ಶ್ರೀರಾಮ್ ಫೈನಾನ್ಸ್ ಕಛೇರಿಗೆ ಬೆಂಕಿ: ಕಡತಗಳು ಭಸ್ಮ

| Published : Dec 26 2024, 01:05 AM IST

ಶ್ರೀರಾಮ್ ಫೈನಾನ್ಸ್ ಕಛೇರಿಗೆ ಬೆಂಕಿ: ಕಡತಗಳು ಭಸ್ಮ
Share this Article
  • FB
  • TW
  • Linkdin
  • Email

ಸಾರಾಂಶ

ಮೂಡಿಗೆರೆ, ಪಟ್ಟಣದ ಮೇಗಲಪೇಟೆ ಕೆನರಾ ಬ್ಯಾಂಕ್ ಇರುವ ಪಾರ್ವತಿ ಹೈಟ್ಸ್ ಕಟ್ಟಡಕ್ಕೆ ಆಕಸ್ಮಿಕ ಬೆಂಕಿ ತಗುಲಿದ್ದು, ಕಟ್ಟಡದಲ್ಲಿದ್ದ ಮೇಲಂತಸ್ತಿನಲ್ಲಿರುವ ಶ್ರೀರಾಮ್ ಫೈನಾನ್ಸ್ ಕಚೇರಿ ಬಹುತೇಕ ಸುಟ್ಟು ಭಸ್ಮವಾಗಿದೆ. ಮಂಗಳವಾರ ರಾತ್ರಿ ಸುಮಾರು 11 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ, ಮೂಡಿಗೆರೆ

ಪಟ್ಟಣದ ಮೇಗಲಪೇಟೆ ಕೆನರಾ ಬ್ಯಾಂಕ್ ಇರುವ ಪಾರ್ವತಿ ಹೈಟ್ಸ್ ಕಟ್ಟಡಕ್ಕೆ ಆಕಸ್ಮಿಕ ಬೆಂಕಿ ತಗುಲಿದ್ದು, ಕಟ್ಟಡದಲ್ಲಿದ್ದ ಮೇಲಂತಸ್ತಿನಲ್ಲಿರುವ ಶ್ರೀರಾಮ್ ಫೈನಾನ್ಸ್ ಕಚೇರಿ ಬಹುತೇಕ ಸುಟ್ಟು ಭಸ್ಮವಾಗಿದೆ. ಮಂಗಳವಾರ ರಾತ್ರಿ ಸುಮಾರು 11 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ.

ರಾತ್ರಿ ಸಮಯದಲ್ಲಿ ಕಟ್ಟಡದಿಂದ ಶಬ್ದ ಮತ್ತು ಹೊಗೆ ಬರುತ್ತಿರುವುದನ್ನು ಕಂಡ ಅಕ್ಕಪಕ್ಕದ ನಿವಾಸಿಗಳು ತಕ್ಷಣ ಕಟ್ಟಡದ ಮಾಲೀಕರು ಮತ್ತು ಅಗ್ನಿಶಾಮಕ ಕಚೇರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ವಾಹನ ಬರುವ ಹೊತ್ತಿಗಾಗಲೇ ಶ್ರೀರಾಮ್ ಫೈನಾನ್ಸ್ ಕಚೇರಿ ಬಹುತೇಕ ಸುಟ್ಟು ಕರಕಲಾಗಿದೆ. ಮೂಡಿಗೆರೆ ಅಗ್ನಿಶಾಮಕ ವಾಹನವಲ್ಲದೇ ಚಿಕ್ಕಮಗಳೂರಿನಿಂದಲೂ ಹೆಚ್ಚುವರಿ ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿ ಆಗಮಿಸಿ ಬೆಂಕಿನಂದಿಸುವ ಕಾರ್ಯದಲ್ಲಿ ನಿರತರಾದರು. ಅಂತಿಮವಾಗಿ ರಾತ್ರಿ ಸುಮಾರು 3 ಗಂಟೆ ಸಮಯಕ್ಕೆ ಸಂಪೂರ್ಣ ಬೆಂಕಿ ನಂದಿಸುವಲ್ಲಿ ಅಗ್ನಿ ಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮುಂಜಾಗೃತ ಕ್ರಮವಾಗಿ ಮೂಡಿಗೆರೆ ಪಟ್ಟಣದಾದ್ಯಂತ ವಿದ್ಯುತ್ ನಿಲುಗಡೆ ಮಾಡಲಾಗಿತ್ತು.

ಶ್ರೀರಾಮ್ ಫೈನಾನ್ಸ್ ಕಚೇರಿ ಕಡತಗಳು ಮತ್ತು ಪರಿಕರಗಳು ಸಂಪೂರ್ಣ ಭಸ್ಮವಾಗಿವೆ. ಲಾಕರ್ ನಲ್ಲಿದ್ದ ಹಣ ಮತ್ತು ಚಿನ್ನವನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗಿದೆ.

ಇದೇ ಕಟ್ಟಡದಲ್ಲಿ ಪಟ್ಟಣದ ಪ್ರಮುಖ ಬ್ಯಾಂಕ್ ಕೆನರಾ ಬ್ಯಾಂಕ್ ಸೇರಿದಂತೆ ವಿವಿಧ ಕಚೇರಿಗಳು, ಮನೆಗಳು ಇದ್ದವು. ಬೆಂಕಿ ಕೆನರಾ ಬ್ಯಾಂಕ್ ಸೇರಿದಂತೆ ಇಡೀ ಕಟ್ಟಡಕ್ಕೆ ವ್ಯಾಪಿಸುವ ಅಪಾಯ ಎದುರಾಗಿತ್ತು. ಕಟ್ಟಡದಲ್ಲಿದ್ದ ವಾಸವಾಗಿದ್ದ ಮನೆಗಳ ನಿವಾಸಿಗಳು ಮುಂಜಾಗ್ರತಾ ಕ್ರಮವಾಗಿ ಪ್ರಮುಖ ವಸ್ತುಗಳೊಂದಿಗೆ ಮನೆಯಿಂದ ಹೊರಗೆ ಬಂದಿದ್ದರು. ಬೆಂಕಿ ತಗುಲಿದ್ದ ಕಚೇರಿ ಮೇಲ್ಬಾಗದ ಮನೆಯಲ್ಲಿ ವೈದ್ಯರೊಬ್ಬರು ಬಾಡಿಗೆ ಯಿದ್ದರು. ಅವರ ಕುಟುಂಬವನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಕಟ್ಟಡದಲ್ಲಿ ಇರುವ ಮನೆಗಳ ನೆಲ ಮತ್ತು ಗೋಡೆಗಳು ಶಾಖದಿಂದ ಬಿಸಿಯಾಗಿದೆ. ಕೆನರಾ ಬ್ಯಾಂಕ್ ಕಚೇರಿಗೆ ಬೆಂಕಿ ತಗುಲಿದ್ದರೆ ಅಪಾರ ಪ್ರಮಾಣದ ನಷ್ಟ, ದಾಖಲೆ ನಷ್ಟ ಸಂಭವಿಸುತ್ತಿತ್ತು. ಸದರಿ ಕಟ್ಟಡ ಪಟ್ಟಣದ ಶಿವಪ್ರಕಾಶ್ ಅವರಿಗೆ ಸೇರಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅಥವಾ ಯುಪಿಎಸ್ ಹೀಟ್ ಆಗಿ ಬೆಂಕಿ ತಲುಗಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಸ್ಥಳೀಯ ನಿವಾಸಿಗಳ ಸಮಯಪ್ರಜ್ಞೆ ಮತ್ತು ಅಗ್ನಿಶಾಮಕ ಸಿಬ್ಬಂದಿಯ ಸಕಾಲಿಕ ಕಾರ್ಯದಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

25 ಕೆಸಿಕೆಎಂ 5ಮೂಡಿಗೆರೆಯಲ್ಲಿರುವ ಶ್ರೀರಾಮ ಫೈನಾನ್ಸ್‌ ಕಚೇರಿಯಲ್ಲಿ ಬೆಂಕಿಯಿಂದಾಗಿ ದಟ್ಟವಾದ ಹೊಗೆ ಆವರಿಸಿರುವುದು.