ಹುಬ್ಬಳ್ಳಿ:
ಉತ್ತರ ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆಗೆ ವೇಗ ನೀಡಬೇಕಾದರೆ ಸರ್ಕಾರ ಉದ್ಯಮಸ್ನೇಹಿ ನೀತಿ ಹಾಗೂ ವಿಶೇಷ ರಿಯಾಯಿತಿ ಘೋಷಿಸಬೇಕು. ಇಚ್ಛಾಶಕ್ತಿಯ ಕೊರತೆಯಿಂದ ಧಾರವಾಡಕ್ಕೆ ಬರಬೇಕಿದ್ದ ಎಫ್ಎಂಸಿಜಿ ಕ್ಲಸ್ಟರ್ ಇನ್ನೂ ಸಾಕಾರಗೊಂಡಿಲ್ಲ. ಈ ವಿಷಯವನ್ನು ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.ನಗರದ ಖಾಸಗಿ ಹೋಟೆಲ್ನಲ್ಲಿ ಶನಿವಾರ ಉತ್ತರ ಕರ್ನಾಟಕ ಸಣ್ಣ ಕೈಗಾರಿಕಾ ಸಂಸ್ಥೆ (ಎನ್ಕೆಎಸ್ಎಸ್ಐ) ಆಯೋಜಿಸಿದ್ದ ಉದ್ಯಮ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಉತ್ತರ ಕರ್ನಾಟಕದ ಔದ್ಯಮಿಕ ಕ್ಷೇತ್ರ ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆ ಕಂಡಿಲ್ಲ ಎಂಬ ಕೊರಗು ಉದ್ಯಮಿಗಳಲ್ಲಿದೆ. ದೊಡ್ಡ ಉದ್ಯಮಗಳು ಈ ಭಾಗಕ್ಕೆ ಬಂದರೆ ಅವುಗಳ ಪೂರಕವಾಗಿ ನೂರಾರು ಸಣ್ಣ ಉದ್ಯಮಗಳು ಬೆಳೆಯಲಿವೆ. ಆದರೆ, ಕೈಗಾರಿಕಾ ವಸಾಹತುಗಳಲ್ಲಿ ಕಸ ನಿರ್ವಹಣೆ, ಇ-ಸ್ವತ್ತು, ವಿದ್ಯುತ್ ಸೇರಿದಂತೆ ಮೂಲಸೌಕರ್ಯಗಳ ಸಮಸ್ಯೆಗಳು ಇನ್ನೂ ಸಂಪೂರ್ಣವಾಗಿ ಬಗೆಹರಿದಿಲ್ಲ. ಇವುಗಳ ನಿವಾರಣೆಗೆ ಕ್ರಮ ಕೈಗೊಳ್ಳಬೇಕಿದೆ. ಯುವಕರು ಉದ್ಯೋಗ ಹುಡುಕುವವರಾಗದೆ, ಉದ್ಯೋಗ ನೀಡುವ ಉದ್ಯಮಿಗಳಾಗಿ ರೂಪುಗೊಳ್ಳಬೇಕು ಎಂದರು.ಉದ್ಯಮಿಗಳ ಒಗ್ಗಟ್ಟು ಅಗತ್ಯ:
ಎನ್ಕೆಎಸ್ಎಸ್ಐ ಅಧ್ಯಕ್ಷ ರಮೇಶ ಪಾಟೀಲ ಮಾತನಾಡಿ, ಉದ್ಯಮಿಗಳ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರಶಸ್ತಿ ನೀಡಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಪ್ರತಿಭಾವಂತ ಉದ್ಯಮಿಗಳಿದ್ದು, ಇಂತಹ ಗೌರವಗಳು ಯುವಕರಿಗೆ ಪ್ರೇರಣೆಯಾಗಲಿವೆ. ಮಹಿಳೆಯರೂ ಉದ್ಯಮ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ನಿಂಗಣ್ಣ ಬಿರಾದಾರ, ಪ್ರಶಸ್ತಿ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಗಿರೀಶ ಮಾನೆ ಮಾತನಾಡಿದರು. ಉದ್ಯಮಿ ಸಂಜಯ ಅರೋರಾ ವಿಶೇಷ ಉಪನ್ಯಾಸ ನೀಡಿದರು.
ಪ್ರಶಸ್ತಿ ಪ್ರದಾನ:ಔದ್ಯಮಿಕ ಕ್ಷೇತ್ರದ ಗಣನೀಯ ಸೇವೆಗಾಗಿ ಪುಷ್ಪಾ ಪಾಟೀಲ, ನಿರ್ಮಲಾ ಕೊಳ್ಳಿ, ಜಯಪ್ರಕಾಶ ಟೆಂಗಿನಕಾಯಿ, ವಿಠ್ಠಲ ಖಟಾವಕರ, ಪ್ರಭು ದಯಾಳ, ಡಾ. ಕೃಷ್ಣ ಕುಲಕರ್ಣಿ, ಶಿವಪ್ಪ ದೇವರಗುಡಿ, ರಮೇಶ ನಾಯಕ, ಸುಧೀರ ದರೇಕರ, ಚಂದ್ರಕಾಂತ ವಿ, ಪ್ರಿತೇಶ ವಿ.ಟಿ. ಹಾಗೂ ಎಂ.ಪಿ. ನಾಗರಾಜ ಅವರಿಗೆ ಉದ್ಯಮಿ ರತ್ನ ಮತ್ತು ಶ್ರೇಷ್ಠ ಉದ್ಯಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉದ್ಯಮಿಗಳಾದ ಎಂ.ವಿ. ಕರಮರಿ ಹಾಗೂ ಶಂಕರಣ್ಣ ಮುನವಳ್ಳಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಂಘದ ಪದಾಧಿಕಾರಿಗಳಾದ ವಿಜೇಶ ಸೈಗಲ್, ನಾಗೇಶ ರಿತ್ತಿ, ಪ್ರಶಾಂತ ಅಚಲಕರ, ಅಶೋಕ ಕೊಣ್ಣೂರ, ನರೇಂದ್ರ ಕುಲಕರ್ಣಿ, ಮನೋಹರ ಕೊಟ್ಟೂರಶೆಟ್ರ, ಉದಯ ಪುರಾಣಿಕಮಠ, ಜಗದೀಶ ಮಠದ ಸೇರಿದಂತೆ ಹಲವರಿದ್ದರು.