ಸಾರಾಂಶ
ಐವನ್ ಡಿಸೋಜ ಅವರು ಕರ್ನಾಟಕದ ಅಲ್ಪಸಂಖ್ಯಾತ ಸಮುದಾಯದ ಏಕೈಕ ವಿಧಾನಪರಿಷತ್ ಸದಸ್ಯರಾಗಿ ಜಾತ್ಯತೀತತೆಯೊಂದಿಗೆ ಸಮುದಾಯದ ಧ್ವನಿಯನ್ನು ವಿಧಾನಪರಿಷತ್‌ನಲ್ಲಿ ಎತ್ತುತ್ತಿದ್ದಾರೆ. ಇಂತಹ ಜನಪ್ರತಿನಿಧಿಯನ್ನು ವಿನಾ ಕಾರಣ ನಿಂದಿಸಿ ರಾತ್ರಿ ಹೊತ್ತು ಕಲ್ಲುತೂರಾಟ ನಡೆಸಿರುವುದು ಭಯೋತ್ಪಾದನೆಗೆ ಸಮಾನವಾದ ಕೃತ್ಯವಾಗಿದೆ ಎಂದು ಪುತ್ತೂರು ಕ್ರಿಶ್ಚಿಯನ್ ಯೂನಿಯನ್ ಖಂಡಿಸಿದೆ.
ಕನ್ನಡಪ್ರಭ ವಾರ್ತೆ ಪುತ್ತೂರು
ಕರ್ನಾಟಕ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಅವರ ಹೇಳಿಕೆಯನ್ನು ತಿರುಚಿ ಅವರ ಮಾನಹಾನಿಗೆ ಪ್ರಯತ್ನಿಸಿದ್ದ ಹಾಗೂ ಅವರ ಅನುಪಸ್ಥಿತಿಯಲ್ಲಿ ಅವರ ಮನೆಗೆ ರಾತ್ರಿ ಕಲ್ಲು ತೂರಾಟ ನಡೆಸಿ ರಾಜಕೀಯ ಹಿಂಸಾಚಾರಕ್ಕೆ ಯತ್ನಿಸಿದ ದ.ಕ. ಜಿಲ್ಲಾ ಬಿಜೆಪಿಯ ಗೂಂಡಾ ಸಂಸ್ಕೃತಿಯು ಖಂಡನೀಯವಾಗಿದೆ. ತಕ್ಷಣವೇ ಕಲ್ಲುತೂರಾಟ ನಡೆಸಿದ ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿ ಕಠಿಣ ಕಾನೂನು ಶಿಕ್ಷೆ ವಿಧಿಸಬೇಕು ಎಂದು ಪುತ್ತೂರು ಕ್ರಿಶ್ಚಿಯನ್ ಯೂನಿಯನ್ ಅಧ್ಯಕ್ಷ ಮೌರಿಸ್ ಮಸ್ಕರೇನಸ್ ಆಗ್ರಹಿಸಿದ್ದಾರೆ.ಅವರು ಸೋಮವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಐವನ್ ಡಿಸೋಜ ಅವರು ಕರ್ನಾಟಕದ ಅಲ್ಪಸಂಖ್ಯಾತ ಸಮುದಾಯದ ಏಕೈಕ ವಿಧಾನಪರಿಷತ್ ಸದಸ್ಯರಾಗಿ ಜಾತ್ಯತೀತತೆಯೊಂದಿಗೆ ಸಮುದಾಯದ ಧ್ವನಿಯನ್ನು ವಿಧಾನಪರಿಷತ್‌ನಲ್ಲಿ ಎತ್ತುತ್ತಿದ್ದಾರೆ. ಇಂತಹ ಜನಪ್ರತಿನಿಧಿಯನ್ನು ವಿನಾ ಕಾರಣ ನಿಂದಿಸಿ ರಾತ್ರಿ ಹೊತ್ತು ಕಲ್ಲುತೂರಾಟ ನಡೆಸಿರುವುದು ಭಯೋತ್ಪಾದನೆಗೆ ಸಮಾನವಾದ ಕೃತ್ಯವಾಗಿದೆ ಎಂದರು.ಪ್ರತಿಭಟನೆಯಲ್ಲಿ ಸಂವಿಧಾನ ರಕ್ಷಣೆ ಮಾಡಬೇಕಾದ ರಾಜ್ಯಪಾಲರು ಸಂವಿಧಾನ ವಿರೋಧಿಯಾಗಿ ನಡೆದುಕೊಂಡರೆ ಜನರ ಆಕ್ರೋಶವನ್ನು ಎದುರಿಸಬೇಕಾದಿತು ಎಂಬ ಅರ್ಥದಲ್ಲಿ ಐವನ್ ಮಾತನಾಡಿದ್ದರು. ಅಭಿಪ್ರಾಯ ಭೇದವು ಮಾತಿಗೆ ಸೀಮಿತವಾಗಿರಬೇಕು ಹೊರತು ಹಿಂಸೆಯ ರೂಪದ್ದು ಆಗಬಾರದು. ವಿರೋಧ ಇದೆ ಎಂದು ಎಲ್ಲರೂ ಕಲ್ಲು ತೂರಾಟ ನಡೆಸಿದರೆ ಸಮಾಜದ ಸ್ಥಿತಿ ಏನಾಗಬಹುದು ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಟಿಯಲ್ಲಿ ಕ್ರಿಶ್ಚಿಯನ್ ಯೂನಿಯನ್ ಪುತ್ತೂರು ಗೌರವಾಧ್ಯಕ್ಷ ವಲೇರಿಯನ್ ಡಯಾಸ್, ಉಪಾಧ್ಯಕ್ಷ ಕ್ಯಾನ್ಯೂಟ್ ಮಸ್ಕರೇನಸ್, ಜೊತೆ ಕಾರ್ಯದರ್ಶಿ ನಿವೃತ್ತ ಪೊಲೀಸ್ ಅಧಿಕಾರಿ ಜೋಕಿಂ ಲೂಯಿಸ್, ಕೋಶಾಧಿಕಾರಿ ವಾಲ್ಟರ್ ಸ್ವಿಕ್ವೆರಾ ಉಪಸ್ಥಿತರಿದ್ದರು.