ಸಾರಾಂಶ
ಬಸವಕೇಂದ್ರದ ಮುರುಘಾಮಠದಿಂದ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಗುರುವಾರ ಚಿತ್ರದುರ್ಗದ ಪ್ರಮುಖ ರಸ್ತೆಯಲ್ಲಿ ಜಾನಪದ ಕಲಾ ತಂಡಗಳು ಮೆರವಣಿಗೆ ನಡೆಸಿದವು.
ಚಿತ್ರದುರ್ಗ: ಬಸವಕೇಂದ್ರದ ಮುರುಘಾಮಠದಿಂದ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಗುರುವಾರ ಚಿತ್ರದುರ್ಗದ ಪ್ರಮುಖ ರಸ್ತೆಯಲ್ಲಿ ಜಾನಪದ ಕಲಾ ತಂಡಗಳು ಮೆರವಣಿಗೆ ನಡೆಸಿದವು.
ಪುಷ್ಪಾಲಂಕೃತ ಸಾರೋಟ್‌ನಲ್ಲಿ ಮುರುಗಿ ಶಾಂತವೀರ ಶ್ರೀಗಳ ಪುತ್ಥಳಿ ಇರಿಸಿ ಜಾನಪದ ಕಲಾ ತಂಡಗಳು ಸಾಗಿದವು. ಬೆಳಿಗ್ಗೆ 11 ಗಂಟೆಗೆ ಮುರುಘಾಮಠದ ಆವರಣದಲ್ಲಿ ರಾವಂದೂರು ಮೋಕ್ಷಪತಿ ಸ್ವಾಮಿಗಳು, ಡಾ.ಬಸವಪ್ರಭುಸ್ವಾಮಿಗಳು ಮೆರವಣಿಗೆಗೆ ಚಾಲನೆ ನೀಡಿದರು.ಕಲಾಮೇಳವು ಆರ್‌ಎಚ್ ಜಿನ್ನಿಂಗ್ ಫ್ಯಾಕ್ಟರಿಯಿಂದ ಹೊರಟು ಬಿ.ಡಿ.ರಸ್ತೆ, ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ಬಸವ ಮಂಟಪರಸ್ತೆ, ರಂಗಯ್ಯನ ಬಾಗಿಲು, ದೊಡ್ಡಪೇಟೆ ಮೂಲಕ ಮೇಲು ದುರ್ಗಕ್ಕೆ ಆಗಮಿಸಿತು. ಆರ್.ಎಚ್.ಜಿನ್ನಿಂಗ್ ಫ್ಯಾಕ್ಟರಿ ಬಳಿ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮುರುಗಿ ಶಾಂತವೀರ ಶ್ರೀಗಳ ಪುತ್ಥಳಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಣೆ ಮಾಡಿದರು. ಮುರಿಗಿ ಶಾಂತವೀರಸ್ವಾಮಿಗಳು ಬಸವಧರ್ಮ, ಸಮಾಜ, ಸಂಸ್ಕೃತಿಗಳ ಕಾರಣಕ್ಕಾಗಿ ಶ್ರಮಿಸಿದ ಮಹಾತಪಸ್ವಿಗಳಾಗಿದ್ದಾರೆ. ಬಸವಾದಿ ಶರಣರ ತತ್ವ ಸಂದೇಶಗಳನ್ನು ಉಳಿಸಿ ಬೆಳೆಸಿದ ಮಹಾನುಭಾವಿಗಳು ಅವರಾಗಿದ್ದು, ಆ ಕಾರಣಕ್ಕಾಗಿಯೇ ಅವರ ಪುತ್ಥಳಿಯನ್ನು ಶರಣ ಸಂಸ್ಕೃತಿ ಉತ್ಸವದಲ್ಲಿ ಮೆರವಣಿಗೆ ಮಾಡಲಾಗಿದೆ.
ನಾಡಿನ ಸಾಂಸ್ಕೃತಿಕ ವೈಭವವನ್ನು ಸೂಚಿಸುವ ವಿವಿಧ ರೀತಿಯ ಕಲಾತಂಡಗಳು, ಶರಣರ ವಚನಗಳನ್ನು ಬಿಂಬಿಸುವ ಚಿತ್ರಪಟಗಳು, ವೇಷ ಭೂಷಣಗಳನ್ನು ಹೊಂದಿರುವ ಕಲಾತಂಡಗಳು, ಬಸವಾದಿ ಶರಣರ ಭಾವಚಿತ್ರಗಳು ಶರಣ ಸಾಂಸ್ಕೃತಿಕ ಕಲಾಮೇಳ ಹಾಗೂ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ಕಲಾತಂಡಗಳಾದ ರಾಮ ಡೋಲ್, ಕತ್ತಿ ಗುರಾಣಿ ಕುಣಿತ, ಪುರುಷ ವಾದ್ಯ, ಮಹಿಳಾ ತಮಟೆ ವಾದ್ಯ, ಡ್ರಂಸೆಟ್ ವಾದ್ಯ, ಕರಡಿ ಚಮಾಳ ವಾದ್ಯ, ಡೊಳ್ಳು, ಟಕೂರಿ ವಾದ್ಯ, ತ್ರಾಶ್ ವಾದ್ಯ, ಡೊಳ್ಳು, ಕಹಳೆ ತಂಡ, ಬ್ರಾಸ್ ಬ್ಯಾಂಡ್, ಗಾರುಡಿ ಗೊಂಬೆ, ನಂದಿ ಕೋಲು ಸಮಾಳ, ಜಾಂಜ್ ಮೇಳ, ಡೊಳ್ಳು (ಪುರುಷ), ಲಂಬಾಣಿ ನೃತ್ಯ, ಕುರುಬರ ಡೊಳ್ಳು, ಜಗ್ಗಲಗಿ ಮೇಳ, ಮೇಳ ವಾದ್ಯ, ಝಾಂಜ ಪಥಕ, ಕೋಲಾಟ, ಡ್ರಂ ಸೆಟ್ಟ್, ನಾಸಿಕ್ ಡೊಲ್, ವೀರಭದ್ರ ಕುಣಿತ, ಗಾಡಿ ಗೊಂಬೆ, ನಾಸಿಕ್ ಡೋಲ್, ತಮಟೆ, ಮಹಿಳಾ ಡೊಳ್ಳು, ಡ್ರಂಸೆಟ್, ತಮಟೆ, ಗೊರವರ ಕುಣಿತ, ಡೊಳ್ಳು ಕುಣಿತ, ಹಲಿಗೆ ಮೇಳ, ನಾಸಿಕ್ ಡೋಲ್ ಮುಂತಾದ ಕಲಾತಂಡಗಳು ಭಾಗವಹಿಸಿದ್ದವು. ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದ ಸೌರಶಕ್ತಿಯಿಂದ ವಿದ್ಯುತ್ ಹನಿನೀರಾವರಿ, ಎಸ್‌ಜೆಎಂ ಆಂಗ್ಲ ಮಾಧ್ಯಮ ಶಾಲೆಯ ದುರ್ಗದ ಐತಿಹಾಸಿಕ ಸ್ಥಳ, ಎಸ್‌ಜೆಎಂ ರೆಸಿಡೆನ್ಷಿಯಲ್ ಶಾಲೆಯ ಪರಿಸರ ಮಾಲಿನ್ಯ ಜಾಗೃತಿ, ಜಲಸಂರಕ್ಷಣೆ, ಪ್ರಿಯದರ್ಶಿನಿ ಬಾಲಕಿಯರ ಪ್ರೌಢಶಾಲೆಯ ಒನಕೆ ಓಬವ್ವ, ಎಸ್‌ಜೆಎಂ ಪದವಿ ಪೂರ್ವ ಕಾಲೇಜು ಚಂದ್ರವಳ್ಳಿಯ ಕೂಡಲಸಂಗಮ, ಬಸವಣ್ಣನವರ ಐಕ್ಯಮಂಟಪ, ಎಸ್‌ಜೆಎಂ ಫಾರ್ಮಸ್ಸಿ ಕಾಲೇಜಿನ ಮೊಬೈಲ್ ಬಿಡಿ ಪುಸ್ತಕ ಹಿಡಿ, ಎಸ್‌ಜೆಎಂ ನರ್ಸಿಂಗ್ ಕಾಲೇಜಿನ ಅಂಗದಾನ, ಎಸ್‌ಜೆಎಂ ಪಾಲಿಟೆಕ್ನಿಕ್ ಕಾಲೇಜಿನ ಸೋಲಾರ್, ವೈದ್ಯಕೀಯ ಕಾಲೇಜಿನ ಆರೋಗ್ಯ ಕಾಳಜಿ, ದಂತ ಮಹಾವಿದ್ಯಾಲಯದ -ನಶೆ ಮುಕ್ತ ಅಭಿಯಾನ, ಮಹಿಳಾ ಕಾಲೇಜಿನ ಜೈಜವಾನ್, ಜೈಕಿಸಾನ್ ಗಾಂಧಿಯವರು ಮತ್ತು ಜಯದೇವ ಸ್ವಾಮಿಗಳ ಪ್ಲೆಕ್ಸ್, ಕಾನೂನು ಮಹಾವಿದ್ಯಾಲಯದ ಕಾನೂನು ಜಾಗೃತಿಯ ಬಗ್ಗೆ, ಬೃಹನ್ಮಠ ಪ್ರೌಢಶಾಲೆಯ ಬಸವಣ್ಣನವರ ಐಕ್ಯಮಂಟಪ, ಎಸ್‌ಜೆಎಂ ಕ್ರೆಡಿಟ್ ಕೊ ಆಪರೇಟೀವ್ ಸೊಸೈಟಿಯ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಪ್ರದರ್ಶನಗೊಂಡವು. ಮೇಳದಲ್ಲಿ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮಿಗಳು, ಮಾದಾರ ಚೆನ್ನಯ್ಯ ಸ್ವಾಮಿಗಳು, ಗುರುಮಠಕಲ್ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು, ಡಾ,ಬಸವ ರಮಾನಂದಸ್ವಾಮಿಗಳು, ಮಲ್ಲಿಕಾರ್ಜುನ ಸ್ವಾಮಿಗಳು, ಮುರುಘೇಂದ್ರ ಸ್ವಾಮಿಗಳು, ಸೇವಾಲಾಲ್ ಸ್ವಾಮಿಗಳು, ಗುರು ಮಹಾಂತ ಸ್ವಾಮಿಗಳು, ಆಡಳಿತ ಮಂಡಳಿ ಸದಸ್ಯರಾದ ಎಸ್.ಎನ್.ಚಂದ್ರಶೇಖರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಪಟೇಲ್ ಶಿವಕುಮಾರ್, ಕೆಇಬಿ ಷಣ್ಮುಖಪ್ಪ, ಸಿದ್ಧಾಪುರ ನಾಗಣ್ಣ, ಹರಗುರು ಚರಮೂರ್ತಿಗಳು, ಎಸ್‌ಜೆಎಂ ವಿದ್ಯಾಪೀಠದ ವಿವಿಧ ಸಂಸ್ಥೆಗಳ ಮುಖ್ಯಸ್ಥರುಗಳು, ವಿವಿಧಜಾತಿ, ಧರ್ಮದ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಪ್ರಮುಖ ರಸ್ತೆಯ ಇಕ್ಕೆಲಗಳಲ್ಲಿನಿಂತ ಭಕ್ತರು ಮುರಿಗಿ ಶಾಂತವೀರ ಶ್ರೀ ಪುತ್ಥಳಿಗೆ ನಮಿಸಿ ಭಕ್ತಿ ಸಮರ್ಪಣೆ ಮಾಡಿದರು.