ಕುಂದಾಪುರ: ಇಲ್ಲಿನ ಗುಲ್ವಾಡಿ ಸಮೀಪದ ಶೆಟ್ರಕಟ್ಟೆ ಬಳಿ ಸಂಭವಿಸಿದ ಟಿಪ್ಪರ್ ಹಾಗೂ ಸರ್ಕಾರಿ ಬಸ್ ನಡುವಿನ ಭೀಕರ ಅಪಘಾತಕ್ಕೆ ಸಂಬಂಧಿಸಿದಂತೆ ಟಿಪ್ಪರ್ ಚಾಲಕ ಸೇರಿದಂತೆ ಮೂವರ ವಿರುದ್ದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಕುಂದಾಪುರ: ಇಲ್ಲಿನ ಗುಲ್ವಾಡಿ ಸಮೀಪದ ಶೆಟ್ರಕಟ್ಟೆ ಬಳಿ ಸಂಭವಿಸಿದ ಟಿಪ್ಪರ್ ಹಾಗೂ ಸರ್ಕಾರಿ ಬಸ್ ನಡುವಿನ ಭೀಕರ ಅಪಘಾತಕ್ಕೆ ಸಂಬಂಧಿಸಿದಂತೆ ಟಿಪ್ಪರ್ ಚಾಲಕ ಸೇರಿದಂತೆ ಮೂವರ ವಿರುದ್ದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.ಟಿಪ್ಪರ್ ಚಾಲಕ ರಾಘವೇಂದ್ರ, ಟಿಪ್ಪರ್ ಮಾಲೀಕ ಸುಮ ಹಾಗೂ ಮಣ್ಣು ಸಾಗಾಟ ಗುತ್ತಿಗೆದಾರ ಶ್ರೀಧರ ವಿರುದ್ಧ ಕೆಎಸ್ಆರ್‌ಟಿಸಿಯ ಕುಂದಾಪುರ ಘಟಕದ ಸಂಚಾರಿ ನಿರೀಕ್ಷಕ ದೇವಿದಾಸ್ ಟಿ ಬೋರ್ಕರ್ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಟಿಪ್ಪರ್ ಚಾಲಕನು ವಾಹನದ ಪರವಾನಗಿ ನಿಯಮ ಉಲ್ಲಂಘಿಸಿ ಮಿತಿ ಮೀರಿದ ಮಣ್ಣು ಟಿಪ್ಪರ್ ನಲ್ಲಿ ತುಂಬಿಸಿಕೊಂಡು ಬಂದಿರುವುದು ಪೊಲೀಸ್ ತನಿಖೆಯಲ್ಲಿ ದೃಢಪಟ್ಟಿದೆ. ಟಿಪ್ಪರ್ ದಾಖಲೆಗಳನ್ನು ಪರಿಶೀಲಿಸಿದಾಗ, ಟಿಪ್ಪರ್‌ಗೆ ಇನ್ಸೂರೆನ್ಸ್ ಮಾಡಿಸದೆ ಇರುವುದು ಬೆಳಕಿಗೆ ಬಂದಿದೆ.

ನ್ಯಾಯಾಂಗ ಬಂಧನ:ಟಿಪ್ಪರ್ ಚಾಲಕ ಬಿದ್ದಲ್ ಕಟ್ಟೆ ನಿವಾಸಿ ರಾಘವೇಂದ್ರ (40) ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಪೊಲೀಸ್ ಇಲಾಖೆ ನಿಗಾ ವಹಿಸಿದೆ. ಮಣ್ಣು ಸಾಗಾಟ ಗುತ್ತಿಗೆದಾರ ಬಳ್ಕೂರಿನ ಶ್ರೀಧರ್ (30) ಅವರನ್ನು ಗ್ರಾಮಾಂತರ ಠಾಣೆ ಪಿಎಸ್ಐ ನಾಸಿರ್ ಹುಸೇನ್ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.ಘಟನೆಯ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಆರೋಪಿತರ ವಿರುದ್ಧ 110, 303(2) ಬಿಎನ್‌ಎಸ್ ಮತ್ತು 4(1ಎ), 21(4) ಎಂಎಂಆರ್‌ಡಿ ಕಾಯಿದೆ ಮತ್ತು 183, 146, 192 182 ಐಎಂವಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.ಟಿಪ್ಪರ್ ವೇಗಕ್ಕೆ ಕಡಿವಾಣ: ಅಭಿಯಾನಟಿಪ್ಪರ್ ಚಾಲಕನ ನಿರ್ಲಕ್ಷ್ಯ ಹಾಗೂ ವೇಗದ ಚಾಲನೆ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಜಿಲ್ಲಾ ಸಾರಿಗೆ ಪ್ರಾಧಿಕಾರಕ್ಕೆ ಹಾಗೂ ಪೊಲೀಸ್ ಇಲಾಖೆಗೆ ಟಿಪ್ಪರ್ ಚಾಲಕರ ಮಿತಿ ಮೀರಿದ ವೇಗಕ್ಕೆ ಕಡಿವಾಣ ಹಾಕುವಂತೆ ಒತ್ತಾಯಗಳು ಕೇಳಿಬಂದಿವೆ.ಘಟನೆಗೆ ಕಾರಣರಾದ ಹಾಗೂ ನಿರ್ಲಕ್ಷ್ಯಕ್ಕೆ ಕಾರಣರಾದವರಿಗೆ ಕಾನೂನು ಪಾಠ ಮಾಡಿದ್ದೇವೆ. ಗಂಭೀರವಾಗಿ ಗಾಯಗೊಂಡು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿರುವವರಿಗೆ ಚಿಕಿತ್ಸೆ ಮುಂದುವರಿದಿದೆ.

-ಹರಿರಾಂ ಶಂಕರ್, ಜಿಲ್ಲಾ ಎಸ್‌ಪಿ.