ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಸ್ಥಾಪಕ ಟ್ರಸ್ಟಿ, ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರಕುಮಾರ್ ಅವರು ಮಹಿಳಾ ಸಬಲೀಕರಣದಲ್ಲಿ ಸಲ್ಲಿಸಿದ ಮಹತ್ ಸಾಧನೆಯನ್ನು ಗುರುತಿಸಿ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವತಿಯಿಂದ ‘ವಿಷನರಿ ಲೀಡರ್‌ಶಿಪ್ ಅವಾರ್ಡ್’
ಮಂಗಳೂರು: ಜನಸಾಮಾನ್ಯರಲ್ಲಿ ಆರ್ಥಿಕಾಭಿವೃದ್ಧಿಯ ಛಾಪನ್ನು ಮೂಡಿಸಿರುವ ನವೋದಯ ಸ್ವ ಸಹಾಯ ಗುಂಪುಗಳ ಕಾರ್ಯ ದಕ್ಷತೆ ಹಾಗೂ ಸಂಘಟನೆಯ ವಿಶೇಷ ಅಧ್ಯಯನಕ್ಕೆ ಅಮೆರಿಕದ ಪ್ರತಿಷ್ಠಿತ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಅಧ್ಯಯನ ತಂಡ ಮಂಗಳವಾರ ಮಂಗಳೂರಿನ ಎಸ್‌ಸಿಡಿಸಿಸಿ ಬ್ಯಾಂಕಿಗೆ ಆಗಮಿಸಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಸ್ಥಾಪಕ ಟ್ರಸ್ಟಿ, ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರಕುಮಾರ್ ಅವರು ಮಹಿಳಾ ಸಬಲೀಕರಣದಲ್ಲಿ ಸಲ್ಲಿಸಿದ ಮಹತ್ ಸಾಧನೆಯನ್ನು ಗುರುತಿಸಿ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವತಿಯಿಂದ ‘ವಿಷನರಿ ಲೀಡರ್‌ಶಿಪ್ ಅವಾರ್ಡ್’ (Visionary Leadership Award in WOMEN EMPOERMENT ) ನೀಡಿ ಗೌರವಿಸಿದೆ.
ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪ್ರೊ. ಫೆಮಿಡಾ ಹ್ಯಾಂಡಿ ಅವರು ಡಾ.ಎಂ.ಎನ್.ರಾಜೇಂದ್ರ ಕುಮಾರ್‌ಗೆ ಶಾಲು ಹಾಕಿ, ‘ವಿಷನರಿ ಲೀಡರ್‌ಶಿಪ್ ಅವಾರ್ಡ್’ ಪ್ರದಾನ ಮಾಡಿದರು.ಬಳಿಕ ಮಾತನಾಡಿದ ಪ್ರೊ. ಫೆಮಿಡಾ ಹ್ಯಾಂಡಿ, ಇಂದಿಗೂ ಇವರು ದೇಶದ ವಿವಿಧ ಭಾಗಗಳಲ್ಲಿ ಪ್ರವಾಸ ಮಾಡಿ ನವೋದಯ ಸ್ವಸಹಾಯ ಸಂಘ ಚಳವಳಿಯ ಮೂಲಕ ಹಿಂದುಳಿದ ವರ್ಗಗಳ, ವಿಶೇಷವಾಗಿ ಮಹಿಳೆಯರ ಸಬಲೀಕರಣಕ್ಕಾಗಿ ಅಹೋರಾತ್ರಿ ಶ್ರಮಿಸುತ್ತಿದ್ದಾರೆ. ಸ್ಥಾನಕ್ಕಿಂತ ಪ್ರಭಾವವೇ ನಿಜವಾದ ನಾಯಕತ್ವ ಎಂಬ ನಂಬಿಕೆಯನ್ನು ಅವರ ಜೀವನ ಪ್ರತಿಬಿಂಬಿಸುತ್ತದೆ. ಅಸಂಖ್ಯಾತ ಜನರ ಬದುಕಿಗೆ ಬೆಳಕು ನೀಡಿದ ಅವರ ದೃಷ್ಟಿ, ಕರುಣೆ ಮತ್ತು ಸೇವಾ ಮನೋಭಾವವನ್ನು ಗೌರವಿಸುವ ಸಲುವಾಗಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದರು.
70ರ ದಶಕದ ಸೇವಾ ಹಿರಿಮೆ: ಎಪ್ಪತ್ತರ ದಶಕದಲ್ಲೂ ಸಹಕಾರಿ ಕ್ಷೇತ್ರದಲ್ಲಿ ಸೇವೆ, ನಿಷ್ಠೆ ಮತ್ತು ನಾಯಕತ್ವದ ಮೌಲ್ಯಗಳನ್ನು ಜೀವಂತವಾಗಿ ಇರಿಸಿಕೊಂಡಿರುವ ಡಾ. ರಾಜೇಂದ್ರ ಕುಮಾರ್ ಅವರು, 2024ರ ಮಾರ್ಚ್ ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಏಳನೇ ಬಾರಿ ಆಯ್ಕೆಯಾಗಿದ್ದಾರೆ. ಇದು ಅವರ ಮೇಲಿನ ಅಪಾರ ನಂಬಿಕೆ ಮತ್ತು ಗೌರವಕ್ಕೆ ಸಾಕ್ಷಿಯಾಗಿದೆ ಎಂದರು.ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಬ್ಯಾಂಕ್ ಆರ್ಥಿಕವಾಗಿ ಗಣನೀಯ ಸಾಧನೆ ಮಾಡಿದ್ದು, ಸುಮಾರು 8,798 ಕೋಟಿ ರು. ಠೇವಣಿಗಳನ್ನು ಸಂಗ್ರಹಿಸುವುದರ ಜೊತೆಗೆ 10,477 ಕೋಟಿ ರು.ಗೂ ಅಧಿಕ ಸಾಲ ವಿತರಣೆ ಮಾಡಿದೆ. ಆರ್ಥಿಕ ಯಶಸ್ಸಿನ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸಿರುವುದು ಬ್ಯಾಂಕಿನ ಮತ್ತೊಂದು ಮಹತ್ವದ ಸಾಧನೆಯಾಗಿದೆ ಎಂದರು.ಡಾ. ರಾಜೇಂದ್ರ ಕುಮಾರ್ ಅವರು ನವೋದಯ ಗ್ರಾಮ ವಿಕಾಸ ಚಾರಿಟಬಲ್ ಟ್ರಸ್ಟ್ ಸಂಸ್ಥೆಯನ್ನು ಸ್ಥಾಪಿಸಿ, ಗ್ರಾಮೀಣ ಅಭಿವೃದ್ಧಿ ಹಾಗೂ ಮಹಿಳಾ ಸಬಲೀಕರಣಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಈ ಸಂಸ್ಥೆಯ ಮೂಲಕ 40,000ಕ್ಕೂ ಹೆಚ್ಚು ಸ್ವಸಹಾಯ ಸಂಘಗಳನ್ನು ರೂಪಿಸಿ, ಸುಮಾರು 4,50,000 ಲಕ್ಷ ಸದಸ್ಯರಿಗೆ, ಅದರಲ್ಲೂ ಬಹುಪಾಲು ಹಿಂದುಳಿದ ಮಹಿಳೆಯರಿಗೆ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ತುಂಬಿದ್ದಾರೆ. ನವೋದಯ ಸ್ವಸಹಾಯ ಸಂಘ ಚಳವಳಿಯ ಮೂಲಕ ಲಕ್ಷಾಂತರ ಮಹಿಳೆಯರಿಗೆ ಸ್ವಾಭಿಮಾನ, ಆತ್ಮವಿಶ್ವಾಸ ಮತ್ತು ಹೊಸ ಬದುಕಿನ ದಾರಿ ತೆರೆದಿದ್ದಾರೆ ಎಂದರು. ಸಹಕಾರಿ ಕ್ಷೇತ್ರ ಹಾಗೂ ಮಹಿಳಾ ಸಬಲೀಕರಣಕ್ಕೆ ಸಲ್ಲಿಸಿದ ಅನನ್ಯ ಸೇವೆಯನ್ನು ಗುರುತಿಸಿ ಅವರಿಗೆ ಮದರ್ ತೆರೆಸಾ ಸದ್ಭಾವನಾ ಪ್ರಶಸ್ತಿ, ಲಂಡನ್‌ನ ಹೌಸ್ ಆಫ್ ಕಾಮನ್ಸ್‌ನಲ್ಲಿ ಪ್ರದಾನವಾದ ಮಹಾತ್ಮ ಗಾಂಧಿ ಸನ್ಮಾನ್ ಅಂತರರಾಷ್ಟ್ರೀಯ ಪ್ರಶಸ್ತಿ, ಗ್ಲೋಬಲ್ ಲೀಡರ್ಸ್ ಫೌಂಡೇಶನ್, ನವದೆಹಲಿ ನೀಡಿದ ರಾಷ್ಟ್ರೀಯ ಶ್ರೇಷ್ಠತಾ ಪ್ರಶಸ್ತಿ–2017 ಸೇರಿದಂತೆ ಅನೇಕ ಪ್ರತಿಷ್ಠಿತ ಗೌರವಗಳು ಲಭಿಸಿವೆ ಎಂದು ಅವರು ಶ್ಲಾಘಿನಿಸಿದರು.ಅಮೆರಿಕದ ಪ್ರತಿಷ್ಠಿತ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಅಧ್ಯಯನ ತಂಡ ಪ್ರೊಫೆಸರ್ ಫೆಮಿಡಾ ಹ್ಯಾಂಡಿ , ಪ್ರೊಫೆಸರ್ ಲ್ಯೂಕಸ್ ವಿನೋದ್ ದೀಕ್ಷಿತ್, ನಿಕೋಲ್, ಅಲೆಸ್ಸಾಂಡ್ರೊ (ಅಲೆಕ್ಸ್), ಅಬಿಗೈಲ್ (ಪ್ರೊಫೆಸರ್ ಫೆಮಿಡಾ ಅವರ ಬೋಧನಾ ಸಹಾಯಕ), ಬಿಜಾನ್ ಚಾನೆಲ್ ಆಂಡರ್ಸನ್ , ಗ್ರೇಸ್ ಕ್ಯಾಂಪ್ಬೆಲ್, ಎಲಿಷಾ ಚೋಯ್, ಎಮ್ಮಾ ಕ್ಲಾರ್ಕ್, ಜೆನ್ನಿ ಬೆತ್, ಕ್ರಿಸ್ಟಾ ಸ್ಮಿತ್, ಮಂಡಿಸಾ ಥಾಮಸ್, ಎಲಿಜಬೆತ್ ರೀಲಿ, ಎಸ್‌ಸಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ , ಬ್ಯಾಂಕ್ ನಿರ್ದೇಶಕರುಗಳಾದ ಎಂ.ವಾದಿರಾಜ ಶೆಟ್ಟಿ , ಶಶಿಕುಮಾರ್ ರೈ ಬಾಲ್ಯೋಟ್ಟು , ಸದಾಶಿವ ಉಳ್ಳಾಲ್, ಎಸ್.ಬಿ. ಜಯರಾಮ್ ರೈ, ಅಶೋಕ್ ಕುಮಾರ್ ಶೆಟ್ಟಿ, ಎಂ.ಮಹೇಶ್ ಹೆಗ್ಡೆ, ಕೆ.ಜೈರಾಜ್ ಬಿ ರೈ, ರಾಜೇಶ್ ರಾವ್, ಸದಾಶಿವ ಉಳ್ಳಾಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಶೆಟ್ಟಿ ಮತ್ತಿತರರಿದ್ದರು.ನವೋದಯ ಎಸ್‌ಎಸ್‌ಜಿ ಯಶಸ್ಸು ಅಧ್ಯಯನ: ಡಾ.ಎಂ.ಎನ್.ಆರ್.
ಅಮೆರಿಕದ ಖ್ಯಾತ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪ್ರೊ. ಫೆಮಿಡಾ ಹ್ಯಾಂಡಿ, ಅವರ ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ನೂತನ ವರ್ಷದ ಶುಭಾಶಯಗಳನ್ನು ತಿಳಿಸಿದ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಅವರೆಲ್ಲರನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ನವೋದಯ ಗ್ರಾಮ ವಿಕಾಸ ಚಾರಿಟಬಲ್ ಟ್ರಸ್ಟ್‌ಗೆ ಹೃತ್ಪೂರ್ವಕವಾಗಿ ಸ್ವಾಗತಿಸುವುದಾಗಿ ಹೇಳಿದರು.ಕಳೆದ 15 ವರ್ಷಗಳಿಂದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ತಂಡ ಪ್ರೊ. ಫೆಮಿಡಾ ಹ್ಯಾಂಡಿ ಅವರ ನೇತೃತ್ವದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಹಾಗೂ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ಗೆ ನಿರಂತರವಾಗಿ ಭೇಟಿ ನೀಡುತ್ತಿದೆ. ನವೋದಯ ಸ್ವಸಹಾಯ ಸಂಘಗಳ(ಎಸ್‌ಎಚ್‌ಜಿ) ಮೂಲಕ ಜಾರಿಗೊಳಿಸಿರುವ ಮಹಿಳಾ ಸಬಲೀಕರಣ ಹಾಗೂ ಸೂಕ್ಷ್ಮ ಹಣಕಾಸು (ಮೈಕ್ರೋ ಫೈನಾನ್ಸ್) ಮಾದರಿಯ ಯಶಸ್ಸನ್ನು ಅಧ್ಯಯನ ಮಾಡುತ್ತಿದೆ ಎಂದರು. ವಿಶ್ವದ ಅಗ್ರಗಣ್ಯ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ತಂಡದ ನಿರಂತರ ಭೇಟಿ, ಎಸ್‌ಸಿಡಿಸಿಸಿ ಬ್ಯಾಂಕ್ ಹಾಗೂ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ಗಳು ಗ್ರಾಮೀಣ ಮಟ್ಟದಲ್ಲಿ ನಡೆಸುತ್ತಿರುವ ನೈಜ ಹಾಗೂ ಪರಿಣಾಮಕಾರಿ ಕಾರ್ಯಗಳಿಗೆ ದೊರೆತ ಮಹತ್ವದ ಮಾನ್ಯತೆಯಾಗಿದೆ ಎಂದು ಡಾ. ರಾಜೇಂದ್ರ ಕುಮಾರ್ ಹೇಳಿದರು.ಇಂದಿನ ಸ್ಪರ್ಧಾತ್ಮಕ ಆರ್ಥಿಕ ಪರಿಸ್ಥಿತಿಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದೆ. ಜೊತೆಗೆ ನವೋದಯ ಸ್ವಸಹಾಯ ಸಂಘಗಳ ಮೂಲಕ ಗ್ರಾಮೀಣ ಮಹಿಳೆಯರ ಏಳಿಗೆಗಾಗಿ ಶ್ರಮಿಸುತ್ತಿರುವ ಕಾರ್ಯವೈಖರಿ ಪ್ರಶಂಸನೀಯವೂ ಆಗಿದೆ. ಇದಕ್ಕೆಲ್ಲ ಕಾರಣಕರ್ತರಾದ ಎಸ್‌ಸಿಡಿಸಿಸಿ ಬ್ಯಾಂಕಿನ ಅಭಿವೃದ್ಧಿ ರೂವಾರಿ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರಕುಮಾರ್ ಅವರು ತನ್ನ ಶ್ರೇಷ್ಠ ನಾಯಕತ್ವದಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಗೌರವ ಮನ್ನಣೆ ಗಳಿಸಿಕೊಂಡಿದ್ದಾರೆ.-ಪ್ರೊ. ಫೆಮಿಡಾ ಹ್ಯಾಂಡಿ, ಪೆನ್ಸಿಲ್ವೇನಿಯಾ ವಿವಿ ಅಮೆರಿಕಹಿಂದುಳಿದ ವರ್ಗಗಳ, ವಿಶೇಷವಾಗಿ ಮಹಿಳೆಯರ ಜೀವನಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಕೈಗೊಂಡಿರುವ ನಮ್ಮ ಮುಂದಾಳತ್ವಗಳನ್ನು ಗುರುತಿಸಿರುವುದಕ್ಕೆ ನಾನು ವಿನಮ್ರನಾಗಿದ್ದೇನೆ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಭವಿಷ್ಯದಲ್ಲಿ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಮತ್ತು ಎಸ್‌ಸಿಡಿಸಿಸಿ ಬ್ಯಾಂಕ್ ನಡುವಿನ ಈ ಶೈಕ್ಷಣಿಕ ಹಾಗೂ ಸಾಮಾಜಿಕ ಸಹಕಾರವನ್ನು ಇನ್ನೂ ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಆಶಯವಿದೆ.
-ಡಾ.ಎಂ.ಎನ್.ರಾಜೇಂದ್ರ ಕುಮಾರ್, ಅಧ್ಯಕ್ಷರು, ಎಸ್‌ಸಿಡಿಸಿಸಿ ಬ್ಯಾಂಕ್--------------