ನ್ಯಾಮತಿ ಎಸ್‌ಬಿಐ ದರೋಡೆ ನಡೆಸಿದ್ದ ಐವರು ಸೆರೆ

| Published : Mar 28 2025, 12:32 AM IST

ಸಾರಾಂಶ

ಕಗ್ಗಂಟಾಗಿದ್ದ ನ್ಯಾಮತಿ ಪಟ್ಟಣದ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣ ಬೇಧಿಸಿ, ತಮಿಳುನಾಡು ಮೂಲದ ಇಬ್ಬರು ಸೇರಿದಂತೆ ಐವರು ದರೋಡೆಕೋರರನ್ನು ಬಂಧಿಸಿ, 220 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಹೇಳಿದ್ದಾರೆ.

- ಬೇಕರಿ ನಡೆಸುತ್ತಿದ್ದ ತಮಿಳುನಾಡಿನ ಮೂವರು ಸೂತ್ರದಾರರು: ಎಸ್‌ಪಿ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಕಗ್ಗಂಟಾಗಿದ್ದ ನ್ಯಾಮತಿ ಪಟ್ಟಣದ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣ ಬೇಧಿಸಿ, ತಮಿಳುನಾಡು ಮೂಲದ ಇಬ್ಬರು ಸೇರಿದಂತೆ ಐವರು ದರೋಡೆಕೋರರನ್ನು ಬಂಧಿಸಿ, 220 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಹೇಳಿದರು.

ನಗರದ ಎಸ್‌ಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡು ಮೂಲದ ವಿಜಯಕುಮಾರ, ಅಜಯಕುಮಾರ ಹಾಗೂ ನ್ಯಾಮತಿ- ಹೊನ್ನಾಳಿಯವರಾದ ಅಭಿಷೇಕ, ಮಂಜುನಾಥ, ಚಂದ್ರು ಬಂಧಿತರು. ತಮಿಳುನಾಡು ಮೂಲಕ ಮತ್ತೊಬ್ಬ ಆರೋಪಿ ಪರಮಾನಂದನ ಶೋಧಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ನ್ಯಾಮತಿ ಪಟ್ಟಣದಲ್ಲಿ ತಮಿಳುನಾಡು ಮೂಲದ ವಿಜಯಕುಮಾರ, ಅಜಯಕುಮಾರ ಹಾಗೂ ಪರಮಾನಂದ ಅನೇಕ ವರ್ಷಗಳಿಂದ ಬೇಕರಿ ನಡೆಸುತ್ತಿದ್ದರು. ಈ ಮೂವರ ಜೊತೆಗೆ ನ್ಯಾಮತಿ, ಹೊನ್ನಾಳಿಯವರಾದ ಅಭಿಷೇಕ, ಮಂಜುನಾಥ ಹಾಗೂ ಚಂದ್ರು ಸೇರಿಕೊಂಡು ಕಳೆದ ನವೆಂಬರ್ ತಿಂಗಳಲ್ಲಿ ನ್ಯಾಮತಿ ಬ್ಯಾಂಕ್ ದರೋಡೆ ಮಾಡಿದ್ದರು ಎಂದರು.

ಎಸ್‌ಬಿಐ ನ್ಯಾಮತಿ ಶಾಖೆಯಲ್ಲಿ 22 ಕೆ.ಜಿ. ಚಿನ್ನ ಸೇರಿದಂತೆ ಇತರೆ ವಸ್ತು ಕಳುವಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದರೋಡೆಕೋರರ ಪತ್ತೆಗೆ ಇಲಾಖೆ ಅನೇಕ ತಂಡಗಳನ್ನು ರಚಿಸಲಾಗಿತ್ತು. ಬೇರೆ ಬೇರೆ ರಾಜ್ಯಗಳಿಗೂ ತಂಡವು ದರೋಡೆಕೋರರ ಪತ್ತೆಗೆ ತೆರಳಿತ್ತು. ಇದೀಗ ತಾಂತ್ರಿಕ ಸಾಕ್ಷ್ಯಗಳನ್ನು ಆಧರಿಸಿ ಆರೋಪಿಗಳನ್ನು ಬಲೆಗೆ ಕೆಡವಲಾಗಿದೆ ಎಂದರು.

ಸದ್ಯಕ್ಕೆ ಐವರು ದರೋಡೆಕೋರರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ನಾಪತ್ತೆಯಾದ ಪರಮಾನಂದ ಹಾಗೂ 22 ಕೆಜಿ ಚಿನ್ನವನ್ನು ಎಲ್ಲಿಟ್ಟಿದ್ದಾರೆ ಎಂಬುದನ್ನು ನಾಳೆ ಒಳಗಾಗಿ ಬಾಯಿ ಬಿಡಿಸಿ, ಜಪ್ತಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ನ್ಯಾಮತಿ ಪಟ್ಟಣದ ಎಸ್‌ಬಿಐ ಬ್ಯಾಂಕ್ ಶಾಖೆ ಹಿಂಭಾಗದ ಕಾಡು ಹಾದಿಯಲ್ಲಿ ಸುಮಾರು 4 ಕಿಮೀ ದೂರದಿಂದ ಆರೂ ಜನ ದರೋಡೆಕೋರರು ನಡೆದುಕೊಂಡೇ ಬಂದಿದ್ದಾರೆ. ಸಾಕ್ಷ್ಯ ನಾಶಕ್ಕಾಗಿ ಕಾರದ ಪುಡಿಯನ್ನು ಹಾಕಿ, ಸಾಕ್ಷ್ಯ ಸಿಗಬಾರದೆಂಬ ಲೆಕ್ಕಾಚಾರವನ್ನು ದರೋಡೆಕೋರರು ಮಾಡಿದ್ದರು ಎಂದು ಎಸ್‌ಪಿ ಅವರು ತಿಳಿಸಿದರು.

ಐವರು ಬಂಧಿತರೂ ಇದೇ ಮೊದಲ ಸಲ ಬ್ಯಾಂಕ್ ದರೋಡೆ ಮಾಡಿದ್ದರೆಂಬ ವಿಚಾರ ಪ್ರಾಥಮಿಕ ವಿಚಾರಣೆಯಲ್ಲಿ ಕಂಡುಬಂದಿದೆ. ಆದರೂ, ಈ ಹಿಂದೆ ಎಲ್ಲಿಯಾದರೂ ಇಂತಹ ಕೃತ್ಯ ಎಸಗಿದ್ದರಾ ಎಂಬ ಬಗ್ಗೆಯೂ ವಿಚಾರಣೆ ನಡೆಸಿದ್ದೇವೆ. ಶೀಘ್ರವೇ ಈ ಬಗ್ಗೆ ಮತ್ತೊಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡುವುದಾಗಿ ಎಸ್‌ಪಿ ಉಮಾ ಪ್ರಶಾಂತ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

- - - -27ಕೆಡಿವಿಜಿ3.ಜೆಪಿಜಿ: ಉಮಾ ಪ್ರಶಾಂತ, ಜಿಲ್ಲಾ ಎಸ್‌ಪಿ