ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡಲಗಿ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಪ್ರತಿಮ ದೇಶಭಕ್ತನಾಗಿ ಜನರ ಹೃದಯದಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದಾರೆ. ಅಂಥ ದೇಶಭಕ್ತನ ಪ್ರತಿಮೆಯನ್ನು ಒಂದೇ ದಿನ ನಾಲ್ಕು ಕಡೆಯಲ್ಲಿ ಅನಾವರಣ ಮಾಡುತ್ತಿರುವುದು ಹೆಮ್ಮೆ ಎನಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ತಾಲೂಕಿನ ಯಾದವಾಡದಲ್ಲಿ ಮುಧೋಳ ಲೋಕಾಪುರ ರಸ್ತೆಯಲ್ಲಿ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಮಿತಿಯವರು ನಿರ್ಮಿಸಿದ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಭಾನುವಾರ ಅನಾವರಣಗೊಳಿಸಿ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ನಂಬಿಕೆ, ವಿಶ್ವಾಸದ ಪ್ರತೀಕವಾಗಿದ್ದ. ಸಂಗೊಳ್ಳಿ ರಾಯಣ್ಣನು ಕಿತ್ತೂರು ರಾಣಿ ಚನ್ನಮ್ಮಳ ಬಲಗೈ ಬಂಟನಾಗಿ ಕೆಲಸ ಮಾಡಿದ್ದ. ಚನ್ನಮ್ಮ ಸಂಗೊಳ್ಳಿ ರಾಯಣ್ಣನ ಮೇಲೆ ಅಪಾರ ನಂಬಿಕೆ ಇಟ್ಟಿದ್ದರು. ಬ್ರಿಟಿಷರಿಗೆ ಸಿಂಹಸ್ವಪ್ನನಾಗಿ ಸ್ವಂತ ಸೇನೆ ನಿರ್ಮಿಸಿದ್ದ ಸಂಗೊಳ್ಳಿ ರಾಯಣ್ಣ ಭಾರತಕ್ಕೆ ಸ್ವಾತಂತ್ರ್ಯಕೊಡಿಸುವುದಕ್ಕಾಗಿ ಪ್ರಾಣ ತ್ಯಾಗ ಮಾಡಿದ ಶ್ರೇಷ್ಠ ದೇಶಪ್ರೇಮಿ ಎನಿಸಿ ಯವಕರಿಗೆ ಪ್ರೇರಣೆಯಾಗಿದ್ದಾರೆ ಎಂದರು.
₹182 ಕೋಟಿ ವೆಚ್ಚದಲ್ಲಿ ಸಂಗೊಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಸೈನಿಕ ಶಾಲೆ ನಿರ್ಮಿಸಿದ್ದು, ಅದರ ಮೂಲಕ ಮಕ್ಕಳಲ್ಲಿ ಧೈರ್ಯ, ನಂಬಿಕೆ ಮತ್ತು ವಿಶ್ವಾಸದ ಪಾಠದ ಕಲಿಕೆಯಾಗಬೇಕು. ಸಂಗೊಳ್ಳಿ ರಾಯಣ್ಣನ ತರಹ ಶೂರರು ನಾಡಿನಲ್ಲಿ ಬೆಳೆಯಬೇಕು. ಸಂಗೊಳ್ಳಿ ರಾಯಣ್ಣನ ರೀತಿಯಲ್ಲಿ ಪ್ರತಿಯೊಬ್ಬರೂ ದೇಶ ಮತ್ತು ಸಮಾಜ ಪ್ರೀತಿಸಬೇಕು ಎಂದು ಹೇಳಿದರು.ಹುಲಜಯಂತಿ ಮಾಳಿಂಗರಾಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮೀ ಹೆಬ್ಬಾಳರ, ಸರ್ಕಾರದ ಮುಖ್ಯ ಸಚೇತಕರ ಅಶೋಕ ಪಟ್ಟಣ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಆಪ್ತ ಸಹಾಯಕ ನಿಂಗಪ್ಪ ಕುರಬೇಟ, ಕಾಂಗ್ರೆಸ್ ಮುಖಂಡ, ಮೃಣಾಲ ಹೆಬ್ಬಾಳಕರ, ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ರಾಜ್ಯಾಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ, ಲಕ್ಷ್ಮಣರಾವ ಚಿಂಗಳೆ, ಯಾದವಾಡ ಗ್ರಾಪಂ ಅಧ್ಯಕ್ಷ ಬಸವರಾಜ ಭುತಾಳಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಮಿಟಿ ಸದಸ್ಯರು ಉಪಸ್ಥಿತರಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಡೊಳ್ಳು ಕುಣಿತ, ಹರ್ಷೋದ್ಘಾರ, ಚಪ್ಪಾಳೆಗಳಿಂದ ಬರಮಾಡಿಕೊಳ್ಳಲಾಯಿತು. ಭಾಷಣದುದ್ದಕ್ಕೂ ಆಗಾಗ ಸಿಎಂ ಮಾತಿಗೆ ಜನರು ಸಿಳ್ಳೆ, ಕೂಗು ಹಾಕಿ ಹುರಿದುಂಬಿಸಿದರು.ಹಿಂದುಳಿದ ವರ್ಗದ ಮುಖ್ಯಮಂತ್ರಿಯಾಗಿರುವ ನನ್ನನ್ನು ಮುಖ್ಯಮಂತ್ರಿ ಹುದ್ದೆಯಿಂದ ತೆಗೆಯಬೇಕು ಎಂದು ದೊಡ್ಡ ಸಂಚು ನಡೆಯುತ್ತಿದೆ. ಜನರ ಆಶೀರ್ವಾದ ನನ್ನ ಮೇಲೆ ಇದ್ದು, ನನ್ನನ್ನು ಯಾರೂ ತೆಗೆಯಲು ಸಾಧ್ಯವಿಲ್ಲ. ನಾನು ಮಂತ್ರಿಯಾಗಿ 40 ವರ್ಷಗಳಾಯಿತು. ನನ್ನ ರಾಜಕೀಯ ಜೀವನದಲ್ಲಿ ಒಂದು ಕಪ್ಪುಚುಕ್ಕೆ ಇಲ್ಲ.
ಸಿದ್ದರಾಮಯ್ಯ ಮುಖ್ಯಮಂತ್ರಿ