತು ಬಹಿರಂಗ ಎರಡು ಶುದ್ಧವಾಗಿರಬೇಕು. ಬಹಿರಂಗ ಶುದ್ಧಿಗೆ ಎಲ್ಲರೂ ಆದ್ಯತೆ ನೀಡುತ್ತಾರೆ. ಆದರೆ, ಅಂತರಂಗ ನಿರ್ಮಲವಾಗಿರಬೇಕಾದರೆ ದಾರ್ಶನಿಕರ ತತ್ವಾದರ್ಶಗಳ ಶ್ರವಣ ಮತ್ತು ಮನನ, ಮತ್ತವುಗಳ ಅನುಸರಣೆಯಿಂದ ಸಾಧ್ಯವಿದೆಯೆಂದು ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.ಮುರುಘರಾಜೇಂದ್ರ ಬೃಹನ್ಮಠದಿಂದ ತಾಲೂಕಿನ ಕಡೂರು ವೀರಭದ್ರಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ಆಯೋಜಿಸಿದ್ದ ಚಿಂತನ ಶ್ರಾವಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮುರುಘಾಮಠದ ಹಳ್ಳಿ ಹಳ್ಳಿಗೆ ಸಂಚರಿಸಿ ಅನುಭಾವ ಶ್ರಾವಣ ಕಾರ್ಯಕ್ರಮದ ಮೂಲಕ ಅರಿವು ಮೂಡಿಸುತ್ತಿದೆ. ಬಸವತತ್ವದ ಜಾಗೃತಿ ಶಿವಾನುಭವ ಸಂದೇಶವಾಗಿದೆ. ಬಸವಾದಿ ಶರಣರ ವಚನಗಳ ಆಲಿಸುವುದು, ಓದುವುದು, ಮುರುಘಾ ಪರಂಪರೆಯ ಶ್ರೀಗಳವರ ಜೀವನ, ಆದರ್ಶ ಕಾರ್ಯಗಳನ್ನು ಅಧ್ಯಯನ ಮಾಡುವುದು, ಮುಂತಾದವುಗಳಿಂದ ಅಂತರಂಗ ಶುದ್ಧಿ ಮಾಡಿಕೊಳ್ಳ ಬೇಕೆಂದರು.
ಬಹಿರಂಗವಾಗಿ ನಮಗೆ ಒಳ್ಳೆಯ ವ್ಯವಸ್ಥೆ ಇದ್ದೇ ಇದೆ. ಆದರೆ, ಇವೆಲ್ಲವುದರಿಂದ ದೊರೆಯದ ಶಾಂತಿ ನೆಮ್ಮದಿಯನ್ನ ಅಂತರಂಗದಿಂದಲೇ ಪಡೆಯಬೇಕು. ಅದು ಹೊರಗೆ ಸಿಗುವುದಿಲ್ಲ. ಧ್ಯಾನ ಬಸವಾದಿ ಶರಣರ ಆದರ್ಶದ ಅಳವಡಿಕೆಯಿಂದ ಶಾಂತಿ ದೊರೆಯುತ್ತದೆ. ಮುರುಘಾ ಪರಂಪರೆ ಮತ್ತು ಬಸವ ಪರಂಪರೆ ಆದರ್ಶವನ್ನು ಸಮಾಜಕ್ಕೆ ನೀಡಿದ ಪರಂಪರೆಗಳು. ಅಂಥವರ ಸ್ಮರಣೆಯಿಂದ ಶಾಂತಿ ನೆಮ್ಮದಿ ಪಡೆಯಬಹುದು. ಅಲ್ಲಿ ಆಗಿ ಹೋದ ಗುರುಗಳು ಸಮಾಜದ ಒಳಿತಿಗಾಗಿ ಶ್ರಮಿಸಿದ್ದಾರೆ ಎಂದರು.ಮುರುಘಾಮಠದ ಮೂರು ಸಾವಿರ ಸಣ್ಣ ಗುರುಪಾದ ಸ್ವಾಮಿಗಳು ಸ್ವತಃ ಕವಿಗಳಾಗಿದ್ದರು. ಹೈದರಾಲಿ ಎಂಬ ನಾಯಕ ಮುರುಘಾ ಮಠದ ಸಂಪತ್ತನ್ನು ದೋಚಲು ಬರುವಾಗ ತಲೆ ಸುತ್ತು ಬಂದು ಬಿದ್ದನಂತೆ. ಆ ವೇಳೆಯಲ್ಲಿ ಮೂರು ಸಾವಿರ ಗುರುಪಾದ ಸ್ವಾಮಿಗಳು ಧ್ಯಾನಸಕ್ತರಾಗಿದ್ದರಂತೆ. ಆನಂತರ ದಿನಗಳಲ್ಲಿ ಗುರುಪಾದ ಸ್ವಾಮಿಗಳು ಲೋಕ ಸಂಚಾರ ಹೊರಟರೆಂದು ಚರಿತ್ರೆಯಲ್ಲಿ ಬರುತ್ತದೆ. ಸಾಮಾಜಿಕ ಧಾರ್ಮಿಕ ಕಾರ್ಯಗಳನ್ನು ಮಾಡಿದ ಐತಿಹ್ಯಗಳು ನಮಗೆ ದಾಖಲೆಗಳಲ್ಲಿ ಸಿಗುತ್ತದೆ. ಮೊಟ್ಟ ಮೊದಲ ಪ್ರಸಾದ ನಿಲಯ ಆರಂಭಿಸಿದ್ದ ಕೀರ್ತಿ ಬೃಹನ್ಮಠಕ್ಕೆ ಸಲ್ಲುತ್ತದೆ. ಅವರು ಸ್ಥಾಪಿಸಿದ ಜಯದೇವ ವಿದ್ಯಾರ್ಥಿ ನಿಲಯಗಳಲ್ಲಿ ಓದಿದ ಬಹುತೇಕರು ಆದರ್ಶ ಜೀವನವನ್ನು ರೂಪಿಸಿಕೊಂಡು ಉನ್ನತ ಪದವಿ, ಅಧಿಕಾರ ಹಿಡಿದಿದ್ದನ್ನು ನಾವು ಕಾಣಬಹುದಾಗಿದೆ ಎಂದರು.
ಮುರುಘಾಮಠದ ಮುರುಘೇಂದ್ರ ಸ್ವಾಮೀಜಿ ಹಾಗೂ ತಿಪ್ಪೇರುದ್ರಸ್ವಾಮೀಜಿ ಕಾರ್ಯಕ್ರಮದ ಸಮ್ಮುಖ ವಹಿಸಿದ್ದರು. ದೇವಸ್ಥಾನ ಕಮಿಟಿಯ ನಾಗರಾಜಪ್ಪ, ನಟರಾಜಪ್ಪ, ವೀರಭದ್ರಪ್ಪ, ಓಂಕಾರಪ್ಪ, ಪರಮೇಶ್ವರಪ್ಪ, ಈಶ್ವರಪ್ಪ, ಬಸವರಾಜಪ್ಪ ಪಟ್ಟಣಶೆಟ್ಟಿ, ಷಡಕ್ಷರಯ್ಯ ಮತ್ತಿತರರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ವೀರಭದ್ರಸ್ವಾಮಿ ದೇವಾಲಯದ ತಪ್ಪಲಿನ ಬೆಟ್ಟದಲ್ಲಿ ವಿವಿಧ ತಳಿಯ ಸಸಿಗಳನ್ನು ನೀಡಲಾಯಿತು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಆಸ್ಪತ್ರೆಯ ತಜ್ಞ ವೈದ್ಯರುಗಳಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು.ಸಮಾರಂಭದ ಆರಂಭಕ್ಕೆ ಜಮುರಾ ಕಲಾವಿದರು ವಚನ ಸಂಗೀತ ಹಾಗೂ ಪ್ರಾರ್ಥನೆಯನ್ನು ನಿರ್ವಹಿಸಿದರು. ದೇವಾಲಯ ಕಾರ್ಯನಿರ್ವಾಹಕ ಸಮಿತಿಯ ಉಪಾಧ್ಯಕ್ಷ ಎಚ್.ಎಂ.ದಯಾನಂದ್ ಸ್ವಾಗತ ಕೋರಿದರು. ಉಪನ್ಯಾಸಕ ಕೆ.ಎಚ್ ಸಿದ್ದಲಿಂಗಪ್ಪ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ನಿಸಾರ್ ಅಹಮದ್ ಶರಣು ಸಮರ್ಪಣೆ ಮಾಡಿದರು.
-----ಪೋಟೋ......
ಹೊಳಲ್ಕೆರೆ ತಾಲೂಕಿನ ಕಡೂರು ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಚಿಂತನ ಶ್ರಾವಣ ಕಾರ್ಯಕ್ರಮಕ್ಕೆ ಡಾ.ಬಸವಪ್ರಭು ಸ್ವಾಮೀಜಿ ಚಾಲನೆ ನೀಡಿದರು.------
ಫೋಟೋ: - 28 ಸಿಟಿಡಿ1-