ಗ್ಯಾರಂಟಿಗಳಿಂದ ಕುಟುಂಬಕ್ಕೆ ಆರ್ಥಿಕ ಬಲ: ಶಾಸಕ ಡಾ.ಶಾಮನೂರು ಶಿವಶಂಕರಪ್ಪ

| Published : Feb 03 2024, 01:51 AM IST

ಗ್ಯಾರಂಟಿಗಳಿಂದ ಕುಟುಂಬಕ್ಕೆ ಆರ್ಥಿಕ ಬಲ: ಶಾಸಕ ಡಾ.ಶಾಮನೂರು ಶಿವಶಂಕರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್‌ ಪಕ್ಷ ಗ್ಯಾರಂಟಿಗಳ ಘೋಷಿಸಿ, ಸರ್ಕಾರ ಬಂದ ಬಳಿಕ ಚಾಚೂ ತಪ್ಪದೇ ಗ್ಯಾರಂಟಿ ಯೋಜನೆಗಳ ಜಾರಿಗೊಳಿಸಿ ನುಡಿದಂತೆ ನಡೆದಿದ್ದು, ಜನಪರವಾಗಿರುವ ನಮ್ಮ ಸರ್ಕಾರದ ಪರ ಜನರೂ ಇರಬೇಕು ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್‌ ಪಕ್ಷ ಗ್ಯಾರಂಟಿಗಳ ಘೋಷಿಸಿ, ಸರ್ಕಾರ ಬಂದ ಬಳಿಕ ಚಾಚೂ ತಪ್ಪದೇ ಗ್ಯಾರಂಟಿ ಯೋಜನೆಗಳ ಜಾರಿಗೊಳಿಸಿ ನುಡಿದಂತೆ ನಡೆದಿದ್ದು, ಜನಪರವಾಗಿರುವ ನಮ್ಮ ಸರ್ಕಾರದ ಪರ ಜನರೂ ಇರಬೇಕು ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.

ತಾಲೂಕಿನ ಕುಕ್ಕವಾಡ ಗ್ರಾಮದಲ್ಲಿ ಶುಕ್ರವಾರ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಗ್ರಾಮಮಟ್ಟದ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ಯಾರಂಟಿ ಯೋಜನೆ ಮೂಲಕ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ. ಈ ಯೋಜನೆಗಳಿಂದ ಕುಟುಂಬದಲ್ಲಿ ಆರ್ಥಿಕ ಬಲ ಬಂದಿದ್ದು, ಜನರ ಜೀವನ ಮಟ್ಟ ಸುಧಾರಣೆ, ನಿರ್ವಹಣೆ ಸುಲಭವಾಗಿದೆ. ಬಡ, ಮಧ್ಯಮ ವರ್ಗದ ಜನರಿಗೆ ಗ್ಯಾರಂಟಿ ಯೋಜನೆ ವರವಾಗಿದೆ. ಕೆಲ ತಾಂತ್ರಿಕ ಕಾರಣಕ್ಕೆ ಗೃಹಲಕ್ಷ್ಮಿಯ ₹2 ಸಾವಿರ, ಅನ್ನ ಭಾಗ್ಯದ 5 ಕೆಜಿ ಅಕ್ಕಿ ಬದಲು ಹಣ ನೀಡಲು ಆಧಾರ್‌ ಜೋಡಣೆ, ಆಧಾರ್‌ ತಿದ್ದುಪಡಿ ಕಾರಣಕ್ಕೆ ಬಾರದಿರಬಹುದು. ಅಧಿಕಾರಿಗಳು ಈ ಎಲ್ಲಾ ಅಡೆತಡೆ ನಿವಾರಿಸಿ, ಆದಷ್ಟು ಬೇಗ ಎಲ್ಲರಿಗೂ ಸೌಲಭ್ಯ ತಲುಪಿಸುವರು ಈ ಬಗ್ಗೆ ಯಾವುದೇ ಆತಂಕ ಬೇಡ ಎಂದರು.

ಸೌಲಭ್ಯ ಪಡೆಯದವರು ಕಡಿಮೆ:

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ಮಾತನಾಡಿ, ಜನ ಕಲ್ಯಾಣಕ್ಕಾಗಿ ಅದಲ್ಲೂ ಮಹಿಳೆಯರಿಗಾಗಿ 5 ಗ್ಯಾರಂಟಿ ಯೋಜನೆ ಘೋಷಿಸಿ, ಅದನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲಾಗಿದೆ. ಈ ಯೋಜನೆ ಸೌಲಭ್ಯ ಪಡೆಯದಿರುವವರ ಸಂಖ್ಯೆ ವಿರಳ. ಪ್ರತಿ ಕುಟುಂಬವೂ ಇದರ ಫಲಾನುಭವಿಯಾಗಿದೆ. ಕೆಲವರು ಎಲ್ಲಾ ಯೋಜನೆ ಲಾಭ ಪಡೆದರೆ, ಮತ್ತೆ ಕೆಲವರು ಒಂದೆರೆಡು ಯೋಜನೆ ಲಾಭವನ್ನಾದರೂ ಪಡೆಯುತ್ತಿದ್ದಾರೆ. ಕುಟುಂಬದ ಬಡತನ ನಿರ್ಮೂಲನೆ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಮೇಲೆತ್ತುವ ಮೂಲಕ ಮುಖ್ಯ ವಾಹಿನಿಗೆ ಜನರ ತರಲು ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ ಎಂದು ತಿಳಿಸಿದರು.

ತೊಂದರೆ ನಿವಾರಣೆಗೆ ಫಲಾನುಭವಿಗಳ ಸಮಾವೇಶ:

ಯೋಜನೆ ಫಲಾನುಭವಿಗಳ ಸಮಾವೇಶದ ಮೂಲಕ ಜನರಿಗೆ ಮತ್ತಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ತಾಂತ್ರಿಕ ಕಾರಣಕ್ಕೆ ಯೋಜನೆ ಸೌಲಭ್ಯ ಪಡೆಯಲಾಗದ ಜನರು ತಮಗೆ ಹಣ ಬಂದಿಲ್ಲವೆನ್ನುತ್ತಾರೆ. ಇದಕ್ಕೆ ಆಧಾರ್‌, ಪಡಿತರ ಚೀಟಿ ಹೆಸರು ವ್ಯತ್ಯಾಸ, ಇತರೆ ಕಾರಣಕ್ಕೆ ಆಗಿರಬಹುದು. ಈ ತೊಂದರೆ ನಿವಾರಿಸುವ ಕೆಲಸ ಮಾಡುವ ನಿಟ್ಟಿನಲ್ಲಿ ಗ್ರಾಪಂ ಮಟ್ಟದಿಂದ ಫಲಾನುಭವಿಗಳ ಸಮಾವೇಶ ನಡೆಸಲಾಗುತ್ತಿದೆ. ಗೃಹಲಕ್ಷ್ಮಿಯಡಿ ನೋಂದಣಿಯಾದ ಮಹಿಳೆಯರಿಗೆ ಹಣ ಬಾರದ ತಾಂತ್ರಿಕ ಸಮಸ್ಯೆ ನಿವಾರಣೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ಉಪ ವಿಭಾಗಾಧಿಕಾರಿ ಎನ್‌.ದುರ್ಗಾಶ್ರೀ, ಮಹಿಳಾ ಮತ್ತು ಮಕ್ಕಳ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್‌, ತಹಸೀಲ್ದಾರ್ ಅಶ್ವತ್ಥ್‌, ಗ್ರಾಪಂ ಅಧ್ಯಕ್ಷ ಶ್ರೀನಿವಾಸ, ಕೆಎಸ್ಸಾರ್ಟಿಸಿ ಡಿಪೋ ಮ್ಯಾನೇಜರ್ ಎಂ.ರಾಮಚಂದ್ರಪ್ಪ, ತಾಪಂ ಇಒ ರಾಮಭೋವಿ, ಸಿಡಿಪಿಒ ಅಭಿಕುಮಾರ, ಪಿಡಿಒ ಲಕ್ಷ್ಮಿದೇವಿ ಇತರರಿದ್ದರು.

...........

ಶಕ್ತಿ ಯೋಜನೆಯಿಂದ ನನಗೆ ಅನುಕೂಲವಾಗಿದೆ. ಉಚಿತ ಪ್ರಯಾಣದಿಂದಾಗಿ ಮನೆಯಲ್ಲಿ ಅತ್ತೆ, ಮಾವ, ಪತಿಗೆ ಬಸ್‌ ಪ್ರಯಾಣಕ್ಕೆ ಹಣ ಕೇಳುವಂತಿಲ್ಲ. ನಮಗೆ ಬೇಕಾದ ಪ್ರೇಕ್ಷಣೀಯ, ಪುಣ್ಯ ಸ್ಥಳಗಳ ನೋಡಲು ಮಹಿಳೆಯರಿಗೆ ಅನುಕೂಲವಾಗಿದೆ. ಕುಟುಂಬದ ಸದಸ್ಯರ ಮೇಲೆ ಅವಲಂಬಿತರಾಗದೇ, ಮಹಿಳೆಯರು ಸ್ವಾವಲಂಬಿಯಾಗಲು ಸರ್ಕಾರದ ಗ್ಯಾರಂಟಿ ಯೋಜನೆಗಳು ಸಹಕಾರಿ.

ಪುಷ್ಪಾ, ಗೃಹಿಣಿ.

.................

ತಿಂಗಳಿಗೆ 2 ಸಾವಿರ ರು. ಗೃಹಲಕ್ಷ್ಮಿಯಿಂದ ಬರುವುದರಿಂದ ಬಡ ಹೆಣ್ಣು ಮಕ್ಕಳಿಗೆ ನೆರವಾಗಿದೆ. ಟೈಲರಿಂಗ್ ಮಾಡುವ ತಮ್ಮಂತಹ ಸ್ವ ಉದ್ಯೋಗಿಗಳಿಗೆ ವಸ್ತುಗಳ ಖರೀದಿಗೆ ಬೇರೆಯವರ ಬಳಿ ಹಣ ಕೇಳದೇ, ಬಂಡವಾಳ ಮಾಡಿಕೊಂಡು, ವ್ಯಾಪಾರ ಮಾಡಲು ಅನುಕೂಲವಾಗಿದೆ. ಅನ್ನ ಭಾಗ್ಯದಡಿ ಅಕ್ಕಿ ಬದಲು ಹಣ ನೀಡುತ್ತಿದ್ದು, ಅದೂ ಆಸರೆಯಾಗಿದೆ. ಸ್ವಾವಲಂಬಿ ಬದುಕು ಕಟ್ಟಿಕೊಂಟಿದ್ದೇವೆ.

ರೇಖಾ, ಟೈಲರಿಂಗ್ ಮಹಿಳೆ

.................... ಉಚಿತ ವಿದ್ಯುತ್ ನೀಡಿದರೂ ನಿರಂತರ ವಿದ್ಯುತ್ ಪೂರೈಕೆಯಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಓದುವ ಮಕ್ಕಳಿಗೆ ಇದರಿಂದ ಅನುಕೂಲವಾಗುತ್ತಿದೆ. ಶೂನ್ಯ ಬಿಲ್‌ ಬರುವುದರಿಂದ ಬಡವರು ನಿರಾತಂಕವಾಗಿ ಬೇಸಿಗೆಯಲ್ಲಿ ಫ್ಯಾನ್ ಬಳಸಬಹುದು. ಗ್ಯಾರಂಟಿ ಯೋಜನೆಗಳಿಂದ ವಿಶೇಷವಾಗಿ ಮಹಿಳೆಯರಿಗೆ ಒಳ್ಳೆಯದಾಗುತ್ತಿದೆ.

ಸುನಂದಾ ಗೃಹಿಣಿ.

..........