ಗುರು, ಲಿಂಗ, ಜಂಗಮ ಇವುಗಳಲ್ಲಿ ಯಾವುದು ಮಹತ್ತರವಾದುದು..? ಸೃಷ್ಟಿ, ಲಯ ಮತ್ತು ಸ್ಥಿತಿಯಲ್ಲಿ ಗುರು ಮಹತ್ತರವಾಗಿದ್ದಾನೆ. ಭಗವಂತನನ್ನು ಅರಿಯಬೇಕಾದರೆ ಗುರುವಿನ ಸಾಮೀಪ್ಯ ಬೇಕು. ದರ್ಶನ ಬೇಕು. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ದಾಸರು ಹೇಳಿದ್ದಾರೆ ಎಂದು ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಸ್ವಾಮೀಜಿ ಹೇಳಿದರು.

ಹಾವೇರಿ: ಗುರು, ಲಿಂಗ, ಜಂಗಮ ಇವುಗಳಲ್ಲಿ ಯಾವುದು ಮಹತ್ತರವಾದುದು..? ಸೃಷ್ಟಿ, ಲಯ ಮತ್ತು ಸ್ಥಿತಿಯಲ್ಲಿ ಗುರು ಮಹತ್ತರವಾಗಿದ್ದಾನೆ. ಭಗವಂತನನ್ನು ಅರಿಯಬೇಕಾದರೆ ಗುರುವಿನ ಸಾಮೀಪ್ಯ ಬೇಕು. ದರ್ಶನ ಬೇಕು. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ದಾಸರು ಹೇಳಿದ್ದಾರೆ ಎಂದು ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಸ್ವಾಮೀಜಿ ಹೇಳಿದರು.

ಅವರು ಹುಕ್ಕೇರಿಮಠದ ಜಾತ್ರಾ ಮಹೋತ್ಸವ ಪ್ರಯುಕ್ತ ನಡೆಯುತ್ತಿರುವ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಡಿಕೆ ತಯಾರಿಸಲು ಮಣ್ಣು ಬೇಕು. ಆಭರಣ ತಯಾರಿಸಲು ಬಂಗಾರ ಬೇಕು. ಮುಕ್ತಿ ದೊರೆಯಲು ಗುರು ಬೇಕು. ಗುರುವಿನ ಕರುಣೆಗಾಗಿ ಶಿಷ್ಯ ಹಂಬಲಿಸಬೇಕು. ಸುಗಂಧವನ್ನು ಅರಿಸಿ ದುಂಬಿಗಳು ಬರುವಂತೆ, ಯೋಗ್ಯ ಗುರುವನ್ನು ಶಿಷ್ಯ ಹುಡುಕಿಕೊಂಡು ಹೋಗಬೇಕು. ಸೂರ್ಯನಿಲ್ಲದೇ ಬೆಳಕು ಹೇಗೆ ಹರಿಯುವುದಿಲ್ಲವೂ ಹಾಗೇ ಗುರುವಿಲ್ಲದೇ ಅಂತರಾತ್ಮ ಅರಳಲು ಸಾಧ್ಯವಿಲ್ಲ.ಸಂತ ಕಬೀರದಾಸ ಹೇಳುವಂತೆ, ದೇವರು ಮತ್ತು ಗುರು ಏಕಕಾಲಕ್ಕೆ ನನ್ನ ಮುಂದೆ ಬಂದರೆ ಮೊದಲು ನಾನು ಗುರುವಿಗೆ ನಮಸ್ಕರಿಸುತ್ತೇನೆ. ಏಕೆಂದರೆ ದೇವರನ್ನು ತೋರಿದವನೇ ಗುರು ಎನ್ನುತ್ತಾರೆ. ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದ, ಗುರುಗೋವಿಂದ ಭಟ್ಟ ಮತ್ತು ಶಿಶುನಾಳ ಶರೀಫ ಇಂಥಹ ಗುರು ಶಿಷ್ಯ ಪರಂಪರೆಯನ್ನು ಹೊಂದಿದ ದೇಶ ನಮ್ಮದು. ನರನು ಹರನಾಗಲು ಗುರು ಬೇಕು. ನಮ್ಮ ಅಜ್ಞಾನ ಕಳೆದು, ಪಾರಮಾರ್ಥಿಕ ಹಾಗೂ ಆಧ್ಯಾತ್ಮದ ಔನತ್ಯಕ್ಕೆ ಗುರು ದರ್ಶನವಾಗಬೇಕು. ಗುರುವೇ ಪರಬ್ರಹ್ಮದ ಸಾಕ್ಷಾತ್ಕಾರ. ಅಂತಿಮ ಸತ್ಯದ ಪ್ರತಿನಿಧಿ ಗುರು. ಅದಕ್ಕಾಗಿ ಶಿವಶರಣರು ಹೇಳಿದ್ದು ಗುರು ದೈವ ಪರಮ್ ನಾಸ್ತಿ, ಶಿವಪಥವನರಿವಡೆ ಗುರು ಪಥವೇ ಮೊದಲು.